ಸಾರಾಂಶ
ಕೋಲಾರ : ವಿರೋಧ ಪಕ್ಷಗಳ ಸರ್ಕಾರಗಳನ್ನು ಏನಾದರೂ ಒಂದು ನೆಪ ಒಡ್ಡಿ ಉರುಳಿಸುವ ದುಷ್ಟ ಆಟವನ್ನು ಬಿಜೆಪಿ ಮುಂದುವರಿಸುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಸಿಪಿಎಂ ರಾಜ್ಯ ಸಮಿತಿಯ ಸದಸ್ಯ ಡಾ.ಎಸ್.ವೈ.ಗುರುಶಾಂತ್ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸಿಪಿಎಂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜನಾದೇಶವನ್ನು ಧಿಕ್ಕರಿಸಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬುಡಮೇಲು ಮಾಡಿ ಅನೈತಿಕ ಮಾರ್ಗದಿಂದ ಅಧಿಕಾರ ಹಿಡಿಯುವ ಪ್ರಯತ್ನಗಳನ್ನು ಪ್ರತಿರೋಧಿಸಬೇಕು ಎಂದರು.
ಸರ್ಕಾರ ಉರುಳಿಸಲು ಯತ್ನ
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿನ ಹಿನ್ನಡೆಯನ್ನು ಅನುಭವಿಸಿದ ಬಿಜೆಪಿ ಜನತೆಯ ತೀರ್ಪಿನಿಂದ ಪಾಠ ಕಲಿಯದೇ ಹತಾಶೆಯನ್ನು ಅನುಭವಿಸುತ್ತಿದೆ. ಪ್ರಬಲ ವಿರೋಧ ಪಕ್ಷವಾಗಿ, ವಿರೋಧದ ಶಕ್ತಿಯಾಗಿರುವ ಇಂಡಿಯಾ ಒಕ್ಕೂಟದ ವಿರುದ್ಧ ಅದರ ಭಾಗಿದಾರ ಪಕ್ಷಗಳು, ಅವುಗಳ ನೇತೃತ್ವದ ಸರ್ಕಾರಗಳನ್ನು ಉರುಳಿಸುವ ಯತ್ನಗಳು ನಡೆಯುತ್ತಿವೆ ಎಂದರು.
ಬಿಜೆಪಿ ಕಾರ್ಪೊರೇಟ್ ಕಂಪನಿಗಳಿಗೆ ಬೆಂಬಲ ಮತ್ತು ಕೋಮುದ್ವೇಷದ ನೀತಿಗಳನ್ನು ಜಾರಿಗೊಳಿಸುತ್ತಿದೆ. ವೈವಿಧ್ಯತೆ, ಬಹುತ್ವದ ಉನ್ನತ ಭಾರತೀಯ ಪರಂಪರೆಗೆ ಮಸಿ ಬಳಿಯುವ, ಮತಾಂಧತೆ, ದ್ವೇಷದ ಆಧಾರದ ಹಿಂದುತ್ವದ ರಾಷ್ಟ್ರವನ್ನಾಗಿ ಭಾರತವನ್ನು ಘೋಷಿಸಲು ೨೦೨೫ ರ ಗುರಿ ಇರಿಸಿಕೊಂಡು ಸಂಘಪರಿವಾರ ಕ್ರಿಯೆಗೆ ಇಳಿದಿರುವುದನ್ನು ಗಮನಿಸಬೇಕು. ದೇಶದ ಸಂವಿಧಾನಾತ್ಮ ಅಡಿಪಾಯವನ್ನು ವಿದ್ವಂಸಗೊಳಿಸಲು ಅನುವು ಮಾಡಿದರೆ ಅದು ಮಹಾ ದುರಂತ ಎಂದು ಎಚ್ಚರಿಸಿದರು. ರಾಜ್ಯಪಾಲರ ಅಧಿಕಾರ ದುರ್ಬಳಕೆ
ಕರ್ನಾಟಕದಲ್ಲಿ ರಾಜ್ಯಪಾಲರನ್ನು ಬಳಸಿ ಪೂರ್ಣ ಬಹುಮತ ಇರುವ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಹೊರಟಿದೆ. ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಎರಡೂ ಸದನಗಳಲ್ಲಿ ಚರ್ಚೆಯಾಗಿ, ಸ್ವತಃ ಮುಖ್ಯಮಂತ್ರಿಗಳು ಖುದ್ದಾಗಿ ವಿಷಯಗಳನ್ನು ವಿವರಿಸಿ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚನೆ ಮಾಡಿದ್ದಾರೆ. ಆದರೂ ಖಾಸಗಿ ವ್ಯಕ್ತಿ ನೀಡಿದ ದೂರನ್ನು ಆಧರಿಸಿ ದೂರು ನೀಡಿದ ದಿನವೇ ಕ್ರಮ ಕೈಗೊಳ್ಳಲು ಶೋಕಾಸ್ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.
ಸರ್ಕಾರದ ಭಾಗವೇ ಆಗಿರುವ ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಬಳಸಲು ಇಷ್ಟು ಆತುರ ತೋರುತ್ತಿರುವುದು ಅರ್ಥವಾಗುತ್ತಿಲ್ಲ. ತೀವ್ರ ಭ್ರಷ್ಟಾಚಾರ, ದುರಾಡಳಿತದಿಂದ ತಿರಸ್ಕಾರಕ್ಕೀಡಾದ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ನಾಯಕರ ಭ್ರಷ್ಟಾಚಾರಗಳನ್ನು ಬಯಲಿಗೆಳೆದಿದ್ದ ಜೆಡಿಎಸ್ ಅವರೊಂದಿಗೇ ಹೆಜ್ಜೆ ಹಾಕುತ್ತಿರುವುದು ಸೋಜಿಗ. ಅಧಿಕಾರದಲ್ಲಿ ಇದ್ದರೆ ಮಾತ್ರವೇ ಪಕ್ಷ ಉಳಿಯುತ್ತದೆ ಎಂದೇ ನಂಬಿರುವ ಜೆ.ಡಿ.ಎಸ್ ಈ ದೃತರಾಷ್ಟ್ರ ಆಲಿಂಗನ ವಿನಾಶಕಾರಿಯಾಗಲಿದೆ ಎಂದರು.
ಜೆಡಿಎಸ್ ತಕ್ಕ ಬೆಲೆ ತೆರಲಿದೆ
ಜೆಡಿಎಸ್ ಬಳಸಿ ಒಕ್ಕಲಿಗ ಸಮುದಾಯದ ನಡುವೆ ಮಾನ್ಯತೆ ಗಳಿಸುವ ಕುತಂತ್ರವನ್ನು ಬಿಜೆಪಿ ಹೆಣೆದಿರುವುದರ ಬಗ್ಗೆ ಕುಮಾರಸ್ವಾಮಿ ಅರಿಯದಷ್ಟು ಮೂಢರೇನಲ್ಲ. ಆದರೆ ಅವರ ಸಂದರ್ಭ ಸಾಧಕ ರಾಜಕಾರಣಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಅದು ರಾಜ್ಯಕ್ಕೂ, ದೇಶಕ್ಕೂ ಎಸಗುವ ಅಪಾರ ಹಾನಿ ಎಂದರು.
ಸಭೆಯ ಅದ್ಯಕ್ಷತೆಯನ್ನು ಸಿಪಿಎಂ ತಾಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ವಹಿಸಿದ್ದರು. ಸದಸ್ಯ ವಿಜಯಕೃಷ್ಣ ಇದ್ದರು.