ಸಾರಾಂಶ
ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಲ್ಲಿರುವಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಸಂಡೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಸಿ ರಣಕಹಳೆ ಮೊಳಗಿಸಿದ್ದಾರೆ.
ಬಳ್ಳಾರಿ : ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಲ್ಲಿರುವಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಸಂಡೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಸಿ ರಣಕಹಳೆ ಮೊಳಗಿಸಿದ್ದಾರೆ.
ಸಂಡೂರಿನಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸರ್ಕಾರಿ ಸಮಾರಂಭವು ಪ್ರತಿಪಕ್ಷ ಬಿಜೆಪಿ ವಿರುದ್ಧದ ವಾಗ್ದಾಳಿಗೆ ಸಾಕ್ಷಿಯಾಯಿತು. ರಾಜ್ಯ ಸರ್ಕಾರದ ಸಾಧನೆಯನ್ನು ಹೇಳುತ್ತಲೇ ಪ್ರತಿಪಕ್ಷ ವಿರುದ್ಧ ತೀವ್ರ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಕಾಂಗ್ರೆಸ್ ನಾಯಕರು ಉಪ ಚುನಾವಣೆಯ ಕದನಕ್ಕೆ ಈ ವೇದಿಕೆ ಮೂಲಕವೇ ರಣಕಹಳೆ ಮೊಳಗಿಸಿದರು.
ಪಟ್ಟಣದ ವಿಶ್ವಾಸ್ ಯು.ಲಾಡ್ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 500 ಮನೆಗಳ ಲೋಕಾರ್ಪಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಮಾತಿನ ಚಾಟಿ ಬೀಸಿದರು. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ, ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಸಂಡೂರು ಉಪ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ತುಕಾರಾಂ, ಕಾರ್ಮಿಕ ಸಚಿವ ಸಂತೋಷ್‌ಲಾಡ್ ಸೇರಿ ಸಮಾವೇಶಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಯಕರು, ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ಬರೀ ಸುಳ್ಳು ಹೇಳಿ ಜನರನ್ನು ವಂಚಿಸುವ ಬಿಜೆಪಿಯನ್ನು ಸೋಲಿಸಬೇಕು ಎಂದು ಆಗ್ರಹಿಸಿದರು.
ಹಾಲಿ ಸಂಸದ ತುಕಾರಾಂ ಅವರು ಈ ಹಿಂದೆ ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ತಂದಿರುವ ₹1200 ಕೋಟಿ ಬೃಹತ್ ಮೊತ್ತದ ಅನುದಾನ ಕುರಿತು ಪ್ರಸ್ತಾಪಿಸಿದ್ದಲ್ಲದೆ, ಕನಕಪುರಕ್ಕೂ ಸಿಗದ ಅನುದಾನ ಸಂಡೂರಿಗೆ ನೀಡಲಾಗಿದೆ. ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಸಂಡೂರಿನ ಜನ ಕಾಂಗ್ರೆಸ್‌ನ್ನು ಸದಾ ಕೈ ಹಿಡಿದು ನಡೆಸಿದ್ದೀರಿ. ಈ ಬಾರಿಯ ಉಪ ಚುನಾವಣೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಈ.ತುಕಾರಾಂ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಗೆ ಇಳಿಯಲು ಮನಸ್ಸಿರಲಿಲ್ಲ. ಶಾಸಕನಾಗಿಯೇ ಕೆಲಸ ಮಾಡಬೇಕು ಎಂಬ ಆಸೆ ಅವರಿಗಿತ್ತು. ಆದರೆ, ಶ್ರೀರಾಮುಲು ವಿರುದ್ಧ ಪ್ರಬಲ ಸ್ಪರ್ಧಿ ಯಾರಿದ್ದಾರೆಂದು ಚರ್ಚಿಸುವಾಗ ತುಕಾರಾಂ ಸೂಕ್ತ ವ್ಯಕ್ತಿ ಎಂದು ಬಲವಂತ ಮಾಡಿ ಸ್ಪರ್ಧಿಗಿಳಿಸಿದೆವು. ಜನರ ಆಶೀರ್ವಾದದಿಂದ ತುಕಾರಾಂ ಗೆದ್ದರು. ತುಕಾರಾಂ ಸಂಸದರಾಗಿದ್ದರೂ ಸಂಡೂರಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಇಲ್ಲಿಯೇ ಇದ್ದು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾರೆ. ಸಂತೋಷ್ ಲಾಡ್ ಹಾಗೂ ತುಕಾರಾಂ ಈ ಕ್ಷೇತ್ರದ ಪ್ರಗತಿ ಕಡೆ ಗಮನ ಹರಿಸಲಿದ್ದಾರೆ, ಜನರ ಜತೆಗಿರಲಿದ್ದಾರೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಂಡೂರು ಉಪ ಚುನಾವಣೆಗೆ ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಘೋಷಿಸದ ಹಿನ್ನೆಲೆಯಲ್ಲಿ ಕ್ಷೇತ್ರದ ಮಾಜಿ ಶಾಸಕ, ಹಾಲಿ ಸಂಸದ ಈ.ತುಕಾರಾಂ ಅವರ ಸಾಧನೆಯನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಉಪ ಚುನಾವಣೆಯ ರಣಕಹಳೆ ಮೊಳಗಿಸಿದರು.