ಬೆಂಗಳೂರು : ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅದಕ್ಷ ಆಡಳಿತವೇ ಕಾರಣ. ಅಧಿಕಾರದ ಅಮಲಿನಲ್ಲಿ ನೌಕರರ ಹೊಟ್ಟೆಯ ಮೇಲೆ ಹೊಡೆದ ಬಿಜೆಪಿಗರು, ಈಗ ಯಾವ ಮುಖ ಇಟ್ಟುಕೊಂಡು ಉಪದೇಶ ಮಾಡುತ್ತಿದ್ದೀರಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿರುವ ರಾಮಲಿಂಗಾರೆಡ್ಡಿ
ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿರುವ ರಾಮಲಿಂಗಾರೆಡ್ಡಿ, ಬಿ.ವೈ. ವಿಜಯೇಂದ್ರ ಅವರೇ ನಿಮ್ಮ ನಕಲಿ ಕಾಳಜಿಯ ಮುಖವಾಡ ಕಳಚಿಡಿ. ಸಾರಿಗೆ ನಿಗಮಗಳು ಈಗಿನ ಸ್ಥಿತಿಗೆ ತಲುಪಲು ತಮ್ಮ ಪೂಜ್ಯ ತಂದೆ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ. ಅಧಿಕಾರದಲ್ಲಿದ್ದಾಗ ಅಧಿಕಾರದ ಅಮಲಿನಲ್ಲಿ ನೌಕರರ ಹೊಟ್ಟೆಯ ಮೇಲೆ ಹೊಡೆದ ನೀವು, ಈಗ ಯಾವ ಮುಖ ಇಟ್ಟುಕೊಂಡು ಉಪದೇಶ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಪ್ರಚಾರದ ಹಪಾಹಪಿ;
ನಿಮಗೆ ವಿಷಯದ ಅರಿವಿಲ್ಲ. ಕೇವಲ ಪ್ರಚಾರ ಹಪಾಹಪಿ ಮಾತ್ರ ಇದೆ. ನಿಮ್ಮ ಹಳೆಯ ಪಾಪದ ರಾಶಿಯನ್ನು ನಾವು ಪದೇಪದೆ ಅಗೆದು ತೆಗೆಯಬೇಕಾಗಿರುವುದು ರಾಜ್ಯದ ಅತಿದೊಡ್ಡ ದುರಂತ. ಇನ್ನಾದರೂ ಜನರನ್ನು ದಾರಿ ತಪ್ಪಿಸುವ ಪೊಳ್ಳು ಹೋರಾಟಗಳನ್ನು ನಿಲ್ಲಿಸಿ, ನಿಮ್ಮ ಕಾಲದ ಅಧಃಪತನಕ್ಕೆ ಮೊದಲು ಉತ್ತರ ನೀಡಿ. ಸಾರಿಗೆ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ 15 ದಿನಗಳ ಕಾಲ ಮುಷ್ಕರ ಮಾಡಿಸಿ, ಮುಂದೆ ತಿಂಗಳು ಕಾಲ ಮುಷ್ಕರ ಮಾಡುವುದಕ್ಕೆ ಅಡಿಪಾಯ ಹಾಕಿ ಕೊಟ್ಟಿರುವ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ ಮುಷ್ಕರ ನಡೆದ ದಾಖಲೆಯಿದೆ. ಮುಷ್ಕರದ ಹೆಸರಲ್ಲಿ 3500ಕ್ಕೂ ಹೆಚ್ಚಿನ ನೌಕರರನ್ನು ವಜಾ, ಅಮಾನತು ಮಾಡಿ ಎಫ್‌ಐಆರ್ ದಾಖಲಿಸಿದಿರಿ. ಈಗಲೂ ಅವರು ಕೋರ್ಟ್‌ಗಳಿಗೆ ಅಲೆಯುವಂತಾಗಿದೆ.
ನೌಕರರಿಗೆ ವೇತನ ಸರಿಯಾಗಿ ನೀಡುತ್ತಿರಲಿಲ್ಲ. ವೇತನ ಪರಿಷ್ಕರಿಸಿ ಹಣ ಪಾವತಿಸದೇ ಬಾಕಿ ಇಟ್ಟು ಹೋಗಿದ್ದೀರಲ್ಲ, ಅದರ ಭಾಗವೇ ಈಗಿನ ನೌಕರರ ಮುಷ್ಕರದ ಕೂಗು. 2020ರಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು 2023ರ ಮಾರ್ಚ್‌ನಲ್ಲಿ ಮಾಡಲಾಯಿತು. ಈಗ ನೌಕರರ ವೇತನ ಪರಿಷ್ಕರಣೆ ತಡವಾಗಿರುವ ಬಗ್ಗೆ ಮಾತನಾಡುವುದಕ್ಕೆ ನಿಮಗೆ ಯಾವ ನೈತಿಕತೆಯಿದೆ. ಇನ್ನು, ವೇತನ ಪರಿಷ್ಕರಣೆ ಘೋಷಿಸಿ ಅದಕ್ಕೆ ಅನುದಾನ ಮೀಸಲಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2019-2023ರ ಅವಧಿಯಲ್ಲಿನ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡದೆ, ಹೊಸ ನೇಮಕಾತಿ ಮಾಡದೇ ಸ್ಥಗಿತಗೊಳಿಸಲಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ನಂತರದಿಂದ 10471 ನೇಮಕಾತಿ, 7800 ಹೊಸ ಬಸ್ ಸೇರ್ಪಡೆ, ಹೊಸ ಘಟಕ-ಬಸ್ ನಿಲ್ದಾಣ ನಿರ್ಮಾಣ, 2109 ಬಸ್‌ಗಳ ಪುನಶ್ಚೇತನ ಕಾರ್ಯ, 223 ಕೋಟಿ ರು. ನಿವೃತ್ತ ಸಿಬ್ಬಂದಿ ಬಾಕಿ ಹಣ ಪಾವತಿಸಲಾಗಿದೆ.
ಹಾಗೆಯೇ 2019-2023ರ ಅವಧಿಯಲ್ಲಿ ಸಾರಿಗೆ ನಿಗಮಗಳ ಮೇಲೆ 4900 ಕೋಟಿ ರು. ಹೊಣೆಗಾರಿಕೆ ಬಿಟ್ಟು ಹೋಗಲಾಗಿತ್ತು. ಅದರಲ್ಲು ನೌಕರರ ಭವಿಷ್ಯ ನಿಧಿ, ಡೀಸೆಲ್ ಬಾಕಿ ಪಾವತಿಗೆ ನಮ್ಮ ಸರ್ಕಾರ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರು. ಸಾಲ ಪಡೆಯಲು ಅನುಮತಿಸಿದ್ದು, ಆ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ. ಜತೆಗೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕಳೆದ 2 ವರ್ಷಗಳಲ್ಲಿ 1219.23 ಕೋಟಿ ರು. ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಸಾರಿಗೆ ನಿಗಮಗಳ ಕುರಿತಂತೆ ಇನ್ನಷ್ಟು ಮಾಹಿತಿ ಬೇಕಿದ್ದರೆ ತಿಳಿಸಿ, ಅದನ್ನೂ ನೀಡುತ್ತೇವೆ ಎಂದು ಹೇಳಿದ್ದಾರೆ.
