ಕಾಂಗ್ರೆಸ್ ಗ್ಯಾರಂಟಿ ಸಂಪೂರ್ಣ ವಿಫಲ: ಸಂಸದ

| Published : Feb 05 2024, 01:45 AM IST

ಕಾಂಗ್ರೆಸ್ ಗ್ಯಾರಂಟಿ ಸಂಪೂರ್ಣ ವಿಫಲ: ಸಂಸದ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಪಸಂಖ್ಯಾತ ಸಮುದಾಯದವರಿಗೆ ಸಿಎಂ ಸಿದ್ದರಾಮಯ್ಯ ೧೦ ಸಾವಿರ ಕೋಟಿ ರೂ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ, ಅದೇ ರೀತಿ ರಾಜ್ಯದ ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಎಷ್ಟೆಷ್ಟು ಸಾವಿರ ಕೋಟಿ ಹಂಚಿಕೆ ಮಾಡುತ್ತಾರೆಂಬುದನ್ನೂ ಪ್ರಕಟಿಸಲಿ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ ೩ ತಿಂಗಳಲ್ಲಿ ಜನವಿರೋಧಿ ಸರ್ಕಾರವಾಗಿ ಪರಿವರ್ತನೆಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದಕ್ಕೂ ವ್ಯಾರಂಟಿ ಇಲ್ಲ, ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.

ತಾಲೂಕಿನ ಕಾಳಹಸ್ತಿಪುರ ಗೇಟ್ ಸಮೀಪದ ರತ್ನ ಕನ್ವೇಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಡತನ ನಿರ್ಮೂಲನ ಮಾಡುವುದಾಗಿ ಹೇಳಿ ಏನೊಂದು ಅಭಿವೃದ್ದಿ ಕಾರ್ಯಗಳು ಇಲ್ಲವಾಗಿದ್ದು ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಭವಿಷ್ಯ ನುಡಿದರು. ರಾಜ್ಯದ 28 ಸ್ಥಾನ ಬಿಜೆಪಿಗೆ

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳಲ್ಲಿ ೨೮ ಸ್ಥಾನಗಳು ಬಿಜೆಪಿ ಪಾಲಾಗುವುದು ಖಚಿತವಾಗಿದೆ, ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಸಚಿವರು ಟಿಕೆಟ್ ನನಗೆ ಬೇಡ, ನಿನಗೆ ಬೇಡ ಎಂಬಂತೆ ಕಿತ್ತಾಡುವಂತಾಗಿರುವುದು ಕಾಂಗ್ರೆಸ್ಸಿನವರಿಗೆ ಬಿಜೆಪಿ ವಿರುದ್ಧ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಜನಜನಿತವಾಗಿದೆ ಎಂದರು.

ಡೀಸಿ ರಾಜಕಾರಣಿಗಳ ಕೈಗೊಂಬೆ

ಜಿಲ್ಲಾಧಿಕಾರಿ ಅಕ್ರಂ ಪಾಷ ಕೆಲವು ರಾಜಕಾರಣಿಗಳ ಕೈಗೊಂಬೆಗಳಂತೆ, ಆಡಳಿತದಲ್ಲಿ ಪಾಕಿಸ್ತಾನ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ, ಕ್ಲಾಕ್ ಟವರ್‌ನಲ್ಲಿ ರಾಷ್ಟ್ರ ಧ್ವಜಹಾರಿಸಲು ಅಡ್ಡಿ ಮಾಡಿದರು, ೨೯೫ ಎಕರೆ ಜಾಗವನ್ನು ಮುಸ್ಲಿಂ ಸಮುದಾಯದ ವಕ್ಫ್ ಬೋರ್ಡಗೆ ಮಾಡಿ ಕೊಟ್ಟಿದ್ದಾರೆ, ಇದೇ ರೀತಿ ಎಲ್ಲಾ ಜಾತಿಗಳಿಗೂ ಸರ್ಕಾರಿ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತ ಸಮುದಾಯದವರಿಗೆ ಸಿಎಂ ಸಿದ್ದರಾಮಯ್ಯ ೧೦ ಸಾವಿರ ಕೋಟಿ ರೂ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ, ಅದೇ ರೀತಿ ರಾಜ್ಯದ ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಎಷ್ಟೆಷ್ಟು ಸಾವಿರ ಕೋಟಿ ಹಂಚಿಕೆ ಮಾಡುತ್ತಾರೆಂಬುದನ್ನೂ ಪ್ರಕಟಿಸಿದ ನಂತರ ತಾಕತ್ತು ಇದ್ದರೆ ಅವರು ಹಂಚಿಕೆ ಮಾಡಲಿ ಎಂದು ಸವಾಲ್ ಹಾಕಿದರು.

