ಕಾಂಗ್ರೆಸ್‌ಗೆ ಆತ್ಮಗೌರವವೇ ಇಲ್ಲ: ಮಾಜಿ ಸಂಸದ ಸಿ.ಎಸ್.ಪುಟ್ಟರಾಜು

| Published : Feb 21 2024, 02:09 AM IST / Updated: Feb 21 2024, 04:36 PM IST

CS Puttaraju
ಕಾಂಗ್ರೆಸ್‌ಗೆ ಆತ್ಮಗೌರವವೇ ಇಲ್ಲ: ಮಾಜಿ ಸಂಸದ ಸಿ.ಎಸ್.ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಬಡವರ ಪರವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ತನಿಖೆ ನಡೆಸಲು ಮುಂದಾಗಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆಯೇ ವಿನಃ ಬೇರೇನೂ ಅಲ್ಲ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಡವರ ಪರವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ತನಿಖೆ ನಡೆಸಲು ಮುಂದಾಗಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆಯೇ ವಿನಃ ಬೇರೇನೂ ಅಲ್ಲ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಕಳೆದ ೧೦ ವರ್ಷಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆಗೆ ಸರ್ಕಾರ ಮುಂದಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಆತ್ಮಗೌರವವಿದ್ದರೆ ಮೊದಲು ಡಾ.ಸಿ.ಎನ್.ಮಂಜುನಾಥ್ ಅವರ ಕ್ಷಮೆಯಾಚಿಸಬೇಕು ಎಂದು ನೇರವಾಗಿ ತಿಳಿಸಿದರು.

ವೈದ್ಯರಾಗಿ ಜನರಸೇವೆ ಹೇಗೆ ಮಾಡಬೇಕು ಎನ್ನುವುದನ್ನು ಮಂಜುನಾಥ್ ತೋರಿಸಿಕೊಟ್ಟಿದ್ದಾರೆ. ಮುಂದೆ ಬರುವ ವೈದ್ಯರು, ನಿರ್ದೇಶಕರಿಂದ ಆ ರೀತಿಯ ಸೇವೆ ಮಾಡಿಸಿ ಆ ನಂತರ ಈ ರೀತಿಯ ವಿಚಾರಗಳನ್ನು ಪ್ರಸ್ತಾಪಿಸಲಿ. ಪಾರದರ್ಶಕವಾಗಿ, ಬಡವರ ಪರವಾಗಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಬಹಳ ಸಮರ್ಥವಾಗಿ ಮುನ್ನಡೆಸಿದ್ದಾರೆ. 

ದೇವರ ಲೆಕ್ಕ ಎಂದು ಹೇಳುವ ರೀತಿಯಲ್ಲಿ ಡಾ.ಮಂಜುನಾಥ್ ಸೇವೆ ಮಾಡಿದ್ದಾರೆ. ಅಂತಹ ವ್ಯಕ್ತಿ ಬಗ್ಗೆ ಈ ರೀತಿಯ ಯೋಚನೆ ಮಾಡಿರುವ ಕಾಂಗ್ರೆಸ್‌ನವರಿಗೆ ಜನರು ಒಳ್ಳೆಯದು ಮಾಡುವುದಿಲ್ಲ. ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ಡಾ.ಸಿ.ಎನ್.ಮಂಜುನಾಥ್ ವಿರುದ್ಧ ತನಿಖೆ ಮಾಡುವ ನಿರ್ಣಯ ಮಾಡಿದರೆ ಇಡೀ ರಾಜ್ಯ ದಂಗೆ ಏಳುತ್ತದೆ. ಹೃದಯವನ್ನು ಸರಿಪಡಿಸಿಕೊಂಡಿರುವ ಕುಟುಂಬಗಳು ಬೀದಿಗಿಳಿದು ಹೋರಾಟ ಮಾಡಲಿವೆ. ಆ ರೀತಿಯ ಯೋಚನೆ ಮಾಡುವುದರಿಂದ ಕಾಂಗ್ರೆಸ್ಸಿಗರು ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ ಎಂದರು.

ದೇಶ-ವಿದೇಶಗಳ ಜನರು ಜಯದೇವ ಹೃದ್ರೋಗ ಆಸ್ಪತ್ರೆಗೆ ಬಂದು ಡಾ.ಮಂಜುನಾಥ್ ಅವರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ನಾನು ಸಂಸದನಾಗಿದ್ದ ಸಮಯದಲ್ಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ರೀತಿ ಕೆಲಸ ಮಾಡಬೇಕು ಎಂದಿದ್ದಾರೆ. ಅವೆಲ್ಲವೂ ಸಿದ್ದರಾಮಯ್ಯನವರಿಗೆ ಮರೆತುಹೋಯಿತಾ. ಇದು ಅವರಿಗೆ ಗೌರವ ತರುವ ವಿಚಾರವಲ್ಲ ಎಂದು ನುಡಿದರು.