ಸಾರಾಂಶ
ಸಿದ್ದರಾಮಯ್ಯ ರಾಜ್ಯದ ಅತ್ಯಂತ ಲಜ್ಜೆಗೆಟ್ಟ ಮುಖ್ಯಮಂತ್ರಿಯಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ: ಅಧಿಕಾರಕ್ಕೆ ಬಂದ ಒಂದೂವರೆ ವರ್ಷದೊಳಗೆ ಸಿಎಂ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಬಂದಿರುವುದು ದುರ್ದೈವದ ಸಂಗತಿ. ಸಿದ್ದರಾಮಯ್ಯ ರಾಜ್ಯದ ಅತ್ಯಂತ ಲಜ್ಜೆಗೆಟ್ಟ ಮುಖ್ಯಮಂತ್ರಿಯಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಶಾಸಕರು ಸುಮ್ಮನೆ ಇರುತ್ತಾರೆಯೇ? ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾದ ಆರೋಪ ಎದುರಿಸುತ್ತಿದ್ದು, ವಾಲ್ಮೀಕಿ ನಿಗಮದ ಹಗರಣದ ಹಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಪಾಲು ಕೊಡಲಾಗಿದೆ. ಪಾಲುದಾರಿಕೆ ಇಲ್ಲದಿದ್ದರೆ ಹೈಕಮಾಂಡ್ ಕೂಡಲೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.ವರ್ಗಾವಣೆ ದಂಧೆ: ರಾಜ್ಯದಲ್ಲಿ ಹರಾಜು ರೀತಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಟೆಂಡರ್‌ನಲ್ಲಿ ಸ್ಲ್ಯಾಬ್ ವಿಧಿಸಿದಂತೆ ಕಾಂಗ್ರೆಸ್‌ನವರು ಅಧಿಕಾರಿಗಳ ವರ್ಗಾವಣೆಗೂ ಇಂತಿಷ್ಟು ದರ ಫಿಕ್ಸ್ ಮಾಡಿದ್ದಾರೆ. ಹೀಗೆ ಲಂಚ ಕೊಟ್ಟ ಅಧಿಕಾರಿಗಳು ಅನಿವಾರ್ಯವಾಗಿ ಕಲೆಕ್ಷನ್‌ನಲ್ಲಿ ನಿರತರಾಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿ ಅಪರಾಧಿಗಳನ್ನು ಬೆಂಬಲಿಸುತ್ತಿದೆ ಎಂದು ಕಿಡಿಕಾರಿದರು.