ತೈಲ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jun 18 2024, 12:50 AM IST / Updated: Jun 18 2024, 04:48 AM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಗತ್ಯವಾದ ದಿನಬಳಕೆಯ ವಸ್ತುಗಳ ಬೆಲೆಗಳು ಇಳಿಕೆ ಮಾಡುತ್ತೇವೆ ಮತ್ತು ೫ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ ಎಂದು ಆಮಿಷವೊಡ್ಡಿತ್ತು. ಈಗ ಅಧಿಕಾರಕ್ಕೆ ಬಂದ ಬಳಿಕ ತೆರಿಗೆ ಹೆಚ್ಚಿಸಲಾಗುತ್ತಿದೆ

 ಕೋಲಾರ :   ಪೆಟ್ರೋಲ್ ಮತ್ತು ಡೀಸೆಲ್‌ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. 

ಎತ್ತಿನ ಬಂಡಿ, ಸೈಕಲ್ ಸವಾರಿ ಮೂಲಕ ಅಣುಕು ಪ್ರದರ್ಶನ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಮತ್ತು ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ರಾಜ್ಯದ ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಹಿಂದೆ ಕಾಂಗ್ರೆಸ್‌ ವಿರೋಧಿಸಿತ್ತು

ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಅಧಿಕಾರಕ್ಕೆ ಬರುವ ಮುನ್ನ ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಡೀಸೆಲ್‌ ಪೆಟ್ರೋಲ್ ದರ ಏರಿಕೆ ಮಾಡಿದಾಗ ರಾಜ್ಯ ಬಸವರಾಜ ಬೊಮ್ಮಾಯಿ ಆಡಳಿತದ ಬಿಜೆಪಿ ಸರ್ಕಾರವು ಜನವಿರೋಧಿ ಸರ್ಕಾರವಾಗಿದ್ದು ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವು ಆರೋಪಿಸಿತ್ತು ಎಂದು ನೆನಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಗತ್ಯವಾದ ದಿನಬಳಕೆಯ ವಸ್ತುಗಳ ಬೆಲೆಗಳು ಇಳಿಕೆ ಮಾಡುತ್ತೇವೆ ಮತ್ತು ಉಚಿತವಾಗಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಜನತೆಗೆ ಆಮಿಷವೊಡ್ಡಿ ತದನಂತರ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿಗಳ ಯೋಜನೆಗಾಗಿ ವಿದ್ಯುತ್ ದರ, ಬಸ್ ದರ, ಆಹಾರ ಧಾನ್ಯಗಳ ಬೆಲೆಗಳು ಹಾಲಿನ ದರ, ನೋಂದಣಿಯ ಸ್ಟ್ಯಾಂಪ್ ದರ ಹೆಚ್ಚಳದ ಜೊತೆಗೆ ಅಗತ್ಯ ವಸ್ತುಗಳ ದರಗಳನ್ನು ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಚುನಾವಣೆ ಸೋಲಿನಿಂದ ಹತಾಶೆ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಹೋದ ಹಿನ್ನೆಲೆಯಲ್ಲಿ ಹತಾಶೆಯಾಗಿರುವ ಕಾಂಗ್ರೆಸ್‌ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಿತ್ತು, ಆದರೆ ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಮತ್ತು ತಾಪಂಗಳ ಮೇಲೆ ದುಷ್ಟಪರಿಣಾಮ ಬೀರಲಿದೆ ಎಂಬ ಹಿನ್ನೆಲೆಯಲ್ಲಿ ಬಿಟ್ಟಿ ಯೋಜನೆಗಳನ್ನು ಜೀವಂತವಾಗಿಟ್ಟುಕೊಂಡು ಮುಂದುವರೆಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್‌ ದರಗಳನ್ನು ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 13 ತಿಂಗಳು ಕಳೆದರೂ ಶೂನ್ಯ ಸಾಧನೆ ಮಾಡಿದೆ. ಪಾರ್ಲಿಮೆಂಟ್‌ನಲ್ಲಿ ೨೮ ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದವರು ಕೇವಲ ೯ ಸ್ಥಾನಗಳನ್ನು ಪಡೆದುಕೊಂಡು ಭಾರಿ ನಿರಾಶೆಗೊಂಡು ಮುಖಭಂಗಕ್ಕೆ ತುತ್ತಾಗಿ ಬಿಜೆಪಿ ಮೇಲೆ ಇಲ್ಲಸಲ್ಲದ ಅನಾರೋಗ್ಯಕರ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಪಹಾಸ್ಯಕ್ಕೆ ತುತ್ತಾಗಿದ್ದಾರೆ ಎಂದರು.

ತೈಲ ದರ ಇಳಿಸದಿದ್ದರೆ ಹೋರಾಟ

ರಾಜ್ಯ ಸರ್ಕಾರ ಗೋಸುಂಬೆ ನಾಟಕವಾಡುವುದು ಬಿಟ್ಟು ಕೂಡಲೇ ಏರಿಕೆ ಮಾಡಿರುವ ಪೆಟ್ರೋಲ್, ಡೀಸೆಲ್ ದರಗಳನ್ನು ಇಳಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು, ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಯುವ ಮುಖಂಡ ಓಂಶಕ್ತಿ ಚಲಪತಿ, ಬಂಗಾರಪೇಟೆ ಜಿ.ಪಂ. ಮಾಜಿ ಸದಸ್ಯ ಬಿ.ವಿ.ಮಹೇಶ್, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ, ಪದಾಧಿಕಾರಿಗಳಾದ ಕೆಂಬೋಡಿ ನಾರಾಯಣಸ್ವಾಮಿ, ತಲಗುಂದ ನರಸಿಂಹಮೂರ್ತಿ, ಬೆಗ್ಲಿಸೂರ್ಯ ಪ್ರಕಾಶ್, ರೋಣೂರು ಚಂದ್ರಶೇಖರ್, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್, ಮಹೇಶ್, ಕೋಳಿ ನಾಗರಾಜ್ ಸಾ.ಮಾ.ಬಾಬು, ಪಿ.ಎಸ್.ಸತ್ಯನಾರಾಯಣರಾವ್, ರೈತ ಮೋರ್ಚಾ ಶಿವಕುಮಾರ್, ಮತ್ತಿತರರು ಇದ್ದರು.