ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಬಿಜೆಪಿ- ಜೆಡಿಎಸ್‌ ಪ್ರತಿಭಟಿಸಲಿದೆ. ಚಿಕ್ಕಬಳ್ಳಾಪುರದಲ್ಲಿ ಸಹ ಪ್ರತಿಭಟನೆ ನಡೆಸಲಿದೆ. ಆದ್ದರಿಂದ ಈಗಲೇ ಕಾಂಗ್ರೆಸ್‌ ಸರ್ಕಾರ ತೈಲ ದರ ಏರಿಕೆ ಆದೇಶ ವಾಪಸ್‌‌ ಪಡೆಯಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಕಾಂಗ್ರೆಸ್‌ ಸರ್ಕಾರ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿಲ್ಲ. ಇದರ ಪರಿಣಾಮ ಖಜಾನೆ ಖಾಲಿಯಾಗಿ ತೈಲ ದರ ಏರಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೀರಸಂದ್ರದ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಬಿಜೆಪಿ ಮತ್ತು ಜೆಡಿಎಸ್‌ ವತಿಯಿಂದ ತೈಲ ದರ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಯಾವುದಕ್ಕೆ ಪೂಜೆ ಮಾಡೋಣ

ಮದ್ಯ, ಸ್ಟಾಂಪ್‌ ಡ್ಯೂಟಿ, ವಿದ್ಯುತ್‌, ಹಾಲಿನ ದರ ಸೇರಿದಂತೆ ಹಲವಾರು ದರಗಳನ್ನು ಕಾಂಗ್ರೆಸ್‌ ಸರ್ಕಾರ ಏರಿಕೆ ಮಾಡಿದೆ. ಈಗ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡಿ ಬಡವರ ಬದುಕಿಗೆ ಕೊಡಲಿ ಪೆಟ್ಟು ಕೊಟ್ಟಿದೆ. ಉಚಿತ ಕೊಡುತ್ತೇವೆಂದು ಹೇಳಿ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟನೆ ನಡೆಸಿ ಗ್ಯಾಸ್‌ ಸಿಲಿಂಡರ್‌ಗೆ ಪೂಜೆ ಮಾಡಿದ್ದರು. ಈಗ ನಾವು ಯಾವುದಕ್ಕೆ ಪೂಜೆ ಮಾಡಬೇಕು ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರಕ್ಕೆ ಕಿವಿ, ಕಣ್ಣು ಇಲ್ಲ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳದೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಪ್ರಧಾನಿ ಮೋದಿಯವರು ಕೋವಿಡ್‌ ಇದ್ದಾಗಲೂ ತೈಲ ದರ ಇಳಿಕೆ ಮಾಡಿದ್ದರು. ಲೋಕಸಭೆ ಫಲಿತಾಂಶ ಬಂದು ಹದಿನೈದು ದಿನಗಳಾಗುವ ಮೊದಲೇ ದ್ವೇಷದ ರಾಜಕಾರಣದಿಂದ ಬೆಲೆ ಏರಿಸಲಾಗಿದೆ. ಆದ್ದರಿಂದ ಕಾಂಗ್ರೆಸ್‌ ನಾಯಕರಿಗೆ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ ಎಂದರು. ಆರ್ಥಿಕ ವ್ಯವಸ್ಥೆ ಹಾಳಾಗಿದೆ

ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ 97 ರು. ಇದೆ. ಆದರೆ ಕಾಂಗ್ರೆಸ್‌ ಆಡಳಿತ ರಾಜ್ಯದಲ್ಲಿ 100 ರು. ಗೂ ಹೆಚ್ಚು ದರವಿದೆ. ದೂರದೃಷ್ಟಿ ಇಲ್ಲದೆ ಅಧಿಕಾರ ಹಿಡಿಯಲು ಸುಳ್ಳು ಹೇಳಿದ್ದು, ಈಗ ಇಡೀ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ದಲಿತರಿಗೆ ಸೇರಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಕಾಂಗ್ರೆಸ್‌ ನಾಯಕರು ಲೂಟಿ ಮಾಡಿದ್ದಾರೆ. ಲ್ಯಾಂಬೋರ್ಗಿನಿ ಕಾರು ಖರೀದಿಸಲು ಬಡವರ ಹಣವನ್ನು ಪಡೆಯಲಾಗಿದೆ. ಆದರೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ದಲಿತರ ಉದ್ಧಾರದ ಮಾತುಗಳನ್ನೇ ಆಡಿತ್ತು ಎಂದು ಆಕ್ರೋಶ ಹೊರಹಾಕಿದರು.ಆದೇಶ ವಾಪಸ್‌ ಪಡೆಯಿರಿಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಪ್ರತಿಭಟಿಸಲಿದೆ. ನಾಳೆ ಚಿಕ್ಕಬಳ್ಳಾಪುರದಲ್ಲಿ ಸಹ ಪ್ರತಿಭಟನೆ ನಡೆಸಲಿದೆ. ಆದ್ದರಿಂದ ಈಗಲೇ ಕಾಂಗ್ರೆಸ್‌ ಸರ್ಕಾರ ತೈಲ ದರ ಏರಿಕೆ ಆದೇಶ ವಾಪಸ್‌‌ ಪಡೆಯಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.