, ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಯಾರ ಸಂಪರ್ಕಕ್ಕೂ ಸಿಗದೆ ತಮಿಳುನಾಡಿಗೆ ತೆರಳಿದ ಹಿನ್ನೆಲೆಯಲ್ಲಿ ಶುಕ್ರವಾರ ದಿನವಿಡೀ ತೀವ್ರ ಹೈಡ್ರಾಮಾ ಸೃಷ್ಟಿಯಾಯಿತು.

ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಸರಣಿ ಸಭೆ ನಡೆಸಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಕೆ ಮಾಡಲು ಪ್ರಯತ್ನಿಸಿ. ಒಪ್ಪದಿದ್ದರೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್‌ಗಾಂಧಿ ಸೂಚನೆ ನೀಡಿದ್ದು, ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆದು ಜಲಸಂಪನ್ಮೂಲ ಸಚಿವರಾಗಿ ಮುಂದುವರೆಯುತ್ತಾರೆಯೋ ಅಥವಾ ಮುಖ್ಯಮಂತ್ರಿ ಅವರು ರಾಹುಲ್‌ ಸೂಚನೆಯಂತೆ ರಾಜೀನಾಮೆ ಅಂಗೀಕರಿಸುತ್ತಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ಶುಕ್ರವಾರ ಬೆಳಗ್ಗೆ ತಮ್ಮ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ ಅವರು, ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎರಡು ಬಾರಿ ಕೊಟ್ಟ ಮಾತು ತಪ್ಪಿ ಮೋಸ ಮಾಡಿದ್ದಾರೆ. ಹೀಗಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಾಗದೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಘೋಷಿಸಿದರು.

ತಮ್ಮ ಆಪ್ತನ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ ಅವರು, ಬೆನ್ನಲ್ಲೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಮಿಳುನಾಡಿನ ಧರ್ಮಪುರಿಗೆ ತೆರಳಿದ್ದಾರೆ. ಶುಕ್ರವಾರ ರಾತ್ರಿ ಮನೆಗೆ ವಾಪಸಾದ ಅವರು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಧರ್ಮಪುರಿಗೆ ತೆರಳಿದ್ದೆ. ನನಗೆ ಬೆಂಬಲ ಸೂಚಿಸಿದವರಿಗೆಲ್ಲಾ ಧನ್ಯವಾದ ಎಂದು ಹೇಳಿ ಮತ್ತೆ ಮನೆ ಒಳಗೆ ತೆರಳಿದವರು ಯಾರ ಕರೆಗೂ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.

ದಿನವಿಡೀ ಹೈಡ್ರಾಮಾ:

ಶುಕ್ರವಾರ ದಿನವಿಡೀ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ತೀವ್ರ ಹೈಡ್ರಾಮಾ ಸೃಷ್ಟಿಯಾಗಿದ್ದು, ರಾಹುಲ್‌ ಗಾಂಧಿ ಹಂತದಲ್ಲೂ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ.

ಆದರೆ, ರಾಹುಲ್‌ ಗಾಂಧಿ ಅವರು ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಹೀಗಾಗಿ ಸಾಧ್ಯವಾದರೆ ಮನವೊಲಿಸಿ, ಇಲ್ಲದಿದ್ದರೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಅಂಗೀಕರಿಸಿ ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾದ ತೀವ್ರ ಕುತೂಹಲ ಸ್ವರೂಪ ಪಡೆದುಕೊಂಡಿದೆ.

ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌ ಅವರು, ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದು ನಿಜ. ಆದರೆ ಹೈಕಮಾಂಡ್‌ ನಿರ್ಧಾರದಂತೆ ಕೃಷ್ಣ ಬೈರೇಗೌಡ ಅವರಿಗೆ ಆ ಖಾತೆ ನೀಡಲಾಗಿದೆ. ನನ್ನ ಕೈಯಲ್ಲಿ ಏನೂ ಇಲ್ಲ. ಆದರೂ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಯತ್ನಿಸುತ್ತೇನೆ. ಖುದ್ದು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ. ಈ ಮಾತುಕತೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಚೇರಿಯಿಂದಲೇ ರಾಜೀನಾಮೆ ಘೋಷಣೆ:

ಗುರುವಾರ ತಡರಾತ್ರಿ ಖಾತೆ ಹಂಚಿಕೆ ಪಟ್ಟಿ ಪ್ರಕಟವಾದಾಗಲೇ ರಾಜೀನಾಮೆ ನಿರ್ಧಾರ ಮಾಡಿದ್ದ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಬೆಳಗ್ಗೆ ಕೋರಮಂಗಲದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

ಈ ವೇಳೆ ನನ್ನ ನಿರ್ಧಾರ ಅಚಲ, ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಈಗ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುತ್ತೇವೆ ಎಂದರೂ ನಾನು ತೆಗೆದುಕೊಳ್ಳುವುದಿಲ್ಲ. ಮನುಷ್ಯನಿಗೆ ಸ್ವಾಭಿಮಾನ, ಮರ್ಯಾದೆ ಮುಖ್ಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಅವರ (ಮುಖ್ಯಮಂತ್ರಿ) ಅವರ ಕಚೇರಿಗೆ ಹೋಗಲೂ ಇಷ್ಟವಿಲ್ಲ. ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರಿಗೆ ನಾನು ರಾಜೀನಾಮೆ ಸಲ್ಲಿಸಬೇಕು. ಆದರೆ, ನನಗೆ ಅವರ ಬಳಿಗೆ ಹೋಗಲು ಇಷ್ಟವಿಲ್ಲ. ಹೀಗಾಗಿ ನನ್ನ ಮಾಜಿ ಕಾರ್ಯದರ್ಶಿ ಅಥವಾ ಮಾಜಿ ಮೇಯರ್‌ ಮಂಜುನಾಥರೆಡ್ಡಿ ಸೇರಿದಂತೆ ಯಾರೋ ಒಬ್ಬರ ಬಳಿ ಕಳುಹಿಸುತ್ತೇನೆ. ಹೀಗಾಗಿ ಇಲ್ಲಿಂದಲೇ ರಾಜೀನಾಮೆ ಘೋಷಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನನಗೆ ಎರಡು ಬಾರಿ ಮೋಸ ಆಗಿದೆ:

