ಸಿದ್ದರಾಮಯ್ಯ ತಲೆದಂಡಕ್ಕೆ ‘ಮೈಸೂರು ಚಲೋ’ ಪಾದಯಾತ್ರೆ ಆರಂಭಿಸುವ ಮೂಲಕ ಬಿಜೆಪಿ-ಜೆಡಿಎಸ್‌ ದೋಸ್ತಿ ಕಹಳೆ

| Published : Aug 04 2024, 01:19 AM IST / Updated: Aug 04 2024, 04:35 AM IST

ಸಿದ್ದರಾಮಯ್ಯ ತಲೆದಂಡಕ್ಕೆ ‘ಮೈಸೂರು ಚಲೋ’ ಪಾದಯಾತ್ರೆ ಆರಂಭಿಸುವ ಮೂಲಕ ಬಿಜೆಪಿ-ಜೆಡಿಎಸ್‌ ದೋಸ್ತಿ ಕಹಳೆ
Share this Article
  • FB
  • TW
  • Linkdin
  • Email

ಸಾರಾಂಶ

  ‘ಮೈಸೂರು ಚಲೋ’ ಪಾದಯಾತ್ರೆ ಆರಂಭಿಸುವ ಮೂಲಕ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೊಡೆ ತಟ್ಟಿವೆ.

 ಬೆಂಗಳೂರು :  ಸುಮಾರು 14 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಸಂಬಂಧ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇದೀಗ ಅದೇ ಅಸ್ತ್ರ ಬಳಸಿ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ‘ಮೈಸೂರು ಚಲೋ’ ಪಾದಯಾತ್ರೆ ಆರಂಭಿಸುವ ಮೂಲಕ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೊಡೆ ತಟ್ಟಿವೆ.

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ದೋಸ್ತಿ ಪಕ್ಷದ ಮುಖಂಡರು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ಆರಂಭಿಸಿದ್ದು, ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಪಣತೊಟ್ಟರು. ಪಾದಯಾತ್ರೆಗೂ ಮುನ್ನ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್‌ನ ಪ್ರಮುಖರು ನಗಾರಿ ಬಾರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದರು.

ಶನಿವಾರ ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೆ.ಕೆ.ಗ್ರ್ಯಾಂಡ್‌ ಅರೆನಾ ಸೆಂಟರ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಾದಯಾತ್ರೆಗಾಗಿ ಕಾಂಗ್ರೆಸ್‌‍ ವಿರುದ್ಧ ರಚಿಸಿದ ಗೀತೆಯನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಉಭಯ ಪಕ್ಷಗಳ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಮಾವೇಶದಲ್ಲಿ ಒಗ್ಗಟ್ಟಿನ ಪ್ರದರ್ಶನ ತೋರಿದ ಬಿಜೆಪಿ-ಜೆಡಿಎಸ್‌ ನಾಯಕರು ಈ ಪಾದಯಾತ್ರೆ ಮುಕ್ತಾಯಗೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೇಂದ್ರ ಆಹಾರ ಮತ್ತು ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ಬಿಜೆಪಿ-ಜೆಡಿಎಸ್‌ನ ಇತರ ಮುಖಂಡರೆಲ್ಲರೂ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ಕೈಗೊಳ್ಳುವ ಮುನ್ನ ಶನಿವಾರ ಮುಂಜಾನೆಯೇ ವಿಜಯೇಂದ್ರ ಅವರು ತಮ್ಮ ಪತ್ನಿ ಜತೆ ಮೈಸೂರಿಗೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಯಶಸ್ವಿಗೊಳಿಸುವಂತೆ ಪ್ರಾರ್ಥಿಸಿದರು. ಈ ವೇಳೆ, ಪಕ್ಷದ ಕಾರ್ಯಕರ್ತರು ಜೊತೆಗಿದ್ದರು. ಬಳಿಕ ಬೆಂಗಳೂರಿಗೆ ವಾಪಸ್‌ ಬಂದು ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸ್ವಪಕ್ಷೀಯರ ವಿರುದ್ಧವೇ ತೊಡೆತಟ್ಟಿರುವ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಸಿ.ಟಿ.ರವಿ ಹೊರತುಪಡಿಸಿದರೆ ಇನ್ನುಳಿದ ಬಹುತೇಕ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತೀವ್ರ ಮಳೆಯಿಂದಾಗಿ ಜನರ ಸಂಕಷ್ಟದಲ್ಲಿ ಭಾಗಿಯಾಗಲು ಪಾದಯಾತ್ರೆ ಮುಂದೂಡಬೇಕೆಂಬ ನಿರ್ಣಯವನ್ನು ಬದಿಗಿಟ್ಟು ಜೆಡಿಎಸ್ ಪಕ್ಷದ ಮುಖಂಡರೂ ಪಾದಯಾತ್ರೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡರು.

