ಬೆಂಗಳೂರು : ಪಶ್ಚಿಮ ಬಂಗಾಳದಂತೆಯೇ ಕರ್ನಾಟಕದಲ್ಲೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ಮನೆಗೆ ಹೋಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಸೋಮವಾರ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪಾಠ ಕಲಿಯಬೇಕಿದೆ. ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು, ಜನರ ಮೇಲೆ ತೆರಿಗೆಗಳ ಹೊರೆ ಹೇರಿ, ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಲಿದೆ ಎಂಬುದು ಸ್ಪಷ್ಟವಾಗಿದೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ಉತ್ತರ

ರೈತರ ಆತ್ಮಹತ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು, ಬೆಂಗಳೂರಿನಲ್ಲಿ ಮಳೆಯಿಂದಾಗಿ ಜೀವಹಾನಿ, ಸಾರಿಗೆ ನೌಕರರು ಸೇರಿದಂತೆ ಎಲ್ಲ ಸಿಬ್ಬಂದಿಗೆ ವೇತನ ಬಾಕಿ, ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹೀಗೆ ಅನೇಕ ತಪ್ಪುಗಳ ಮೂಲಕ ಕಾಂಗ್ರೆಸ್‌ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಆಡಳಿತದ ಕಡೆಗೆ ಗಮನ ಕೊಡದೆ ಸಿಎಂ ಕುರ್ಚಿ ಕಚ್ಚಾಟದಲ್ಲೇ ನಿರತರಾಗಿರುವ ಕಾಂಗ್ರೆಸ್‌ ನಾಯಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದರು.


ಮೋದಿ ಅವರ ಅಭಿವೃದ್ಧಿಯ ಆಡಳಿತಕ್ಕಾಗಿ ಗೆಲ್ಲಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಆಡಳಿತಕ್ಕಾಗಿ ಹಾಗೂ ದೇಶದ ಸುಭದ್ರತೆಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಈ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್‌ ಮುಕ್ತವಾಗುವ ಲಕ್ಷಣ ಕಂಡುಬಂದಿದೆ. ದೇಶವನ್ನು ಭದ್ರವಾಗಿ ಇಡಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮುಕ್ತ ದೇಶವಾಗಲು ಸಿದ್ಧತೆ ನಡೆದಿದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.