ಅಕ್ರಮ ಮಾಡಿಲ್ಲವೆಂದು ಡಿಕೆ ಶಿವಕುಮಾರ್ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ : ಎಚ್ಡಿ ಕುಮಾರಸ್ವಾಮಿ

| Published : Aug 05 2024, 07:07 AM IST

HD Kumaraswamy

ಸಾರಾಂಶ

ಮಿಸ್ಟರ್ ಡಿ.ಕೆ.ಶಿವಕುಮಾರ್ ನಿಮಗೆ ನೊಣವಿನಕೆರೆ ಅಜ್ಜಯ್ಯ ಅವರ ಮೇಲೆ ಭಕ್ತಿ, ಗೌರವ ಇದ್ದರೆ ಯಾವುದೇ ಅಕ್ರಮ ಮಾಡಿಲ್ಲ ಎಂದು ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ

ರಾಮನಗರ: ಮಿಸ್ಟರ್ ಡಿ.ಕೆ.ಶಿವಕುಮಾರ್ ನಿಮಗೆ ನೊಣವಿನಕೆರೆ ಅಜ್ಜಯ್ಯ ಅವರ ಮೇಲೆ ಭಕ್ತಿ, ಗೌರವ ಇದ್ದರೆ ಯಾವುದೇ ಅಕ್ರಮ ಮಾಡಿಲ್ಲ ಎಂದು ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಆಗ ಯಾರು ಸತ್ಯಹರಿಶ್ಚಂದ್ರರ ತುಂಡು ಎಂಬುದು ಗೊತ್ತಾಗುತ್ತೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲೆಸೆದರು.

ಮೈಸೂರು ಚಲೋ 2ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ನಾವು ದೇವರು, ಗುರುಗಳನ್ನು ನಂಬಿಕೊಂಡು ಬಂದವರು. ನೀವು ಕಲ್ಲು ಹೊಡೆಯಲು ಕನಕಪುರದಲ್ಲಿ ಎಷ್ಟು ಕುಟುಂಬಗಳನ್ನು ಹಾಳು ಮಾಡಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನು ಮುಂದೆ ಆ ಅಜ್ಜಯ್ಯನವರು ನಿಮಗೆ ರಕ್ಷಣೆ ಕೊಡುವುದಿಲ್ಲ ಎಂದರು.

ಶಿವಕುಮಾರ್ ಪ್ಯಾಂಟು, ಶರ್ಟ್ ತೆಗೆದು ಜೈಲಿಗೆ ಕಳುಹಿಸುತ್ತೀರಾ, ಅದಕ್ಕೆ ತಯಾರಾಗಿದ್ದೀನಿ ಅಂತ ಹೇಳುತ್ತಿದ್ದಾರೆ. ನನನ್ನು ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಅವರಿಗೆ ನೊಣವಿನಕೆರೆ ಅಜ್ಜಯ್ಯ ಅವರು ಏನಾದರೂ ವಿಷಯ ಹೇಳಿರಬೇಕು. ನೀನು ಕೊನೆ ಹಂತಕ್ಕೆ ಬಂದಿದಿಯಾ, ಜೈಲಿಗೆ ಹೋಗುತ್ತಿಯಾ ತಯಾರಾಗುವಂತೆ ಅಜ್ಜಯ್ಯ ಸೂಚನೆ ನೀಡಿರಬೇಕು ಎಂದರು.

ಅನ್ಯಾಯವೆಸಗಿದ್ದರೆ ರಾಜಕೀಯಕ್ಕೇ ರಾಜೀನಾಮೆ

ರಾಮನಗರ: 1995ರಲ್ಲಿ ದೇವೇಗೌಡರು (ಬೆಂ.ಗ್ರಾ. ಜಿಲ್ಲೆ) ರಾಮನಗರ ವಿಧಾನಸಭಾ ಚುನಾವಣೆಗೆ ನಿಲ್ಲುವುದಕ್ಕೂ ಮುಂಚೆ 15 ವರ್ಷಗಳ ಹಿಂದೆಯೇ ಕೇತಗಾನಹಳ್ಳಿಯಲ್ಲಿ 45 ಎಕರೆ ಭೂಮಿ ಖರೀದಿಸಿದ್ದೆ. ನಾನು ಚಲನಚಿತ್ರ ರಂಗದಲ್ಲಿ ದುಡಿದ ಹಣದಿಂದ ಆ ಭೂಮಿ ಖರೀಸಿದ್ದೆ. ನಾನು ರಾಮನಗರಕ್ಕೆ ಬಂದಾಗ ಆಸ್ತಿ ಎಷ್ಟಿತ್ತೊ, ಈಗಲೂ ಅಷ್ಟೇ ಇದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

