ಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಬುಧವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಬುಧವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ ಸಂಖ್ಯಾಬಲ ಕೊರತೆಯು ಗುರುವಾರ ಅವರು ಪ್ರಮಾಣ ವಚನ ಸ್ವೀಕರಿಸುವ ಆಸೆಗೆ ತಣ್ಣೀರೆರಚಿದ್ದು, ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಂದೇನು ಎಂಬ ಕುತೂಹಲ ಕೆರಳಿಸಿದೆ.

5 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ 107 ಶಾಸಕರು ಹಾಗೂ ಕಾಂಗ್ರೆಸ್‌ನ 5 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ವಿಜಯ್‌ ನೀಡಿದರು ಎಂದು ತಿಳಿದುಬಂದಿದೆ. ಆದರೆ ಇನ್ನೂ 6 ಶಾಸಕರ ಬೆಂಬಲದ ಕೊರತೆ ಟಿವಿಕೆಗೆ ಇದೆ. ಇದನ್ನು ಗಮನಿಸಿದ ರಾಜ್ಯಪಾಲರು, ‘118 ಶಾಸಕರ ಬೆಂಬಲದೊಂದಿಗೆ ಬನ್ನಿ’ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸುವ ವಿಜಯ್‌ ಆಸೆ ಭಗ್ನವಾಗಿದೆ ಎನ್ನಲಾಗಿದೆ.

ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್, ‘ಏಕೈಕ ದೊಡ್ಡ ಪಕ್ಷವಾದ ಟಿವಿಕೆಗೆ ರಾಜ್ಯಪಾಲರು ಆಹ್ವಾನ ನೀಡಬೇಕು. ಬಲಾಬಲ ಪ್ರದರ್ಶನ ಸದನದಲ್ಲಿ ನಡೆಯಬೇಕೇ ವಿನಾ ರಾಜಭವನದಲ್ಲಿ ಅಲ್ಲ. ಅದು ಬಿಟ್ಟು ಉದ್ದೇಶಪೂರ್ವಕವಾಗಿ ಅಡ್ಡಿ ಮಾಡುವುದು ಸಲ್ಲದು’ ಎಂದಿದೆ.

ಬಲಾಬಲ ಹೇಗೆ?:

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಜಯ್‌ 2 ಸ್ಥಾನದಲ್ಲಿ ಗೆದ್ದ ಕಾರಣ ಅದರ ವಾಸ್ತವಿಕ ಬಲ 107. ಸರ್ಕಾರ ರಚಿಸಲು 118 ಸ್ಥಾನಗಳು ಬೇಕಿದ್ದು, 11 ಶಾಸಕರ ಕೊರತೆ ಎದುರಿಸುತ್ತಿದೆ. ಬುಧವಾರ ಕಾಂಗ್ರೆಸ್‌ನ 5 ಶಾಸಕರ ಬೆಂಬಲದೊಂದಿಗೆ ಟಿವಿಕೆ ಬಲ 112ಕ್ಕೇರಿದೆ.

ಟಿವಿಕೆಯ108 ಹಾಗೂ ಕಾಂಗ್ರೆಸ್‌ನ 5 ಶಾಸಕರನ್ನು ಹೊರತುಪಡಿಸಿದರೆ ಡಿಎಂಕೆ 59, ಎಐಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ವಿಸಿಕೆ 2, ಸಿಪಿಐ-ಎಂ 2. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ 1 ಸ್ಥಾನ ಹೊಂದಿವೆ.

ಕಗ್ಗಂಟು ಆಗಿದ್ದು ಇಲ್ಲಿ:

ಟಿವಿಕೆಗೆ ಕಾಂಗ್ರೆಸ್‌ನ 5 ಶಾಸಕರು ಬೆಂಬಲ ನೀಡಿದ್ದರೂ ಬಹುಮತಕ್ಕೆ ಇನ್ನೂ 6 ಶಾಸಕರು ಬೇಕು. ಆದರೆ ಬೆಂಬಲ ನೀಡಲು ಕಾಂಗ್ರೆಸ್‌ +ಡಿಎಂಕೆ ಕೂಟದ ಪಕ್ಷಗಳಾದ ಎಡರಂಗದ 4 ಹಾಗೂ ಮುಸ್ಲಿಂ ಲೀಗ್‌ನ (ಐಯುಎಂಎಲ್‌) 2 (ಒಟ್ಟು 6) ಶಾಸಕರು ನಿರಾಕರಿಸಿದ್ದಾರೆ. ಇನ್ನು 2 ಶಾಸಕರನ್ನು ಹೊಂದಿರುವ ವಿಸಿಕೆ ಇದುವರೆಗೆ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಸರ್ಕಾರ ರಚಿಸಲು ವಿಜಯ್‌ಗೆ ಭಾರೀ ಕಗ್ಗಂಟು ಎದುರಾಗಿದೆ.