ಸಾರಾಂಶ
ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ (ಜಾತಿಗಣತಿ) ದತ್ತಾಂಶಕ್ಕೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, 11 ಸಚಿವರು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ (ಜಾತಿಗಣತಿ) ದತ್ತಾಂಶಕ್ಕೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, 11 ಸಚಿವರು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತು ಸಮಾಲೋಚನೆ ನಡೆಸಲಾಯಿತು. ಇನ್ನು ಕೆಲ ಸಚಿವರು ತಮ್ಮ ಅಭಿಪ್ರಾಯ ಸಲ್ಲಿಸಬೇಕಿರುವ ಕಾರಣ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮತ್ತಷ್ಟು ವಿಸ್ತೃತವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವರು ಸಲ್ಲಿಸಿರುವ ಅಭಿಪ್ರಾಯದಲ್ಲಿ ವೈಯಕ್ತಿಕ ಅಭಿಮತದ ಜತೆಗೆ ಅವರ ಸಮುದಾಯದ ಮುಖಂಡರಿಂದ ಸಂಗ್ರಹಿಸಿದ ಮಾಹಿತಿಯೂ ಇದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸುವ ಅವಶ್ಯಕತೆ ಇರುವ ಕಾರಣ ಸಮರ್ಪಕವಾದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ಎಲ್ಲಾ ಸಚಿವರು ತಮ್ಮ ಅಭಿಪ್ರಾಯ ಸಲ್ಲಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಅಭಿಪ್ರಾಯ ಪಡೆದು ತೀರ್ಮಾನ:
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಬಗ್ಗೆ ಚರ್ಚೆ ನಡೆಸಲಾಯಿತು. 11 ಸಚಿವರು ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಇನ್ನುಳಿದ ಸಚಿವರು ಅಭಿಪ್ರಾಯ ಸಲ್ಲಿಸಲಿದ್ದಾರೆ. ಅವರ ಅಭಿಪ್ರಾಯಗಳನ್ನು ಪಡೆದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ವರದಿಯ ದತ್ತಾಂಶಗಳ ಕುರಿತು ಕೆಲ ಸಚಿವರು ಕೇಳಿದ ಪ್ರಶ್ನೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಉತ್ತರ ನೀಡಿದರು. ವರದಿಯ ಕುರಿತು ಮತ್ತಷ್ಟು ವಿಸ್ತೃತವಾಗಿ ಚರ್ಚೆ ನಡೆಯಬೇಕಿರುವ ಕಾರಣ ಮತ್ತು ಇನ್ನಷ್ಟು ಸಚಿವರು ತಮ್ಮ ಅಭಿಪ್ರಾಯವನ್ನು ಮಂಡಿಸಬೇಕಾಗಿರುವ ಕಾರಣ ಮುಂದಿನ ವಾರ ನಡೆಯುವ ಸಚಿವ ಸಂಪುಟ ಸಭೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ನಿನ್ನೆ ಸಂಪುಟದಲ್ಲಿ ಏನಾಯ್ತು?
11 ಸಚಿವರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಜಾತಿಗಣತಿಯ ಕುರಿತು ಲಿಖಿತವಾಗಿ ಅಭಿಪ್ರಾಯ ಸಲ್ಲಿಕೆ
ಇನ್ನೂ ಕೆಲವು ಸಚಿವರಿಂದ ಅಭಿಪ್ರಾಯ ಸಲ್ಲಿಕೆ ಬಾಕಿ, ಹೀಗಾಗಿ ಮುಂದಿನ ಸಭೇಲಿ ಅಭಿಪ್ರಾಯ ಸಂಗ್ರಹ
ಕೆಲ ಸಮುದಾಯದ ಮುಖಂಡರ ಅಭಿಪ್ರಾಯಗಳ ಕುರಿತು ಸುದೀರ್ಘ ಚರ್ಚೆಯ ಕುರಿತು ಸಂಪುಟದ ಒಲವು
ಹೀಗಾಗಿ ಜಾತಿಗಣತಿ ಕುರಿತ ವಿಸ್ತೃತ ಚರ್ಚೆ, ಅಂತಿಮ ನಿರ್ಧಾರ ಮುಂದಿನ ಸಂಪುಟ ಸಭೆಗೆ ಮುಂದೂಡಿಕೆ