ಸಾರಾಂಶ
ಸಚಿವರು ಎರಡು ತಿಂಗಳಲ್ಲಿ ತಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬರುವ ದಸರಾ ವೇಳೆಗೆ ತಲೆದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸತತ ಸೂಚನೆ ಹೊರತಾಗಿಯೂ ಕಾರ್ಯವೈಖರಿ ಉತ್ತಮಪಡಿಸಿಕೊಳ್ಳದ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಸಚಿವರು ಎರಡು ತಿಂಗಳಲ್ಲಿ ತಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬರುವ ದಸರಾ ವೇಳೆಗೆ ತಲೆದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸತತ ಸೂಚನೆ ಹೊರತಾಗಿಯೂ ಕಾರ್ಯವೈಖರಿ ಉತ್ತಮಪಡಿಸಿಕೊಳ್ಳದ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಚಿವರ ಜತೆ ಮಹತ್ವದ ಸಭೆ ನಡೆಸಿದ ಅವರು ಈ ಎಚ್ಚರಿಕೆಯ ಸಂದೇಶ ರವಾನಿಸಿದರು ಎಂದು ತಿಳಿದು ಬಂದಿದೆ.
ಹಲವು ಸಚಿವರ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ. ಪ್ರತಿಯೊಬ್ಬ ಸಚಿವರ ಬಗ್ಗೆಯೂ ವೈಯಕ್ತಿಕ ಮೌಲ್ಯಮಾಪನಾ ವರದಿ ನಮ್ಮ ಬಳಿ ಇದೆ. ಸಚಿವರ ಕೆಲಸ ತವರು ಕ್ಷೇತ್ರ ಮತ್ತು ಉಸ್ತುವಾರಿ ಜಿಲ್ಲೆಗಷ್ಟೇ ಸೀಮಿತವಾಗಿದೆ. ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಅಹವಾಲಿಗೆ ಸ್ಪಂದಿಸಲೂ ಕೆಲ ಸಚಿವರು ದರ್ಪ ತೋರುತ್ತಿದ್ದಾರೆ. ಇದನ್ನು ಪಕ್ಷವು ಸಹಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ನಿಮ್ಮ ಬಳಿಗೆ ಬರುವ ಶಾಸಕರು ಹಾಗೂ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸದಿದ್ದರೆ ರಾಜ್ಯದ ಜನರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಿ? ಮೊದಲು ಪಕ್ಷದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ. ರಾಜ್ಯ ಪ್ರವಾಸ ಮಾಡಿ, ಇಲಾಖೆಯಲ್ಲಿ ಸುಧಾರಣೆ ತಂದು ಸರ್ಕಾರಕ್ಕೆ ಜನರಲ್ಲಿ ಉತ್ತಮ ಹೆಸರು ತರುವಂತೆ ಕೆಲಸ ಮಾಡಿ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಲೋಕಸಭೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುತ್ತಿದ್ದೆವು’ ಎಂದು ಹೇಳಿದರು ಎನ್ನಲಾಗಿದೆ.
‘ರಾಜ್ಯ ಪ್ರವಾಸ ಮಾಡುವುದರ ಜೊತೆಗೆ ಬಿಜೆಪಿ ಅವಧಿಯ ಹಗರಣಗಳ ತನಿಖೆ ಚುರುಕುಗೊಳಿಸಿ. ಮುಡಾ, ವಾಲ್ಮೀಕಿ ನಿಗಮ ವಿಚಾರದಲ್ಲಿ ಬಿಜೆಪಿಯವರು ಸರ್ಕಾರದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದರೂ ಸದನದ ಒಳಗೆ ಹಾಗೂ ಹೊರಗೆ ಸರ್ಕಾರ, ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದೀರಿ. ಎರಡು ತಿಂಗಳಲ್ಲಿ ಎಲ್ಲಾ ರೀತಿಯಲ್ಲೂ ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಖಾತೆ ಕಳೆದುಕೊಳ್ಳಲು ಸಿದ್ಧರಾಗಿ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.