ಮಂಡ್ಯದಿಂದ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆಗೆ ಆಹ್ವಾನ: ಪುಟ್ಟರಾಜು

| Published : Feb 21 2024, 02:04 AM IST

ಸಾರಾಂಶ

ಅಭ್ಯರ್ಥಿ ಮಾಡಲು ಕಾಂಗ್ರೆಸ್ ಕಥೆ ಏನಾಗಿದೆ ಎಂದರೆ ದುಡ್ಡಿರುವ ವ್ಯಕ್ತಿಯನ್ನು ಹುಡುಕುತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಮಂಡ್ಯ ಜಿಲ್ಲೆಯ ಜನ ಹಣ ಬಲವೋ, ಜನ ಬಲವೋ ಎನ್ನುವುದನ್ನು ತೋರಿಸಿಕೊಡಬೇಕಿದೆ. ಈಗಾಗಲೇ ನನ್ನನ್ನು ಒಮ್ಮೆ ಗೆಲ್ಲಿಸುವುದರೊಂದಿಗೆ ತೋರಿಸಿಕೊಟ್ಟಿದ್ದೀರಿ. ಮತ್ತೊಮ್ಮೆ ಸಾಬೀತುಪಡಿಸುವ ಸನ್ನಿವೇಶ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೃದಯವಂತ ವೈದ್ಯ ಡಾ.ಸಿ.ಎನ್‌.ಮಂಜುನಾಥ್‌ ಅವರು ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೇನೆ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದಿಂದ ಏರ್ಪಡಿಸಿದ್ದ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ನಿರ್ಣಯ ಮಾಡಿದ್ದೇವೆ. ಅದೇ ರೀತಿ ಹೃದಯವಂತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರನ್ನು ಮಂಡ್ಯಕ್ಕೆ ಬನ್ನಿ ಎಂದು ಎಲ್ಲರ ಪರವಾಗಿ ನಾನೇ ಕರೆ ಕೊಟ್ಟಿದ್ದೇನೆ. ಮಂಜುನಾಥ್ ಅವರು ಬಡವರಿಗೆ ಆರೋಗ್ಯ ಭಾಗ್ಯ ಕೊಡುವ ಕೆಲಸ ಮಾಡಿದ್ದಾರೆ ಅವರನ್ನು ಆಹ್ವಾನಿಸಿದ್ದೇವೆ ಎಂದರು.

ಅಭ್ಯರ್ಥಿ ಮಾಡಲು ಕಾಂಗ್ರೆಸ್ ಕಥೆ ಏನಾಗಿದೆ ಎಂದರೆ ದುಡ್ಡಿರುವ ವ್ಯಕ್ತಿಯನ್ನು ಹುಡುಕುತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಮಂಡ್ಯ ಜಿಲ್ಲೆಯ ಜನ ಹಣ ಬಲವೋ, ಜನ ಬಲವೋ ಎನ್ನುವುದನ್ನು ತೋರಿಸಿಕೊಡಬೇಕಿದೆ. ಈಗಾಗಲೇ ನನ್ನನ್ನು ಒಮ್ಮೆ ಗೆಲ್ಲಿಸುವುದರೊಂದಿಗೆ ತೋರಿಸಿಕೊಟ್ಟಿದ್ದೀರಿ. ಮತ್ತೊಮ್ಮೆ ಸಾಬೀತುಪಡಿಸುವ ಸನ್ನಿವೇಶ ಎದುರಾಗಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡದ ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಪಕ್ಷ ಪಿತೂರಿ ಮಾಡುತ್ತಿದೆ. ಈಗಾಗಲೇ ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಮಂತ್ರಿ ಎಂದು ಬಿಂಬಿಸಿದರು. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಇಲ್ಲದೆ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಅಡಿ ಆಳಾಗಿರಬೇಕು ಎನ್ನುವ ಸ್ಥಿತಿಯಲ್ಲಿ ರಾಹುಲ್ ಗಾಂಧಿಯವರ ಹೆಸರನ್ನು ಸೂಚಿಸಿದ್ದಾರೆ. ಈಗಾಗಲೇ ಇಂಡಿಯಾ ಒಕ್ಕೂಟ ಒಂದೊಂದು ಕೂಟವನ್ನು ಕಳೆದುಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ದೇವೇಗೌಡರು ಕಟ್ಟಿರುವ ಪಕ್ಷ ಜೆಡಿಎಸ್ ಸದೃಢವಾಗಿ ಉಳಿದು ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತದೆ ಎಂದರು.

ಡಾ.ಕೆ.ಅನ್ನದಾನಿಯವರಿಗೆ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ರಾಜ್ಯಾದ್ಯಂತ ಸಂಘಟನೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಎಸ್‌ಸಿ, ಎಸ್‌ಟಿ ಜನಾಂಗದವರು ಹಾಗೂ ಜನಸಾಮಾನ್ಯರು ಜೆಡಿಎಸ್ ಪಕ್ಷ ಯಾರನ್ನು ಲೋಕಸಭಾ ಕಣಕ್ಕೆ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತದೆ ಅವರಿಗೆ ಪ್ರಚಂಡ ಬಹುಮತವನ್ನು ಕೊಡುವ ಕೆಲಸವನ್ನು ಅನ್ನದಾನಿಯವರ ನೇತೃತ್ವದಲ್ಲಿ ದಲಿತ ಸಮುದಾಯದ ಜನರು ಮಾಡಬೇಕು ಎಂದರು.

ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ.ಕೆ.ಅನ್ನದಾನಿ ಮಾತನಾಡಿ ಜಾತ್ಯತೀತ ತತ್ವ ಇಟ್ಟುಕೊಂಡಿರುವ ಜೆಡಿಎಸ್ ಪಕ್ಷದಿಂದ ಮಾತ್ರ ದಲಿತರ ರಕ್ಷಣೆ ಸಾಧ್ಯ ಎಂದರು.

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನವಾಗಿಲ್ಲ. ಎನ್‌ಡಿಎ ಜೊತೆ ಸೇರಿದ್ದೇವೆ ಅಷ್ಟೇ. ಮುಂಬರುವ ದಿನಗಳಲ್ಲಿ ದಲಿತ ಸಮಾಜದ ಬಂಧುಗಳು ಜೆಡಿಎಸ್ ಪಕ್ಷದ ಜೊತೆ ಬೆಂಬಲವಾಗಿ ನಿಲ್ಲಬೇಕು ಎಂದರು.

ಈಗಾಗಲೇ ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಲಿತರಿಗೆ ಮಾರಕವಾದ ಪಕ್ಷವಾಗಿದ್ದು ಸ್ವಾತಂತ್ರ್ಯ, ಸಂಘಟನೆಗೆ ಹೈಜಾಕ್ ಮಾಡಿದ ಪಕ್ಷ ಕಾಂಗ್ರೆಸ್ ಎಂದರು.

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆಯನ್ನು ದಲಿತ ಸಮಾಜದ ಬಂಧುಗಳು ಮಾಡುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣ ಭೂತರಾಗಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಮ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯ ಶಂಕರ್, ಸಿ.ಕೆ. ಪಾಪಯ್ಯ, ವಸಂತ್ ರಾಜು, ನಾಗೇಶ, ಸೇರಿದಂತೆ ಇತರರು ಭಾಗವಹಿಸಿದ್ದರು.