ಗಣತಿ ಡಿಕೆಶಿ ಬಳಿಕ ಸೋಮಣ್ಣ ಗರಂ - ಕೆಲ ಪ್ರಶ್ನೆಗೆ ಸಿದ್ದು, ಡಿಕೆಶಿ ಹೆಸ್ರು ಬರ್ಕೊಳ್ಳಿ ಎಂದ ಸಚಿವ

| N/A | Published : Oct 06 2025, 11:38 AM IST

V Somanna
ಗಣತಿ ಡಿಕೆಶಿ ಬಳಿಕ ಸೋಮಣ್ಣ ಗರಂ - ಕೆಲ ಪ್ರಶ್ನೆಗೆ ಸಿದ್ದು, ಡಿಕೆಶಿ ಹೆಸ್ರು ಬರ್ಕೊಳ್ಳಿ ಎಂದ ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಕ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಜಾತಿ ಗಣತಿಗೆ ಬಂದಿದ್ದ ಗಣತಿದಾರರ ತರೇಹವಾರಿ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ.

  ಬೆಂಗಳೂರು :  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಕ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಜಾತಿ ಗಣತಿಗೆ ಬಂದಿದ್ದ ಗಣತಿದಾರರ ತರೇಹವಾರಿ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ.

ಭಾನುವಾರ ವಿಜಯನಗರದಲ್ಲಿರುವ ಸೋಮಣ್ಣ ಅವರ ಅವರ ನಿವಾಸಕ್ಕೆ ಜಾತಿ ಗಣತಿ ಸಂಬಂಧ ಸುಮಾರು ಒಂಬತ್ತು ಮಂದಿ ಆಗಮಿಸಿದ್ದರು. ಇದನ್ನು ಕಂಡ ಸೋಮಣ್ಣ ಅವರು ಇಷ್ಟು ಜನ ಏಕೆ ಬಂದಿದ್ದೀರಿ ಎಂದು ತುಸು ಬೇಸರದಿಂದಲೇ ಪ್ರಶ್ನಿಸಿದರು.

ಮುಂದೆ ನಮ್ಮ ಕೇಂದ್ರ ಸರ್ಕಾರ ಗಣತಿ ಮಾಡಿಸಲಿದೆ. ಆಗ ಹೇಗೆ ಮಾಡಿಸುತ್ತೆ ನೋಡಿ. ಅದನ್ನು ಕೂಡ ನೀವೇ ಮಾಡಬೇಕಾಗುತ್ತದೆ. ಸಮೀಕ್ಷೆಗೆ ಇಷ್ಟು ಪ್ರಶ್ನೆಗಳು ಬೇಕೇ? ಇದೆಲ್ಲವನ್ನೂ ನೀವೇ ಸರ್ಕಾರಕ್ಕೆ ತಿಳಿಸಬೇಕು. ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಕ್ಲಾಸ್‌ ತೆಗೆದುಕೊಂಡರು ಎನ್ನಲಾಗಿದೆ.

ಸಮೀಕ್ಷೆ ನಡೆಸುವ ಸಿಬ್ಬಂದಿ ನಿಮ್ಮ ಉಪಜಾತಿ ಯಾವುದು ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಬರೆದುಕೊಳ್ಳಿ. ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಎಂದೇ ಮಾಡಿಕೊಳ್ಳಿ ಎಂದು ವ್ಯಂಗ್ಯವಾಗಿ ಹೇಳಿದರು.

ನಿಮ್ಮ ವಿವಾಹ ಆದಾಗ ಎಷ್ಟು ವರ್ಷ ಎಂಬ ಪ್ರಶ್ನೆ ಸಿಬ್ಬಂದಿಯಿಂದ ಬಂದಾಗ, ಇದೆಲ್ಲ ಯಾಕೆ ಬೇಕು? ನಮ್ಮ ಅಪ್ಪ ಅಮ್ಮನನ್ನು ಕೇಳಬೇಕು. 26 ಅಂತ ಬರೆದುಕೊಳ್ಳಿ ಎಂದುತ್ತರಿಸಿದರು.

ಹಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಹಾಕಿಕೊಳ್ಳಿ. ಈ ಸಮೀಕ್ಷೆಯನ್ನು ಸಿದ್ದರಾಮಯ್ಯ ಅವರು ವೋಟಿಗಾಗಿ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿಯೂ ಸಚಿವ ಸೋಮಣ್ಣ ಹೇಳಿದರು.

ಇನ್ನು ಕೆಲ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡ ಸೋಮಣ್ಣ ಅವರು, ಉತ್ತರ ನೀಡಲು ಆಗದ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳುತ್ತಿದ್ದೀರಿ. ಯಾವನೋ ತಲೆ ಕೆಟ್ಟಿರುವವನೇ ಇದನ್ನು ಮಾಡಿರಬೇಕು. ಆತನನ್ನು ಕರೆಯಿರಿ ಎಂದು ತೀಕ್ಷ್ಣವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಇದೊಂದು ಅವೈಜ್ಞಾನಿಕ ಸಮೀಕ್ಷೆ: ಸೋಮಣ್ಣ

ಇದೊಂದು ಅವೈಜ್ಞಾನಿಕ ಸಮೀಕ್ಷೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲಸಕ್ಕೆ ಬಾರದೆ ಇದನ್ನು ಸೃಷ್ಟಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣ ಹರಿಹಾಯ್ದಿದ್ದಾರೆ.

ಭಾನುವಾರ ತಮ್ಮ ನಿವಾಸದಲ್ಲಿ ಸಮೀಕ್ಷೆ ಕಾರ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಗಾಗಿ ಸುಮಾರು 1 ಗಂಟೆ 4 ನಿಮಿಷಗಳ ಕಾಲ ನನ್ನಿಂದ ಮಾಹಿತಿ ಪಡೆದಿದ್ದಾರೆ. ಇದನ್ನು ಇನ್ನೂ ಸರಳೀಕರಣ ಮಾಡಬೇಕು ಎಂದರು.

ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಸುಮಾರು ಅಧಿಕಾರಿಗಳು ಕೇಳಿದ ಮಾಹಿತಿ ಅನಾವಶ್ಯಕವಾಗಿತ್ತು.

ಇದರಿಂದ ಜನ ಗೊಂದಲ‌ಕ್ಕೆ ಒಳಗಾಗುತ್ತಿದ್ದಾರೆ. ಸಮೀಕ್ಷೆ ಸರಳೀಕರಣ ಮಾಡಬೇಕು. ಈಗಿನ ಸಮೀಕ್ಷೆ ಮಾಡಿ ಮುಗಿಸಲು ಆರು ತಿಂಗಳು ಬೇಕಾಗುತ್ತದೆ ಎಂದು ಕಿಡಿಕಾರಿದರು.

Read more Articles on