ಗಣತಿ ಪ್ರಶ್ನೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಸ್ತು!

| N/A | Published : Oct 05 2025, 01:00 AM IST / Updated: Oct 05 2025, 04:49 AM IST

ಗಣತಿ ಪ್ರಶ್ನೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಸ್ತು!
Share this Article
  • FB
  • TW
  • Linkdin
  • Email

ಸಾರಾಂಶ

  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಪತ್ನಿ ಉಷಾ ಶಿವಕುಮಾರ್‌ ಗಣತಿದಾರರಿಗೆ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಚಾಲನೆ ನೀಡಿದರು. ಸಮೀಕ್ಷೆ ವೇಳೆ ಪ್ರಶ್ನೆಗಳ ಸರಮಾಲೆಗೆ ಡಿ.ಕೆ.ಶಿವಕುಮಾರ್ ಗಣತಿದಾರರ ಮೇಲೆ ಗರಂ ಆದರಲ್ಲದೆ, ಟೂ-ಮಚ್(ತುಂಬಾ) ಪ್ರಶ್ನೆ ಎಂದು ಆಕ್ಷೇಪವನ್ನೂ ವ್ಯಕ್ತಪಡಿಸಿದರು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಶನಿವಾರದಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಪತ್ನಿ ಉಷಾ ಶಿವಕುಮಾರ್‌ ಗಣತಿದಾರರಿಗೆ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಚಾಲನೆ ನೀಡಿದರು. ಸಮೀಕ್ಷೆ ವೇಳೆ ಪ್ರಶ್ನೆಗಳ ಸರಮಾಲೆಗೆ ಡಿ.ಕೆ.ಶಿವಕುಮಾರ್ ಗಣತಿದಾರರ ಮೇಲೆ ಗರಂ ಆದರಲ್ಲದೆ, ಟೂ-ಮಚ್(ತುಂಬಾ) ಪ್ರಶ್ನೆ ಎಂದು ಆಕ್ಷೇಪವನ್ನೂ ವ್ಯಕ್ತಪಡಿಸಿದರು.

ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಬಿಎ ವಿಶೇಷ ಆಯುಕ್ತ ಮನೀಶ್‌ ಮೌದ್ಗಿಲ್‌, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ನೇತೃತ್ವದಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸಿದರು.

ವಿದ್ಯಾರ್ಹತೆ, ಧರ್ಮ, ಜಾತಿ, ಉಪಜಾತಿ, ಉದ್ಯೋಗ, ಸರ್ಕಾರ ಸೌಲಭ್ಯ, ಆದಾಯದ ಮೂಲ, ಮನೆ, ಜಮೀನು, ಆಭರಣ, ಬ್ಯಾಂಕ್‌ ಸಾಲ, ಆಸ್ತಿ ವಿವರ, ಇನ್ನಿತರ ಪ್ರಶ್ನೆಗಳನ್ನು ಗಣತಿದಾರರು ಕೇಳಿದರು. ಆರಂಭದಲ್ಲಿ ಸಮಾಧಾನದಿಂದ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಿದಂತೆ ಗಣತಿದಾರರು ಸೇರಿ ಅಧಿಕಾರಿಗಳ ಮೇಲೆ ಗರಂ ಆದರು. ಇಷ್ಟೊಂದು ಪ್ರಶ್ನೆ ಕೇಳಿದರೆ ಜನ ಸಾಮಾನ್ಯರು ಹೇಗೆ ಉತ್ತರಿಸುತ್ತಾರೆ? ಎಂದರು. ಅಲ್ಲದೆ, ಪ್ರಶ್ನಾವಳಿಯಲ್ಲಿರುವ ವೈಯಕ್ತಿಕ ಪ್ರಶ್ನೆಗಳ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

2 ದಿನ ವಿಳಂಬವಾದರೂ ಪರವಾಗಿಲ್ಲ:

ಪ್ರಶ್ನೆಗಳು ಸರಳವಾಗಿರಬೇಕು. ಆದರೆ ಇಲ್ಲಿ ಟೂ-ಮಚ್ ಪ್ರಶ್ನೆ ಇದೆ ಎಂದ ಅವರು, ಮೊದಲು ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ಎಂಬ ಪ್ರಶ್ನೆ ಇರಬೇಕು. ಜನಸಂಖ್ಯೆ ಮುಖ್ಯ ಅಲ್ಲವೇ? ಎರಡು ದಿನ ತಡವಾದರೂ ಪರವಾಗಿಲ್ಲ. ನಿಧಾನವಾಗಿ ಸಮಾಧಾನದಿಂದ ಜನರಿಂದ ಮಾಹಿತಿ ಸಂಗ್ರಹಿಸಿ ಎಂದು ಗಣತಿದಾರರಿಗೆ ಸಲಹೆ ನೀಡಿದರು.

