ದೋಸ್ತಿ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ರ್‍ಯಾಲಿ - ಸರ್ಕಾರ ಪತನ ಭ್ರಮೆ: ಕಾಂಗ್ರೆಸ್‌

| Published : Aug 04 2024, 01:15 AM IST / Updated: Aug 04 2024, 04:38 AM IST

ಸಾರಾಂಶ

‘ನಮ್ಮ ಪಕ್ಷದ ಒಬ್ಬ ಶಾಸಕನನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಬೀಳಿಸುತ್ತೇವೆ ಎಂಬುದು ಭ್ರಮೆ, ತಿರುಕನ ಕನಸು’ ಎಂದು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ 

 ರಾಮನಗರ :  ‘ನಮ್ಮ ಪಕ್ಷದ ಒಬ್ಬ ಶಾಸಕನನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಬೀಳಿಸುತ್ತೇವೆ ಎಂಬುದು ಭ್ರಮೆ, ತಿರುಕನ ಕನಸು’ ಎಂದು ಬಿಜೆಪಿ-ಜೆಡಿಎಸ್‌ ನಾಯಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಸಚಿವರು ಪಾದಯಾತ್ರೆ ವಿರುದ್ಧ ಹರಿಹಾಯ್ದಿದ್ದಾರೆ. ಸರ್ಕಾರ ಸುಭದ್ರವಾಗಿದೆ ಎಂದು ಸಾರಿದ್ದಾರೆ.

ಮುಡಾ ಹಗರಣ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ‘ಮೈಸೂರು ಚಲೋ’ಗೆ ಪ್ರತಿಯಾಗಿ ಕಾಂಗ್ರೆಸ್‌ ನಡೆಸುತ್ತಿರುವ ಸರಣಿ ಜನಾಂದೋಲನ ಸಮಾವೇಶ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಇದರಂಗವಾಗಿ ರಾಮನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಶನಿವಾರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಡಿಕೆಶಿ, ಸಚಿವರಾದ ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಕೆ.ಎಚ್‌.ಮುನಿಯಪ್ಪ, ಜಮೀರ್ ಅಹಮದ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಡಿಕೆಶಿ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಹರಿಹಾಯ್ದರು. ನವೆಂಬರ್, ಡಿಸೆಂಬರ್ ವೇಳೆಗೆ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಕೆಡವಿ ಒಡೆದು ಹೋಗಲು ಈ ಸರ್ಕಾರ ಮಡಕೆಯೇ ಎಂದು ಟಾಂಗ್ ನೀಡಿದರು.

ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಕುಮಾರಸ್ವಾಮಿಯವರೇ ಹೇಳಿದ್ದಾರೆ. ಅವರ ಉತ್ತರಕ್ಕಾಗಿ ಬಹಳ ನಮ್ರತೆಯಿಂದ ಕಾಯುತ್ತಿದ್ದೇನೆ. ಬಾಲಕೃಷ್ಣಗೌಡರ ಆಸ್ತಿಯಿಂದ ಆರಂಭಿಸಿ ಎಲ್ಲವನ್ನೂ ಹೇಳಲಿ. ಮೊದಲು ಆಸ್ತಿ ಎಷ್ಟಿತ್ತು? ಆನಂತರ ಎಷ್ಟಾಗಿದೆ? ಈಗ ಅದು ಎಷ್ಟಕ್ಕೆ ಏರಿಕೆಯಾಗಿದೆ? ಎಂದು ಹೇಳಬೇಕು ಎಂದು ಸವಾಲು ಹಾಕಿದರು.

ಪೆನ್‌ಡ್ರೈವ್ ಬಗ್ಗೆ ಮೌನವೇಕೆ?:

ಇದೇ ವೇಳೆ, ಬಿಜೆಪಿ ನಾಯಕರ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಡಿಕೆಶಿ, ಪೆನ್‌ಡ್ರೈವ್ ಅನ್ನು ಮಾಜಿ ಶಾಸಕ ಪ್ರೀತಂಗೌಡ ಹಂಚಿದ್ದಾನೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕರೇಕೆ ಚರ್ಚೆ ಮಾಡದೆ ಮೌನವಾಗಿದ್ದಾರೆ? ಕುಮಾರಸ್ವಾಮಿಯವರು ನಾನು ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ಕುಮಾರಸ್ವಾಮಿಯವರೇ ಈ ಪೆನ್‌ಡ್ರೈವ್ ಗಳನ್ನು ಬಿಟ್ಟಿರುವುದು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಎಂದು ಹೇಳಿದ್ದಾರೆ ಎಂದರು.

ಜೊತೆಗೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ಕಿಡಿಕಾರಿದ ಡಿಕೆಶಿ, ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎಂದು ವಿಜಯೇಂದ್ರ ಕರೆದಿದ್ದಾರೆ. ಹಾಗಿದ್ದರೆ, ನಿಮ್ಮ ತಂದೆ ಏನು ತಪ್ಪು ಮಾಡಿದ್ದರು? ಅವರು ವಿಧಾನಸೌಧದಲ್ಲಿ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದು ಏಕೆ? ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದೇಕೆ? ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಜೆಡಿಎಸ್ ಕಾರಣವಾಗಿದ್ದರ ಬಗ್ಗೆಯೂ ವಿಜಯೇಂದ್ರ ಉತ್ತರ ನೀಡಬೇಕು ಎಂದು ಸವಾಲೆಸೆದರು.ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯವರು ‘ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿನೋಟ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಈ ಬಗ್ಗೆ ವಿಜಯೇಂದ್ರ, ಯಡಿಯೂರಪ್ಪ, ಅಶೋಕ್‌, ಸಿ.ಟಿ ರವಿ ಉತ್ತರ ನೀಡಲಿ ಎಂದು ಆಗ್ರಹಿಸಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ - ಜೆಡಿಎಸ್‌ನವರದ್ದು ಪಾದಯಾತ್ರೆ ಅಲ್ಲ, ಪಾಪದ ಯಾತ್ರೆ. ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಕಾವೇರಿ ನದಿ ಹರಿಯುತ್ತಿರುವ ಎಲ್ಲ ಕಡೆ ಮೈತ್ರಿ ನಾಯಕರು ಸ್ನಾನ ಮಾಡಿಕೊಂಡರೆ, ಅವರ ಪಾಪದ ಕೊಡ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎಂದು ಟೀಕಿಸಿದರು.

ಆಹಾರ ಸಚಿವ ಕೆ.ಎಸ್.ಮುನಿಯಪ್ಪ ಮಾತನಾಡಿ, ಎಣ್ಣೆ-ನೀರು ಬೆರೆಯುವುದಿಲ್ಲ. ಅದೇ ರೀತಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಲು ಸಾಧ್ಯವಿಲ್ಲ. ನಿಮ್ಮಿಬ್ಬರ ಅನೈತಿಕ ಸಂಬಂಧ, ಹೆಚ್ಚು ದಿನ ಇರುವುದಿಲ್ಲ. ಬಿಜೆಪಿ ಸಿದ್ಧಾಂತಕ್ಕೂ, ದೇವೇಗೌಡರ ತತ್ವ ಸಿದ್ಧಾಂತಕ್ಕೂ ವ್ಯತ್ಯಾಸ ಇದೆ ಎಂದು ಭವಿಷ್ಯ ನುಡಿದರು.

ವಸತಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಬಿಜೆಪಿಯವರು ಬಲವಂತದ ಸ್ನಾನ ಮಾಡಿಸಿ ಕುಮಾರಸ್ವಾಮಿಯವರನ್ನು ಪಾದಯಾತ್ರೆಗೆ ಕರೆ ತಂದಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಗಟ್ಟಿಯಾಗಿದ್ದಾರೆ. ನಿಮ್ಮಿಂದ ಈ ಜನ್ಮದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲಾಗಲ್ಲ ಎಂದರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ತಮ್ಮನ್ನು ಜೈಲಿಗೆ ಕಳುಹಿಸಿದ ಎಚ್‌ಡಿಕೆ ಜೊತೆ ಬಿಎಸ್‌ವೈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.