ಮೊದಲ ದಿನದ ಪಾದಯಾತ್ರೆಯಲ್ಲಿ ವಿಜಯೇಂದ್ರ, ಅಶೋಕ್‌, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೊದಲಾದವರು ಸಕ್ರಿಯವಾಗಿ ಹೆಜ್ಜೆ ಹಾಕಿದರು. ಹಿರಿಯ ನಾಯಕರಾದ ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಮೊದಲಾದವರು ತುಸು ದೂರ ಸಾಥ್ ನೀಡಿದರು.

ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿಗೆ 128 ಕಿ.ಮೀ. ದೂರ ಚಲಿಸುವ ಪಾದಯಾತ್ರೆಯಲ್ಲಿ ಮೊದಲ ದಿನ ಶನಿವಾರದಂದು 16 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಾಯಿತು. ದಾರಿಯುದ್ದಕ್ಕೂ ಕೇಸರಿ, ಹಸಿರು ಬಾವುಟ ರಾರಾಜಿಸುತ್ತಿದ್ದವು. ಬಿಜೆಪಿ-ಜೆಡಿಎಸ್‌ನ ಪ್ರಮುಖ ಮುಖಂಡರು ಪಾದಯಾತ್ರೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು.

ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಂಡಿತು. ಬಿಡದಿಯ ಮಂಜುನಾಥ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಾಸ್ತವ್ಯ ಹೂಡಿದರು. ಭಾನುವಾರ ಎರಡನೇ ದಿನ ಅಲ್ಲಿಂದ ಪಾದಯಾತ್ರೆ ಮುಂದುವರಿಯಲಿದೆ.

ಇದಕ್ಕೂ ಮುನ್ನ ಕೆಂಗೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರು ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆಯ ಸುರಿಮಳೆಗೈದರು. ಪಾದಯಾತ್ರೆ ಮುಕ್ತಾಯವಾಗುವಷ್ಟರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಗೌರವಯುತವಾಗಿ ರಾಜೀನಾಮೆ ನೀಡಿ ನಿರ್ಗಮಿಸಬೇಕು ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರೆ, ಹಿಂದೆಂದೂ ಕಂಡಿರದಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದಲ್ಲಿ ಕಾಣುತ್ತಿದ್ದೇವೆ. ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಮೈಸೂರು ಚಲೋ ಪಾದಯಾತ್ರೆಯು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೊಗೆಯಲಿದೆ. ಆ ಶಕ್ತಿ ಪಾದಯಾತ್ರೆಗೆ ಇದೆ ಎಂದು ವಿಜಯೇಂದ್ರ ಹೇಳಿದರೆ, ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಸೂಚನೆಯಂತೆ ಮುಡಾ ಹಗರಣ ನಡೆದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರವಾಲ್‌ ಆರೋಪಿಸಿದರು.

ಪಾದಯಾತ್ರೆಯ ಯಶಸ್ಸಿಗಾಗಿ ವಿವಿಧ ಮೋರ್ಚಾಗಳ ಜೊತೆಗೆ ತಂಡಗಳು ರಚನೆಯಾಗಿವೆ. ಮೊದಲ ದಿನದ ಪಾದಯಾತ್ರೆಯನ್ನು ಯುವ ಮೋರ್ಚಾ ನಿರ್ವಹಿಸಿದೆ. ಕೆಂಗೇರಿಯಲ್ಲಿ ಉದ್ಘಾಟನೆ, ಮೈಸೂರಿನ ಸಮಾರೋಪ ಕಾರ್ಯಕ್ರಮ ಹೊರತುಪಡಿಸಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಗಳು ನಡೆಯಲಿವೆ. ‘ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಗೊಂಡಿದೆ. ಪ್ರತಿನಿತ್ಯ ಬೆಳಗ್ಗೆ 10 ಕಿ.ಮೀ. ಮತ್ತು ಮಧ್ಯಾಹ್ನ ಊಟದ ನಂತರ 10 ಕಿ.ಮೀ.ನಂತೆ ಪ್ರತಿದಿನ ಸರಾಸರಿ 20 ಕಿ.ಮೀ. ಕ್ರಮಿಸಲು ಉದ್ದೇಶಿಸಲಾಗಿದೆ.