ನಾನು ಎಂದೂ ಖಾತೆಗಾಗಿ ಲಾಬಿ ಮಾಡಿಲ್ಲ. ಈ ಹಿಂದೆ ಇವರೇ (ಡಿ.ಕೆ. ಶಿವಕುಮಾರ್), ಡಿ.ಕೆ.ಸುರೇಶ್‌ ಅವರ ಜತೆ ಬಂದು ಮುಂದಿನ ಬಾರಿ ನಾನು ಮುಖ್ಯಮಂತ್ರಿ ಆದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವುದಾಗಿ ಮಾತುಕೊಟ್ಟಿದ್ದರು. ಇದೀಗ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವ ಹಿಂದಿನ ದಿನ ಶುಭಾಶಯ ತಿಳಿಸಲು ಹೋಗಿದ್ದೆ. ಆಗಲೂ ಅವರೇ ಕರೆದು ಬೆಂಗಳೂರು ಖಾತೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಮಾತು ತಪ್ಪಿದ್ದಾರೆ. ಮನುಷ್ಯ ಎಷ್ಟು ಅವಮಾನ ಎಂದು ತಡೆಯಲು ಸಾಧ್ಯ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಕಚೇರಿಯಲ್ಲೂ ಹೈಡ್ರಾಮಾ ಸೃಷ್ಟಿ:

ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿ ರಾಜೀನಾಮೆ ಪತ್ರ ಸಿದ್ಧಪಡಿಸುವ ವೇಳೆ ಯುವ ಕಾಂಗ್ರೆಸ್‌ನ ಮನೋಹರ್‌ ಅವರು, ಅಧ್ಯಕ್ಷರು ಮಾತನಾಡುತ್ತಾರೆ, ದಯವಿಟ್ಟು ದುಡುಕಬೇಡಿ ಸರ್‌ ಎಂದು ಕೈಹಿಡಿದು ಮನವೊಲಿಸಲು ಯತ್ನಿಸಿದರು.

ಈ ವೇಳೆ ರಾಮಲಿಂಗಾರೆಡ್ಡಿ, ‘ಮನೋಹರ್ ನನಗೆ ಕೋಪ ಬರಿಸಬೇಡಿ, ನನ್ನ ನಿರ್ಧಾರ ಮುಗಿದ ಕಥೆ. ನೀವು ಮೊದಲು ಹೊರಗೆ ಹೋಗಿ, ನಾನು ಮಾತನಾಡಬೇಕು’ ಎಂದು ಗದರಿದರು.

ಅಲ್ಲದೆ, ‘ನನ್ನ ಮಗಳು ಅಥವಾ ಕುಟುಂಬದವರ ಬಳಿಯೂ ನಾನು ಈ ಬಗ್ಗೆ ಚರ್ಚಿಸಿಲ್ಲ. 1973ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದು 53 ವರ್ಷಗಳಿಂದ ಪಕ್ಷದಲ್ಲಿದ್ದೇನೆ. 9 ಬಾರಿ ಶಾಸಕನಾಗಿದ್ದೇನೆ. ನನಗೆ ಮೋಸ ಆಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಗುರುವಾರವೇ ರಾಜೀನಾಮೆ ಎಚ್ಚರಿಕೆ:

ರಾಮಲಿಂಗಾರೆಡ್ಡಿ ಅವರು ಗುರುವಾರವೇ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದರು. ಅವರ ಮನವೊಲಿಕೆಗೆ ಡಿ.ಕೆ. ಶಿವಕುಮಾರ್‌ ತೀವ್ರ ಪ್ರಯತ್ನ ನಡೆಸಿದ್ದರೂ ರಾಮಲಿಂಗಾರೆಡ್ಡಿ ಅವರು ಸಭೆಯಿಂದ ಎದ್ದು ನಡೆದಿದ್ದರು.

ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆ ನೀಡಿದರೆ ನಾನು ಒಪ್ಪುವುದಿಲ್ಲ. ಬೆಂಗಳೂರು ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕೇವಲ ಶಾಸಕನಾಗಿ ಮುಂದುವರೆಯುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಅವರಿಗೆ ಖಡಕ್‌ ಆಗಿ ತಿಳಿಸಿದ್ದರು.

ಇದರ ಬೆನ್ನಲ್ಲೇ ಗುರುವಾರ ತಡರಾತ್ರಿ ಪ್ರಕಟವಾದ ಪಟ್ಟಿಯಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ನೀಡಲಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈ ತಪ್ಪಿದ್ದರಿಂದ ಗುರುವಾರ ತಡರಾತ್ರಿಯೇ ಡಿ.ಕೆ. ಶಿವಕುಮಾರ್‌ ಅವರಿಗೆ ಕರೆ ಮಾಡಿದ್ದ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ.

ನಮ್ಮಲ್ಲಿ ಮಾತ್ರ!

ಜಲಸಂಪನ್ಮೂಲ ಖಾತೆ ಸಿಕ್ಕಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ಬೆಳಗ್ಗೆಯೇ ರಾಜೀನಾಮೆ ನೀಡಲಿದ್ದಾರೆ ಎಂದು ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.