1983-84ರಲ್ಲಿ ಕೇತಗಾನಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದಾಗ ಯಾವುದಾದರೂ ಕುಟುಂಬಕ್ಕೆ ಅನ್ಯಾಯ, ದಬ್ಬಾಳಿಕೆ ಮಾಡಿ, ಅಧಿಕಾರ ದುರ್ಬಳಕೆ ಮಾಡಿದ್ದರೆ, ರಾಜಕೀಯಕ್ಕೆ ನಾನು ರಾಜಿನಾಮೆ ನೀಡುತ್ತೇನೆ. ನೀವು ರಾಜಿನಾಮೆ ನೀಡಲು ಸಿದ್ದರಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದಾಗ ಯಡಿಯೂರಪ್ಪನವರು ನನಗೆ ಶಕ್ತಿ ನೀಡಿದರು. ಉತ್ತಮ ಆಡಳಿತ ನೀಡಿದೆವು. ನಾನು ಅ‍ವರಿಗೆ ಅಧಿಕಾರ ಕೊಡಬೇಕು ಅಂದುಕೊಂಡಿದ್ದೆ. ಕೆಲ ರಾಜಕೀಯ ಬೆಳವಣಿಗೆಯಿಂದ ಬಳಿಕ ಕೆಲ ಘಟನೆ ನಡೆದವು. ನಾನು ಅವರಿಗೆ ದ್ರೋಹ ಮಾಡಲಿಲ್ಲ. ಕೆಲವು ರಾಜಕೀಯ ಬೆಳವಣಿಗೆಯಲ್ಲಿ ಕೆಲವರು ಮಾಡಿದಂತದ್ದು ನನ್ನಿಂದ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರಿಗೆ ದ್ರೋಹ ಬಗೆದಿಲ್ಲ ಎಂದರು.

ರಾಜ್ಯದ ಜನರ ಬದುಕು ಸರಿಪಡಿಸುವುದು ನಮ್ಮ ಉದ್ದೇಶವಾಗಿದೆ. ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಎಂಬುದು ಮುಖ್ಯವಲ್ಲ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರ ತರಲು ಶ್ರಮಿಸೋಣ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಸರ್ಕಾರ ರಚನೆಗೊಂಡ ದಿನವೇ ಹಗರಣಗಳ ಅಂಗಡಿ ಬಾಗಿಲು ತೆರೆದಿದೆ. ನಾಡಿನ ಕಲ್ಯಾಣಕ್ಕೆ ಉಪಯೋಗವಾಗುವ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ನಾಡಿನ ಜನರ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ 5 ಗ್ಯಾರಂಟಿ ನೀಡಿ ದೊಡ್ಡ ಬದಲಾವಣೆ ತಂದಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದರಿದ್ರ ವಾತಾವರಣ ತಂದಿದೆ.

-ಕುಮಾರಸ್ವಾಮಿ, ಕೇಂದ್ರ ಸಚಿವರು

ಡಾ. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆಯಸ್ಸು ಮುಗಿದು ಹೋಗುತ್ತದೆ ಎಂದು ನಮ್ಮ ಸ್ನೇಹಿತರು ಹೇಳಿದ್ದಾರೆ. ಆದರೆ, ಮಂಜುನಾಥ್ ಮೈಯಲ್ಲಿ ರಾಜಕೀಯ ರಕ್ತ ಹರಿಯುತ್ತಿದೆ. ರಾಮನಗರ ಜಿಲ್ಲಾಧಿಕಾರಿಯವರೇ ಸೋತ ಅಭ್ಯರ್ಥಿಯನ್ನು ಕೂರಿಸಿಕೊಂಡು ಏನೇನು ಮಾಡಿದ್ದೀರಿ, ಏನೇನು ಸೂಚನೆ ಕೊಟ್ಟಿದ್ದೀರಿ. ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಬಹಳ ಸಮಯ ಇಲ್ಲ, ಇದಕ್ಕೆಲ್ಲ ಬೆಲೆ ತೆರಬೇಕಾಗುತ್ತದೆ. ಕಾನೂನುಬಾಹಿರ ಚಟುವಟಿಕೆ ನಡೆದರೆ ತಕ್ಕ ಪಾಠ ಎದುರಿಸಬೇಕಾಗುತ್ತದೆ.

- ಕುಮಾರಸ್ವಾಮಿ, ಕೇಂದ್ರ ಸಚಿವರು