ಬೆಂಗಳೂರು : ಖಾತೆ ಕುರಿತ ಅಸಮಾಧಾನದಿಂದ ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ತಮ್ಮ ಖಾತೆಯ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಗ್ಗೆ ಸಚಿವ ಕೆ.ಎಚ್. ಮುನಿಯಪ್ಪ ಹೈಕಮಾಂಡ್ ಮಧ್ಯಪ್ರವೇಶದ ನಂತರ ‘ಹ್ಯಾಪಿ’ ಆಗಿದ್ದಾರೆ.
ಖುದ್ದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗೊಂದಲ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುನಿಯಪ್ಪ ಅವರ ಅಸಮಾಧಾನ ಶಮನಗೊಂಡಿದೆ ಎಂದು ತಿಳಿದುಬಂದಿದೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್. ಮುನಿಯಪ್ಪ, ‘ನಾನು ಎಂಟು ಬಾರಿ ಗೆದ್ದಿದ್ದೇನೆ. ಹಿರಿಯ ನಾಯಕರಿಗೆ ತಕ್ಕ ಗೌರವ ನೀಡಿಲ್ಲ. ನನ್ನ ಹಿರಿತನಕ್ಕೆ ತಕ್ಕ ಖಾತೆ ನೀಡಿಲ್ಲ. ತಪ್ಪು ತಿದ್ದಿಕೊಳ್ಳಬೇಕು. ಹೀಗೆ ಮುಂದುವರೆದರೆ 2028ಕ್ಕೆ ಕಷ್ಟವಾಗಲಿದೆ’ ಎಂದು ಬಹಿರಂಗ ಎಚ್ಚರಿಕೆ ನೀಡಿದರು.
ಸೇವೆ ಮಾಡುವಂತಹ ಖಾತೆ ನೀಡುವಂತೆ ನಾಯಕರಿಗೆ ಮನವಿ ಮಾಡಿದ್ದೆ.
ನನಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಆಹಾರ ಖಾತೆ ನೀಡಲಾಗಿತ್ತು. ಈಗಲಾದರೂ ಜನರ ಸೇವೆ ಮಾಡುವಂತಹ ಖಾತೆ ನೀಡುವಂತೆ ನಾಯಕರಿಗೆ ಮನವಿ ಮಾಡಿದ್ದೆ. ಆದರೆ, ಈಗಲೂ ಅದೇ ಖಾತೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಇಲಾಖೆಯಂತಹ ಖಾತೆ ನೀಡಿದರೆ ಜನರ ಕೆಲಸ ಮಾಡಬಹುದು ಎಂದು ಹೇಳಿದರು.
ರಾಜೀನಾಮೆ ನೀಡುತ್ತೀರಾ ಎಂಬ ಪ್ರಶ್ನೆಗೆ, ಪಕ್ಷ ನನಗೆ ತಾಯಿ ಸಮಾನ. ನಾನು ರಾಜೀನಾಮೆ ನೀಡುವುದಿಲ್ಲ. ಆದರೆ, ಹೆಚ್ಚು ಬಾರಿ ಗೆದ್ದಿರುವ ನಾನು, ಆರ್.ವಿ. ದೇಶಪಾಂಡೆ, ರಾಮಲಿಂಗಾರೆಡ್ಡಿ ಅಂತಹವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇದನ್ನು ರಾಹುಲ್ ಗಾಂಧಿ ಸೇರಿದಂತೆ ನಾಯಕರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಐ ಆ್ಯಮ್ ಹ್ಯಾಪಿ- ಮುನಿಯಪ್ಪ:
ಮಧ್ಯಾಹ್ನ ರಾಹುಲ್ ಗಾಂಧಿ ಭೇಟಿ ಬಳಿಕ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಜತೆ ಕಾರಿನಲ್ಲಿ ಕುಳಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್. ಮುನಿಯಪ್ಪ, ‘ರಾಹುಲ್ ಗಾಂಧಿ, ಕೆ.ಸಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿದ್ದೆ. ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ’ ಎಂದು ಸಂತಸ ವ್ಯಕ್ತಪಡಿಸಿದರು. ಹೀಗಾಗಿ ಕೆ.ಎಚ್. ಮುನಿಯಪ್ಪ ಅವರ ಖಾತೆ ಕ್ಯಾತೆ ಸದ್ಯಕ್ಕೆ ಬಗೆಹರಿದಿದೆ.
