ನವೆಂಬರ್‌ಗೆ ಕ್ರಾಂತಿ ಇಲ್ಲ, ಅದೆಲ್ಲ ಬರೀ ಭ್ರಾಂತಿ: ಸಿದ್ದು

| Published : Oct 07 2025, 01:03 AM IST

ಸಾರಾಂಶ

ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗಲಿದೆ ಎಂಬ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನವೆಂಬರ್‌ಗೆ ಯಾವ ಕ್ರಾಂತಿಯೂ ಇಲ್ಲ. ಅದೆಲ್ಲಾ ಬರೀ ಭ್ರಾಂತಿ ಅಷ್ಟೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ತನ್ಮೂಲಕ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ತಾವೇ ಮುಂದುವರಿಯುವುದಾಗಿ ಖಡಾಖಂಡಿತವಾಗಿ ಸಾರಿದ್ದಾರೆ.

- ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಸ್ಪಷ್ಟೋಕ್ತಿ

---

ಕನ್ನಡಪ್ರಭ ವಾರ್ತೆ ಕೊಪ್ಪಳ

ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗಲಿದೆ ಎಂಬ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನವೆಂಬರ್‌ಗೆ ಯಾವ ಕ್ರಾಂತಿಯೂ ಇಲ್ಲ. ಅದೆಲ್ಲಾ ಬರೀ ಭ್ರಾಂತಿ ಅಷ್ಟೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ತನ್ಮೂಲಕ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ತಾವೇ ಮುಂದುವರಿಯುವುದಾಗಿ ಖಡಾಖಂಡಿತವಾಗಿ ಸಾರಿದ್ದಾರೆ.

ಸೋಮವಾರ ಕೊಪ್ಪಳಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಮಾಧ್ಯಮದವರು, ‘ನವೆಂಬರ್​ ಕ್ರಾಂತಿ ನಿಜನಾ ಸರ್’​ ಎಂದು ಪ್ರಶ್ನಿಸಿದರು. ಈ ವೇಳೆ, ಗರಂ ಆದ ಸಿಎಂ, ‘ಯಾವ ಕ್ರಾಂತಿಯೂ ಇಲ್ಲ, ಅದೆಲ್ಲಾ ಬರೀ ಭ್ರಾಂತಿ ಕಣ್ರಿ’ ಎಂದರು.

ರಾಜ್ಯ ರಾಜಕೀಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ವಿಷಯ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ದಿನಗಳ ಹಿಂದೆ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು, ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾಗಲಿದೆ ಎಂಬ ಹೇಳಿಕೆ ನೀಡಿ ಬಳಿಕ ಉಲ್ಟಾ ಹೊಡೆದಿದ್ದರು. ಭಾನುವಾರ ಮೈಸೂರಿನಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ‘ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ’ವಾಗಲಿದೆ ಎಂದಿದ್ದರು. ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕೂಡ, ‘ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ, ಈ ಬಗ್ಗೆ ನನಗೆ ಸ್ಪಷ್ಟ ಮಾಹಿತಿಯಿದೆ’ ಎಂದಿದ್ದರು. ಇದೇ ವೇಳೆ, ಹೈಕಮಾಂಡ್‌ ನ ಸ್ಪಷ್ಟ ಸೂಚನೆ ನಡುವೆಯೂ, ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿ ಕಾಂಗ್ರೆಸ್‌ನ ಹಲವು ಶಾಸಕರು, ಸಚಿವರು ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದರು. ಈಗ ಸಿದ್ದು, ಈ ಎಲ್ಲಾ ಚರ್ಚೆಗೆ ತೆರೆ ಎಳೆಯುವ ಯತ್ನ ನಡೆಸಿದ್ದಾರೆ.