ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನೊಂದಿಗೆ ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳುತ್ತಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಇದೀಗ ಪಶ್ಚಿಮ ಬಂಗಾಳ, ಗಂಗಾ ಮಾತೆಯ ಸುತ್ತಮುತ್ತಲಿನ ಈ ಎಲ್ಲ ರಾಜ್ಯಗಳಲ್ಲೂ ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಸ ವ್ಯಕ್ತಪಡಿಸಿದ್ದಾರೆ.

ಪ. ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಸಂಜೆ ಬಂಗಾಳಿ ಧೋತಿ ಧರಿಸಿ ಅವರು ಪಕ್ಷದ ಮುಖ್ಯ ಕಚೇರಿಗೆ ಆಗಮಿಸಿದರು. ಆ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ವಿಜಯೋತ್ಸವ ಭಾಷಣ ಮಾಡಿದ ಮೋದಿ, ‘ಇದು ದೇಶಕ್ಕೆ ಉಜ್ವಲ ಭವಿಷ್ಯವನ್ನು ಸೂಚಿಸುವುದರಿಂದ ಹಲವು ವಿಧಗಳಲ್ಲಿ ವಿಶೇಷ ದಿನವಾಗಿದೆ. ಇದು ಭಾರತದ ಮಹಾನ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಕಾರ್ಯಕ್ಷಮತೆಯ ರಾಜಕೀಯದಲ್ಲಿ ನಂಬಿಕೆ, ಸ್ಥಿರತೆಯ ಸಂಕಲ್ಪದಲ್ಲಿ ನಂಬಿಕೆ ಮತ್ತು ಏಕ ಭಾರತ-ಶ್ರೇಷ್ಠ ಭಾರತ ಎಂಬ ಚೈತನ್ಯದಲ್ಲಿ ನಂಬಿಕೆಯ ದಿನವಾಗಿದೆ. ನಾನು ಪ. ಬಂಗಾಳ, ಅಸ್ಸಾಂ, ಪುದುಚೇರಿ, ತಮಿಳುನಾಡು ಹಾಗೂ ಕೇರಳ ಜನತೆಗೆ ತಲೆ ಬಾಗುತ್ತೇನೆ’ ಎಂದರು.

ಗಂಗೋತ್ರಿಯಿಂದ ಗಂಗಾ ಸಾಗರದವರೆಗೆ ಕಮಲ:

‘ಇಂದು ಬಂಗಾಳದ ವಿಜಯದೊಂದಿಗೆ, ಗಂಗೋತ್ರಿಯಿಂದ ಗಂಗಾ ಸಾಗರದವರೆಗೆ ಕಮಲ ಅರಳುತ್ತಿದೆ. ಗಂಗಾಮಾತೆಯ ಸುತ್ತಮುತ್ತಲಿನ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ’ ಎಂದು ಸಂತಸ ವ್ಯಕ್ತಪಡಿಸಿದರು.


ಭಯದ ಬದಲು ಪ್ರಜಾಪ್ರಭುತ್ವಕ್ಕೆ ಜಯ:

‘ಪಶ್ಚಿಮ ಬಂಗಾಳದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಯದ ಬದಲು ಪ್ರಜಾಪ್ರಭುತ್ವ ಗೆದ್ದಿದೆ. ಬಂಗಾಳದಲ್ಲಿ ಬಿಜೆಪಿ ಗೆದ್ದಿತೆಂದರೆ, ಅಲ್ಲಿ ಪ್ರತೀಕಾರದ ಬದಲು ಬದಲಾವಣೆ ಮತ್ತು ಭಯದ ಬದಲು ಭವಿಷ್ಯದ ಮಾತಿರಬೇಕು. ಪ್ರಜಾಪ್ರಭುತ್ವ ಮತ್ತು ರಾಜಕೀಯದಲ್ಲಿ ಗೆಲುವು ಮತ್ತು ಸೋಲು ಸಹಜ. ಆದರೆ 5 ರಾಜ್ಯಗಳ ಜನರು ಭಾರತವು ಏಕೆ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ವರ್ಷಗಳ ತಪಸ್ಸು ಸಾರ್ಥಕ:

‘ನಮಗೆ ಪ್ರಜಾಪ್ರಭುತ್ವ ಕೇವಲ ಒಂದು ವ್ಯವಸ್ಥೆಯಲ್ಲ, ಅದು ನಮ್ಮ ರಕ್ತನಾಳಗಳಲ್ಲಿ ಹರಿಯುವ ಸಂಪ್ರದಾಯಗಳ ನದಿ. ಇಂದು, ಭಾರತದ ಪ್ರಜಾಪ್ರಭುತ್ವ ಜಯ ಗಳಿಸಿದೆ ಮಾತ್ರವಲ್ಲ, ಭಾರತದ ಸಂವಿಧಾನವೂ ಜಯ ಗಳಿಸಿದೆ. ನಮ್ಮ ಸಾಂವಿಧಾನಿಕ ಸಂಸ್ಥೆಗಳ ಜೊತೆಗೆ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಜಯ ಗಳಿಸಿವೆ. ಇಂದು ಐತಿಹಾಸಿಕ, ಅಭೂತಪೂರ್ವ ದಿನ. ವರ್ಷಗಳ ತಪಸ್ಸು ಸಾಧನೆಯಾಗಿ ರೂಪುಗೊಂಡಾಗ ಮುಖದಲ್ಲಿ ಕಾಣಿಸಿಕೊಳ್ಳುವ ಸಂತೋಷವನ್ನು, ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಮುಖಗಳಲ್ಲಿ ನಾನು ನೋಡುತ್ತಿದ್ದೇನೆ’ ಎಂದು ನುಡಿದರು.

ಆಯೋಗದ ಸಿಬ್ಬಂದಿಗೆ ಅಭಿನಂದನೆ:

‘ಚುನಾವಣಾ ಆಯೋಗ, ಅದರ ಎಲ್ಲಾ ಸಿಬ್ಬಂದಿ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳಿಗೆ, ವಿಶೇಷವಾಗಿ ಭದ್ರತಾ ಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರೆಲ್ಲ ಚುನಾವಣೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಿಕೊಳ್ಳಲು ನೀವು ನೀಡಿದ ಕೊಡುಗೆಯನ್ನು ಇತಿಹಾಸವು ಯಾವಾಗಲೂ ನೆನಪಿಸಿಕೊಳ್ಳುತ್ತದೆ’ ಎಂದರು.

-ಗೆಲುವಿನ ಬಳಿಕ ಬಂಗಾಳಿ ಧೋತಿಯಲ್ಲಿ ಮಿಂಚಿದ ಪ್ರಧಾನಿ

-ಪಕ್ಷದ ಪ್ರಧಾನ ಕಚೇರೀಲಿ ಮೋದಿ ವಿಜಯೋತ್ಸವ ಭಾಷಣ

-ವರ್ಷಗಳ ನಮ್ಮ ತಪಸ್ಸು ಸಾಧನೆಯಾಗಿ ರೂಪುಗೊಂಡಿದೆ

-ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಘನತೆ ಕಾಪಾಡಿದೆ

-ಭಾರತದ ಪ್ರಜಾಪ್ರಭುತ್ವ, ಸಂವಿಧಾನಕ್ಕಿಂದು ಜಯ ಸಿಕ್ಕಿದೆ

-ಪಶ್ಚಿಮ ಬಂಗಾಳದಲ್ಲಿ ಭಯದ ಬದಲು ಪ್ರಜಾಪ್ರಭುತ್ವ ಗೆದ್ದಿದೆ