ಕಾಂಗ್ರೆಸ್‌ನಿಂದ ಭಾರತ್‌ ತೋಡೋ

ರಾಹುಲ್ ಗಾಂಧಿ ಭಾರತ್ ಜೋಡೋ ಬದಲೂ ಭಾರತ್ ತೋಡೋ ಎಂಬಂತೆ ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಕುಮಾರ್ ದಕ್ಷಿಣ ಭಾರತದ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲು ಪ್ರಸ್ತಾಪಿಸಿರುವುದು ಖಂಡನೀಯ, ಭಾರತ್ ಜೋಡೋ ಯಾತ್ರೆಯಲ್ಲಿ ಜನರಿಗೆ ರಾಹುಲ್ ಮಾದರಿ ಮತ್ತೊಬ್ಬರನ್ನು ತೋರಿಸುವ ಮೂಲಕ ಜನರಿಗೆ ಯಾಮಾರಿಸಿ ದ್ವಿಪಾತ್ರ ಅಭಿನಯದ ಸಿನಿಮಾ ತೋರಿಸುತ್ತಿದ್ದಾರೆ ಎಂದು ವ್ಯಂಗವಾಡಿದರು.

ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿ ಚುನಾವಣೆಗಳು ಸಹ ಬಿಜೆಪಿ ಪಾಲು ಆಗಲಿದೆ. ಬಿಜೆಪಿ ಮುಖಂಡರು ಈಗಿನಿಂದಲೇ ಸಂಘಟನೆಗೆ ಸಜ್ಜಾಗಬೇಕಾಗಿದೆ, ಬೂತ್‌ವಾರು ಸಮಿತಿಗಳನ್ನು ರಚಿಸಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿಕೊಂಡು ಪ್ರಚಾರದ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕೆಂದು ಕರೆ ನೀಡಿದರು.ಜಿಲ್ಲಾ ಸಂಘಟನಾ ಉಸ್ತುವಾರಿ ಕೇಶವ್ ಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರಗಳು ಏನೇನು ಮಾಡಿವೆ, ಯಾವ ಯಾವ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ಜನರಿಗೆ ಮನದಟ್ಟಾಗುವಂತೆ ವಿವರಿಸಬೇಕು, ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಗೋಡೆ ಬರಹಕ್ಕೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಗೋಡೆ ಮಾಲೀಕರ ಬಳಿ ಅನುಮತಿ ಪಡೆದು ೨೦೦ ಮೀಟರ್ ದೂರವಿದ್ದರೂ ಸ್ವಷ್ಟವಾಗಿ ಬರಹ ಕಾಣುವಂತೆ ಬರೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಮಾಜಿ ಶಾಸಕರಾದ ವೈ.ಸಂಪಂಗಿ, ಮಂಜುನಾಥಗೌಡ, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಎಂ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಳಬಾಗಿಲು ಸಂಪತ್, ಜಿಲ್ಲಾಕಾರ್ಯದರ್ಶಿ ಕೃಷ್ಣ, ಬಂಗಾರಪೇಟೆ ಚಂದ್ರಾರೆಡ್ಡಿ, ವಕ್ತಾರ ನರೇಂದ್ರ ರಂಗಪ್ಪ, ರಘುನಾಥ್, ಜಯಚಂದ್ರ ಇದ್ದರು.