ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಚಿಕ್ಕಮುದ್ದೇನಹಳ್ಳಿ ಗ್ರಾಮದಲ್ಲಿ ಯೂತ್‌ ಕಾಂಗ್ರೆಸ್ ವತಿಯಿಂದ ಹೋಬಳಿ ಮಟ್ಟದ ಕೆಎಚ್‌ಎಂ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪಂದ್ಯಾವಳಿಗೆ ಚಾಲನೆ ನೀಡಿದರು. ಅವರು ಮಾತನಾಡಿ, ಯುವಕರು ದುಶ್ಚಟಗಳ ಹಿಂದೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಬದಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯಯುತ ಬದುಕನ್ನು ರೂಪಿಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಯುವಜನರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಯುವಜನರಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಲು ಇಂತಹ ಕ್ರೀಡೆಗಳು ಅತ್ಯಂತ ಅವಶ್ಯಕ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯುವುದು ಅಗತ್ಯ ಎಂದರು.

ತೂಬಗೆರೆ ಕ್ರಾಸ್‌ನಿಂದ ಕಲ್ಲುಕೋಟೆವರೆಗಿನ ರಸ್ತೆ ಡಾಂಬರೀಕರಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಮೇ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪಂದ್ಯಾವಳಿಯಲ್ಲಿ ತೂಬಗೆರೆ ಹೋಬಳಿಯ 24 ತಂಡಗಳು ಭಾಗವಹಿಸಿದ್ದವು. ಗಂಡರಾಜಪುರ ಮತ್ತು ಎಸ್.ನಾಗೇನಹಳ್ಳಿ ತಂಡಗಳ ನಡುವೆ ನಡೆದ ಫೈನಲ್‌ ಪಂದ್ಯದಲ್ಲಿ ಗಂಡರಾಜಪುರ ತಂಡ ಜಯಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಎಸ್.ನಾಗೇನಹಳ್ಳಿ ತಂಡ ರನ್ನರ್‌ ಅಪ್‌ ಪುರಸ್ಕಾರ ಪಡೆಯಿತು.


ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್, ಘಾಟಿ ಸುಭ್ರಮಣ್ಯ ದೇವಾಲಯ ಪ್ರಾಧಿಕಾರದ ಸದಸ್ಯ ರಂಗಪ್ಪ ,ಆರ್.ವಿ ಮಹೇಶ್, ತೂಬಗರೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರವಿಸಿದ್ದಪ್ಪ, ಯುವ ಮುಖಂಡರಾದ ಸಾಗರ್, ನರಸಿಂಹಮೂರ್ತಿ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

30ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮುದ್ದೇನಹಳ್ಳಿಯಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು.

--

30ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮುದ್ದೇನಹಳ್ಳಿಯಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.