ಈ ವೇಳೆ ಮೊಬೈಲ್‌ ಸಂಖ್ಯೆ ಕೇಳಿದಾಗ ಮತ್ತೆ ಬೇಸರ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್‌, ತಮ್ಮ ಮೊಬೈಲ್‌ ಸಂಖ್ಯೆ ಬಹಿರಂಗವಾಗುವ ಆತಂಕ ವ್ಯಕ್ತಪಡಿಸಿದ್ದಲ್ಲದೆ, ಮೊಬೈಲ್‌ ಸಂಖ್ಯೆ ಬೇರೆ ಯಾರಿಗೂ ನೀಡದಂತೆ ಗಣತಿದಾರರಿಗೆ ಸೂಚಿಸಿದರು.

ಇದೇ ವೇಳೆ ಪತ್ನಿ ಉಷಾ ಶಿವಕುಮಾರ್ ಸಹ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ದಿನಕ್ಕೆ 20 ಮನೆ ಸಮೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ ಸರ್‌... ಎಂದು ಗಣತಿದಾರ ಹೇಳಿದಾಗ, ನನ್ನ ಮನೆಯಲ್ಲೇ ಒಂದು ಗಂಟೆ ಕೂತ್ಕೊಂಡಲ್ಲಯ್ಯ ಎಂದರು.

ಆಗ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಜೋಳನ್, ಸರ್ ದಿನಕ್ಕೆ 20 ಮನೆ ಸಮೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ, ಈ ಪ್ರಶ್ನಾವಳಿಯಲ್ಲಿ ಕಷ್ಟ ಸಾಧ್ಯ ಎಂದರು.

ಕುರಿ, ಕೋಳಿ, ಟ್ರ್ಯಾಕ್ಟರ್, ಕೋರ್ಟ್‌ ಪ್ರಕರಣ, ಕಾಯಿಲೆ ಬಗ್ಗೆ ಎಲ್ಲಾ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೇ ತಾಳ್ಮೆ ಇಲ್ಲ. ಇನ್ನು ಜನ ಎಲ್ಲಿಂದ ಮಾಹಿತಿ ಕೊಡುತ್ತಾರೆ, ನಡೀರಿ ಎಂದು ಹೇಳುತ್ತಾರೆ. ಸಾಮಾಜಿಕ, ಶೈಕ್ಷಣಿಕ ಮಾಹಿತಿ ಪಡೆದುಕೊಂಡರೆ ಸಾಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಅಗತ್ಯ ಮಾಹಿತಿ ನೀಡಿ-ಡಿಕೆಶಿ:

ಗಣತಿದಾರರಿಗೆ ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಲ್ಲ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ನೀಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ತಮ್ಮ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ತಾವೂ ಎಲ್ಲ ಮಾಹಿತಿ ನೀಡಿದ್ದೇನೆ. ಜನ ಕೂಡ ತಾಳ್ಮೆಯಿಂದ ಮಾಹಿತಿ ಒದಗಿಸಿಕೊಡಬೇಕು. ಈ ಸಮೀಕ್ಷೆಗೆ ಎಲ್ಲ ಜಾತಿ ಸಮುದಾಯದವರು ಸಹಕಾರ ನೀಡಬೇಕೆಂದು ಕೋರಿದರು.

ಹೆಚ್ಚು ಪ್ರಶ್ನೆಗಳಿದ್ದು, ಸರಳೀಕರಣ ಮಾಡಬೇಕಿತ್ತು. ಈ ಪ್ರಶ್ನೆಗಳನ್ನು ನಾನು ಕೂಡ ಇಂದೇ ನೋಡಿದ್ದು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆ. ಕೆಲ ವೈಯಕ್ತಿಕ ಮಾಹಿತಿಯ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಉತ್ತರಿಸಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಈ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು, ಬಿಡುವುದು ಜನರಿಗೆ ಬಿಟ್ಟ ವಿಚಾರ. ಆ ಪ್ರಶ್ನೆ ಉದ್ಭವಿಸಲ್ಲ ಎಂದು ಹೇಳಬಹುದು. ಬೆಂಗಳೂರು ನಗರದಲ್ಲಿ ಸೂಕ್ಷ್ಮತೆಯಿಂದ ಸಮೀಕ್ಷೆ ಮಾಡಬೇಕೆಂದು ಗಣತಿದಾರರಿಗೆ ಸೂಚಿಸಿದ್ದೇನೆ ಎಂದರು.

ಸರ್ವರ್‌ನಲ್ಲಿರುವ ಸಮಸ್ಯೆ ಸರಿಪಡಿಸುತ್ತಾರೆ. ಆನ್‌ಲೈನ್‌ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿ ಜನ ತಾವೇ ಮಾಹಿತಿ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

Read more Articles on