ಸಾರಾಂಶ
ಕೋಲಾರ : ಕಾಂಗ್ರೆಸ್ ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಜಮ್ಮು ಮತ್ತು ಕಾಶ್ಮಿರದಲ್ಲಿ ಪಾಕಿಸ್ತಾನದವರು ಯುದ್ದ ಮಾಡುತ್ತಿದ್ದರು ಆದರೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಜಮ್ಮು ಕಾಶ್ಮೀರ ಶಾಂತವಾಗಿದೆ. ಇದೀಗ ಕರ್ನಾಟಕದ ವಿಧಾನಸೌದದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷ ವಾಕ್ಯಗಳು ಮೊಳಗುತ್ತಿವೆ. ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿರುತ್ತದೋ ಅಲ್ಲಿ ಪಾಕಿಸ್ತಾನ ಪ್ರೇಮಿಗಳು ಹೆಚ್ಚಾಗುತ್ತಾರೆ ಅದಕ್ಕಾಗಿ ಕಾಂಗ್ರೆಸ್ ತೊಲಗಿಸಿ ಭಾರತ ಉಳಿಸೋಣ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕರೆ ನೀಡಿದರು.
ತಾಲೂಕಿನ ಷಾಪೂರಿನಲ್ಲಿ ಹುತ್ತೂರು ಹೋಬಳಿ ಮಟ್ಟದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೋಲಾರದಲ್ಲಿ ಕಾಂಗ್ರೆಸ್ ನವರು ಎರಡು ಲಕ್ಷ ಮತಗಳನ್ನು ಬಿಟ್ಟು ಲೆಕ್ಕ ಹಾಕಲಿ ಎಂದು ಹೇಳಿದ್ದಾರೆ, ಆದರೆ ಕಾಂಗ್ರೆಸ್ ನವರು ಐದು ಲಕ್ಷ ಮತಗಳನ್ನು ಬಿಟ್ಟು ಮುಂದೆ ಲೆಕ್ಕ ಹಾಕಲಿ, ಅವರು ಒಂದಾದರೆ ನಾವು ಒಂದಾಗೋದು ಅವರಿಂದ ಕಲಿಯಬೇಕಾ, ಅವರ ಹಿಂದೆ ಒಂದು ಸಣ್ಣ ಸಮುದಾಯ ಇದ್ದರೆ ನಮ್ಮ ಹಿಂದೆ ಬಹುದೊಡ್ಡ ಸಮುದಾಯವಿದೆ ಎಂದರು.
ಸಿದ್ದರಾಮಯ್ಯ ಬಂದಾಗ ಬರ
ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದರಿಂದ ಏನಿಲ್ಲ ಏನಿಲ್ಲ ನೀರಿಲ್ಲ ಅನ್ನುವಂತಾಗಿದೆ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗ ಐದು ವರ್ಷ ಬರಗಾಲವಿತ್ತು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಳೆ ಜೋರಾಯ್ತು ಇದೀಗ ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಬರ ನಿರ್ವಹಣೆ ಮಾಡಿ ಅಂದರೆ ಖಜಾನೆಯಲ್ಲಿ ದುಡ್ಡಿಲ್ಲ ಅಂತಾರೆ, ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ವೇತನ ಕೊಡಲು ಹಣ ಇಲ್ಲದಂತಾಗಿದೆ ಎಂದರು.
ಶಕ್ತಿ ತುಂಬಿದ ಹುತ್ತೂರು
ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ನಮ್ಮ ಕುಟುಂಬಕ್ಕೆ ರಾಜಕೀಯ ಜನ್ಮ ಕೊಟ್ಟಿದ್ದು ಹುತ್ತೂರು ಹೋಬಳಿ ನಮ್ಮ ತಾಯಿಯವರನ್ನು ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿದ್ದು ಹುತ್ತೂರು ಹೋಬಳಿಯ ಜನ, ನಾನು ಎರಡು ಭಾರಿ ವಿಧಾನಸಭೆಗೆ ಸ್ಪರ್ಧಿಸಿದಾಗಲೂ ಹುತ್ತೂರು ಹೋಬಳಿಯಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಮತಗಳು ಅಂತರ ಕೊಟ್ಟಿದ್ದೀರ, ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಶಕ್ತಿ ತುಂಬಲಿದ್ದೀರ ಎಂಬ ಭರವಸೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಮಾಜಿ ಶಾಸಕರಾದ ಮಂಜುನಾಥಗೌಡ, ವೈ.ಸಂಪಂಗಿ, ಬಿ.ಪಿ.ವೆಂಕಟ ಮುನಿಯಪ್ಪ, ಎಂ.ನಾರಾಯಣಸ್ವಾಮಿ, ಜಿ.ಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ಮಹೇಶ್, ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಮುಖಂಡರಾದ ಸಂಪಂಗಿರೆಡ್ಡಿ, ಮುನಿರಾಜು, ವಿಶ್ವನಾಥ್ ಇದ್ದರು.