ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಹುದ್ದೆಗೆ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಡ್ಡು ಹೊಡೆದಿರುವ ನಡುವೆಯೇ ಬಿಜೆಪಿ, ಹೊಸ ಮುಖ್ಯಮಂತ್ರಿಯ ಪಟ್ಟಾಭಿಷೇಕಕ್ಕೆ ಸಿದ್ಧತೆ ಆರಂಭಿದೆ. ರಾಜ್ಯದಲ್ಲಿ ತನಗೆ ಅಭೂತಪೂರ್ವ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಿಎಂ ಆಯ್ಕೆ ನಡೆಯಲಿದೆ ಹಾಗೂ ಶನಿವಾರ ಪ್ರಮಾಣವಚನ ಸ್ವೀಕಾರ ಏರ್ಪಾಟಾಗಿದೆ.

ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದೇ ಹೋದರೂ ಹೊಸ ಸಿಎಂ ಪ್ರಮಾಣ ವಚನ ಹೇಗಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದಾಗ್ಯೂ ಈ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದು ಎಂಬ ಆಶಾವಾದ ಬಿಜೆಪಿ ನಾಯಕರದ್ದು. ಹೀಗಾಗಿ ಬಿಜೆಪಿ ವೀಕ್ಷಕರಾಗಿ ನೇಮಕ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಕೋಲ್ಕತಾಗೆ ಆಗಮಿಸಲಿದ್ದಾರೆ. ಅಂದು ಸಂಜೆ ಪಕ್ಷದ ಉನ್ನತ ನಾಯಕರ ಜತೆ ಹಾಗೂ ಶುಕ್ರವಾರ ಶಾಸಕಾಂಗ ಸಭೆ ನಡೆಸಲಿದ್ದಾರೆ. ನಂತರ ಹೊಸ ಮುಖ್ಯಮಂತ್ರಿಯನ್ನು ಅಂತಿಮಗೊಳಿಸಿ, ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.

9ಕ್ಕೆ ಬ್ರಿಗೇಡ್ ಮೈದಾನದಲ್ಲಿ ಶಪಥ:

ಈ ನಡುವೆ, ಬುಧವಾರ ಮಾತನಾಡಿದ ಪ. ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ‘ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮೇ 9ರಂದು ನಡೆಯಲಿದೆ. ಕೋಲ್ಕತಾದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಬೆಳಿಗ್ಗೆ 10ರಿಂದ ಕಾರ್ಯಕ್ರಮ ಜರುಗಲಿದೆ’ ಎಂದು ತಿಳಿಸಿದ್ದಾರೆ.


ಪಕ್ಷದ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್‌ ಶಾ ಆದಿಯಾಗಿ ಘಟಾನುಘಟಿಗಳು ಪ್ರಮಾಣವಚನದಲ್ಲಿ ಭಾಗಿ ಆಗಲಿದ್ದಾರೆ.

ಐವರ ಹೆಸರು:

ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸತತ 2ನೇ ಬಾರಿ ಮಣಿಸಿರುವ ಸುವೇಂದು ಅಧಿಕಾರಿ, ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಸಮಿಕ್‌ ಭಟ್ಟಾಚಾರ್ಯ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌, ಮಹಿಳಾ ನಾಯಕರಾದ ಅಗ್ನಿಮಿತ್ರಾ ಪೌಲ್‌ ಮತ್ತು ‘ಮಹಾಭಾರತ’ ಧಾರಾವಾಹಿಯ ದ್ರೌಪದಿ ಖ್ಯಾತಿಯ ರೂಪಾ ಗಂಗೂಲಿ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ.

ಅಧಿಕಾರಿ ಅವರಿಗೆ ಆರೆಸ್ಸೆಸ್‌ ಹಿನ್ನೆಲೆ ಇಲ್ಲ. ಇದು ಅವರಿಗೆ ಮೈನಸ್‌ ಪಾಯಿಂಟ್ ಆಗಿದೆ. ಹೀಗಾಗಿ ಆರೆಸ್ಸೆಸ್ ಏನು ಸಲಹೆ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ. ದಿಲೀಪ್ ಘೋಷ್‌ ಆರೆಸ್ಸೆಸ್‌ ಹಿನ್ನೆಲೆಯವರಾಗಿದ್ದು, ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಮೀಸಲು ಹೋರಾಟದ ಹಿನ್ನೆಲೆಯಲ್ಲಿ ಮಹಿಳಾ ಸಿಎಂ ಆಯ್ಕೆ ಆದರೂ ಆಗಬಹುದು. ಆದರೆ ಈ ಸಾಧ್ಯತೆ ಬಲು ಕಡಿಮೆ ಎಂದು ಅವು ಹೇಳಿವೆ.

ಮುಂದಿನ ದಾರಿ ಏನು?

1. ಪಟ್ಟು ಬಿಟ್ಟು ಸಿಎಂ ಸ್ಥಾನಕ್ಕೆ ಮಮತಾ ರಾಜೀನಾಮೆ ನೀಡಿ, ಹೊಸ ಸರ್ಕಾರ ರಚನೆಗೆ ಅವಕಾಶ

2. ರಾಜೀನಾಮೆ ನೀಡದಿದ್ದರೆ ತಮ್ಮ ಅಧಿಕಾರ ಬಳಸಿ ರಾಜ್ಯಪಾಲರೇ ಸ್ವತಃ ವಜಾ ಮಾಡಬಹುದು

3. ಸೀಮಿತ ಅವಧಿಗೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ಶಿಫಾರಸು ಸಂಭವ

4. ಸೋತ ಮಮತಾಗೆ ಅಧಿಕಾರವಿಲ್ಲವೆಂದು ಸಡ್ಡು ಹೊಡೆದು ಬಿಜೆಪಿ ಹೊಸ ಸರ್ಕಾರ ರಚಿಸಬಹುದು