ಕದ್ದಾಲಿಸಿದ್ದೇ ಆಗಿದ್ರೆ ನನ್ನ ಸರ್ಕಾರವೇಕೆ ಬೀಳ್ತಿತ್ತು?: ಎಚ್‌ಡಿಕೆ

| Published : Apr 12 2024, 05:39 AM IST

HD Kumaraswamy
ಕದ್ದಾಲಿಸಿದ್ದೇ ಆಗಿದ್ರೆ ನನ್ನ ಸರ್ಕಾರವೇಕೆ ಬೀಳ್ತಿತ್ತು?: ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ವಿರುದ್ಧ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಡಿರುವ ಆದಿಚುಂಚನಗಿರಿ ಶ್ರೀಗಳ ಫೋನ್‌ ಟ್ಯಾಪಿಂಗ್‌ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಕಲಗೂಡು :  ತಮ್ಮ ವಿರುದ್ಧ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಡಿರುವ ಆದಿಚುಂಚನಗಿರಿ ಶ್ರೀಗಳ ಫೋನ್‌ ಟ್ಯಾಪಿಂಗ್‌ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಪೋನ್ ಟ್ಯಾಪಿಂಗ್ ಮಾಡಿದ್ದೇ ಆಗಿದ್ದರೆ ಅಂದು ನನ್ನ ಸರ್ಕಾರ ಯಾಕೆ ಬೀಳಲು ಬಿಡುತ್ತಿದ್ದೆ ಎಂದು ಕಿಡಿಕಾರಿರುವ ಅವರು, ಈ ಸಂಬಂಧ ತನಿಖೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ನಿರ್ಮಲಾನಂದ ಶ್ರೀಗಳ ಫೋನ್‌ ಕದ್ದಾಲಿಕೆಗೆ ಸಂಬಂಧಿಸಿ ಚಲುವರಾಯಸ್ವಾಮಿ ಮಾಡಿರುವ ಆರೋಪಕ್ಕೆಗುರುವಾರ ರಾಮನಾಥಪುರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಬೇಕಿದ್ದರೆ ಫೋನ್‌ ಟ್ಯಾಪಿಂಗ್‌ಗೆ ಸಂಬಂಧಿಸಿ ತನಿಖೆ ಮಾಡಿಕೊಳ್ಳಲಿ. ಈವರೆಗೆ ತನಿಖೆ ಮಾಡಿದ್ರಲ್ವಾ, ಅದು ಏನಾಯ್ತು?’ ಎಂದರು. ಜತೆಗೆ, ಕೆಲವರು ಅಪಪ್ರಚಾರದ ಮೂಲಕ ಪ್ರಚಾರ ಗಿಟ್ಟಿಸುವ ಭ್ರಮೆಯಲ್ಲಿರುತ್ತಾರೆ ಎಂದು ಕಿಡಿಕಾರಿದರು.

ಆದಿ ಚುಂಚನಗಿರಿಗೆ ಪರ್ಯಾಯವಾಗಿ ಮತ್ತೊಂದು ಮಠ ಮಾಡಿದರು ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ‘ಬೇರೆ ಸಮುದಾಯದಲ್ಲೂ ಅನೇಕ ಮಠಗಳಿವೆ, ನಮ್ಮ ಸಮುದಾಯದಲ್ಲೂ ಆ ರೀತಿಯ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ’ ಎಂದರು.

ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ‘ಕಾದು ನೋಡಿ, ರಾಜಕೀಯ ಅಂದ ಮೇಲೆ ಹರಿಯೋ ನೀರಿದ್ದಂತೆ. ಯಾವಾಗ ಏನೇನಾಗುತ್ತೆ ಎಂಬುದು ನಮಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ. ಅವರು ಸಚಿವರು, ನಾಯಕರು. ಹಾಗಾಗಿ ಹೇಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅವರನ್ನೇ ಕೇಳಿ’ ಎಂದು ಚಲುವರಾಯಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.

ಜೆಡಿಎಸ್ ಒಂದೂ ಸ್ಥಾನ ಗೆಲ್ಲಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೂ ತಿರುಗೇಟು ನೀಡಿದ ಅವರು, ‘ಅವರು ಭವಿಷ್ಯ ಹೇಳುವುದರಲ್ಲಿ ಎಕ್ಸ್‌ಪರ್ಟ್, ಅವರು ಜ್ಯೋತಿಷಿ ಅಲ್ವಾ? ಅವರ‌ ಬ್ಯಾಗ್ ತೆಗೆದರೆ ಜ್ಯೋತಿಷ್ಯದ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅವರು ಸಂಶೋಧನೆ ಮಾಡಿರಬಹುದು. ಅದನ್ನೇ ಈಗ ಹೇಳಿದ್ದಾರೆ. ನಾವೂ ರಿಸರ್ಚ್ ಮಾಡಿದ್ದೇವೆ, ಈ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯಲು ಏನು ಮಾಡಬೇಕೋ ಜನ ಅದನ್ನು ಮಾಡುತ್ತಾರೆ. ಹಿಂದೆ ಹೋದ ಕಡೆ ಜನ ಕುಮಾರಸ್ವಾಮಿ ಮುಖ್ಯಮಂತ್ರಿ ಅಂತ ಕೂಗೋರು. ಈಗ ಕೇಂದ್ರದ ಮಂತ್ರಿ ಆಗ್ತಾರೆ ಅಂತ ಕೂಗು ಹಾಕುತ್ತಿದ್ದಾರೆ ಎಂದರು ಕುಮಾರಸ್ವಾಮಿ.

ಕಾಂಗ್ರೆಸ್ಸಿಗರು ಜೆಡಿಎಸ್ ಎಲ್ಲಿದೆ ಅನ್ನೋ ದುರಹಂಕಾರ ಮಾತನ್ನು ಆಡುತ್ತಿದ್ದಾರೆ. ಅವರ ಸಹವಾಸ ಮಾಡಿದ್ದಕ್ಕೇ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟ್ರಲ್ಲ. ಅದಕ್ಕೆ‌ ಮರು ಜೀವ ಕೊಡಲು ನಾನೀಗ ಪ್ರಯತ್ನ ಮಾಡ್ತಾ ಇದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.