ಅಡ್ಡಮತ ಭೀತಿ: 25/26ಕ್ಕೆ ಕಾಂಗ್ರೆಸ್‌ ಶಾಸಕರು ರೆಸಾರ್ಟಿಗೆ?

| Published : Feb 22 2024, 01:49 AM IST / Updated: Feb 22 2024, 02:32 PM IST

ಸಾರಾಂಶ

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನಿಂದ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಮತಗಳನ್ನು ಭದ್ರಪಡಿಸಿಕೊಳ್ಳಲು ಎಲ್ಲ ಶಾಸಕರನ್ನೂ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ, ಬೆಂಗಳೂರು

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನಿಂದ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಮತಗಳನ್ನು ಭದ್ರಪಡಿಸಿಕೊಳ್ಳಲು ಎಲ್ಲ ಶಾಸಕರನ್ನೂ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಫೆ.25 ಅಥವಾ ಫೆ.26ರಂದು ರೆಸಾರ್ಟ್‌ಗೆ ತೆರಳಲಿದ್ದು, ಅಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾಜ್ಯಸಭೆ ಚುನಾವಣೆ ನಡೆಯಲಿರುವ ಫೆ.27ರಂದು ನೇರವಾಗಿ ಮತದಾನಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆಯೇ ವಿಧಾನಸಭೆ ಮೊಗಸಾಲೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌ ಅವರು ಈ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ್ದರು. ಬಳಿಕ ಬುಧವಾರ ಸಂಜೆ ಪಕ್ಷದ ಹಂತದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಪ್ರತಿಪಕ್ಷಗಳಿಗೆ ಯಾವುದೇ ಅವಕಾಶಗಳನ್ನು ಕೊಡುವುದು ಬೇಡ ಎಂದು ನಿರ್ಧರಿಸಲಾಯಿತು. 

ಹೀಗಾಗಿ ರೆಸಾರ್ಟ್‌ಗೆ ಸ್ಥಳಾಂತರಗೊಳ್ಳುವುದು ಖಚಿತ ಎಂಬಂತಾಗಿದೆ.ಪ್ರಸ್ತುತ ಕಾಂಗ್ರೆಸ್‌ ಪಕ್ಷ ಕಾಂಗ್ರೆಸ್‌ ಹಾಗೂ ಬೆಂಬಲಿಗರು ಸೇರಿದಂತೆ 136 ಶಾಸಕರ ಬಲವನ್ನು ಹೊಂದಿದೆ. 

ಹೀಗಾಗಿ ಅಜಯ್‌ ಮಾಕೆನ್‌, ಡಾ.ಸಯ್ಯದ್‌ ನಾಸೀರ್‌ ಹುಸೇನ್‌ ಹಾಗೂ ಜಿ.ಸಿ. ಚಂದ್ರಶೇಖರ್‌ ಅವರನ್ನು ಚುನಾವಣೆ ಕಣಕ್ಕಿಳಿಸಿದೆ.

ಬಿಜೆಪಿಗೆ ತನ್ನ ಸಂಖ್ಯಾಬಲದ ಮೇಲೆ ಒಂದು ಸ್ಥಾನ ನಿರಾಯಾಸವಾಗಿ ಲಭಿಸಲಿದ್ದು, ನಾರಾಯಣಸಾ ಭಾಂಡಗೆ ಅವರನ್ನು ಕಣಕ್ಕಿಳಿಸಿದೆ. ಇದೀಗ ಜೆಡಿಎಸ್‌ ಕುಪೇಂದ್ರರೆಡ್ಡಿ ಅವರನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಪಕ್ಷವೂ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಾಗಿದೆ.

ಏಕೆ ರೆಸಾರ್ಟ್‌ಗೆ?
ವಿಧಾನಸಭೆಯಿಂದ ರಾಜ್ಯಸಭೆಗೆ 4 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್‌ನಿಂದ ಮೂವರು ಹಾಗೂ ಬಿಜೆಪಿಯಿಂದ ಒಬ್ಬರು ಸುಲಭವಾಗಿ ಆಯ್ಕೆಯಾಗಬಹುದು.

ಆದರೆ, ಜೆಡಿಎಸ್‌ ಕೂಡ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಿದೆ. ಅವರನ್ನು ಗೆಲ್ಲಿಸಲು ತನ್ನ ಶಾಸಕರನ್ನು ಸೆಳೆಯುವ ಭೀತಿ ಕಾಂಗ್ರೆಸ್‌ಗಿದೆ. ಹೀಗಾಗಿ ತನ್ನ 136 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದು, ಬಿಜೆಪಿ ಹಾಗೂ ಜೆಡಿಎಸ್‌ನವರ ಕೈಗೆ ಸಿಗದಂತೆ ರಕ್ಷಿಸಿಕೊಳ್ಳುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ.

ಮತಯಾಚಿಸಿದ ಅಜಯ್‌ ಮಾಕೆನ್‌: ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಅಜಯ್‌ ಮಾಕೆನ್‌ ಅವರು ಬುಧವಾರ ವಿಧಾನಸೌಧಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಮತ ಯಾಚಿಸಿದರು. ಈ ವೇಳೆ ಅಶೋಕ್‌ ಪಟ್ಟಣ್‌ ಅವರು ಪ್ರತಿಯೊಬ್ಬ ಶಾಸಕರ ಪರಿಚಯ ಮಾಡಿಕೊಟ್ಟರು.