ಸಾರಾಂಶ
ದೆಹಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸೋಮವಾರ ರಾಜ್ಯಕ್ಕೆ ವಾಪಸಾಗಲಿದ್ದು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವರೇ ಎಂಬುದು ಭಾರೀ ಕುತೂಹಲ ಸೃಷ್ಟಿಸಿದೆ.
ಬೆಂಗಳೂರು : ದೆಹಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸೋಮವಾರ ರಾಜ್ಯಕ್ಕೆ ವಾಪಸಾಗಲಿದ್ದು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವರೇ ಎಂಬುದು ಭಾರೀ ಕುತೂಹಲ ಸೃಷ್ಟಿಸಿದೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರಿಗೆ ಜು.26ರಂದು ಶೋಕಾಸ್ ನೋಟಿಸ್ ನೀಡಿದ ಬಳಿಕ ರಾಜ್ಯಪಾಲರು ದೆಹಲಿ ಪ್ರವಾಸಕ್ಕೆ ತೆರಳಿದ್ದರು. ಇದರ ನಡುವೆ ನೋಟಿಸ್ ವಾಪಸ್ ಪಡೆಯಲು ಸಂಪುಟ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿದೆ. ಮತ್ತೊಂದೆಡೆ ನೋಟಿಸ್‌ಗೆ ಮುಖ್ಯಮಂತ್ರಿ ಅವರು ಉತ್ತರವನ್ನೂ ಕೊಟ್ಟಾಗಿದೆ.
ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ(BJP JDS hiking) ಆರಂಭಿಸಿರುವುದು ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇದೀಗ ರಾಜ್ಯಪಾಲರು ಸೋಮವಾರ ಮಧ್ಯಾಹ್ನದ ವೇಳೆಗೆ ರಾಜ್ಯಕ್ಕೆ ವಾಪಸ್ಸಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿಸುವ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿದೆ.
ಪ್ರಸ್ತುತ ಸಂಸತ್‌ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿರುವುದರಿಂದ ಪ್ರಾಸಿಕ್ಯೂಷನ್‌ಗೆ ಈಗಲೇ ಅನುಮತಿ ನೀಡಿದರೆ ಸದನದಲ್ಲಿ ಪ್ರತಿಪಕ್ಷಗಳು ಭಾರೀ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಹಾಗಾಗಿ ಈಗಲೇ ಅನುಮತಿ ನೀಡುತ್ತಾರೆಯೇ ಅಥವಾ ಅಧಿವೇಶನ ಮುಗಿಯುವವರೆಗೆ ಕಾಯಬಹುದಾ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುಡಾ ನಿವೇಶನ ಅಕ್ರಮ ಹಂಚಿಕೆ ಆರೋಪದ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಇದರ ಮೇಲೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜು.26ರಂದು ಶೋಕಾಸ್ ನೋಟಿಸ್ ಜಾರಿ ಮಾಡಿ ಏಳು ದಿನಗಳಲ್ಲಿ ಉತ್ತರ ನೀಡಲು ಸೂಚಿಸಿದ್ದರು.
ಇದರ ಬೆನ್ನಲ್ಲೇ ಮುಖ್ಯಮಂತ್ರಿಯವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ ಹಿಂಪಡೆಯಬೇಕು. ಪ್ರಾಸಿಕ್ಯೂಷನ್‌ಗೆ ಕೋರಿಕೆ ತಿರಸ್ಕರಿಸಬೇಕು ಎಂದು ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಲಾಗಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಾಜ್ಯಪಾಲರಿಗೆ ವಿವರವಾದ ಉತ್ತರ ನೀಡಿದ್ದಾರೆ.