ಕೃಷ್ಣಾರೆಡ್ಡಿ ಹೇಳಿಕೆ ಹತಾಶೆಯ ಪ್ರತೀಕ : ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮೇಲಿನ ಆರೋಪಕ್ಕೆ ತಿರುಗೇಟು

| Published : Aug 05 2024, 12:36 AM IST / Updated: Aug 05 2024, 04:53 AM IST

ಸಾರಾಂಶ

ಮಾಜಿ ಶಾಸಕ ಜೆಕೆ ಕೃಷ್ಷಾರೆಡ್ಡಿ ಸಲ್ಲಿಸಿರುವ ಆದಾಯ ತೆರಿಗೆ ದಾಖಲೆಗಳನ್ನು ಮರುಪರಿಶೀಲಿಸುವಂತೆ ದಾಖಲೆ ಸಮೇತ ಆದಾಯ ತೆರಿಗೆ ಇಲಾಖೆಯಲ್ಲಿ ನಾವು ದಾವೆಯನ್ನು ಹೂಡಿದ್ದು ಪ್ರಕರಣದ ವಿಚಾರಣೆಯು ಅಂತಿಮ ಹಂತದಲ್ಲಿದೆ.

 ಚಿಂತಾಮಣಿ :  ಸುಳ್ಳನ್ನು ಮನೆದೇವರನ್ನಾಗಿ ಪಡೆದಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಯಾವುದೇ ಪ್ರಗತಿಪರ ಕೆಲಸ ನಡೆದಿಲ್ಲವೆಂದೂ, ಒಂದು ಬಾಂಡ್ಲಿ ಮಣ್ಣನ್ನೂ ಸಹ ಎತ್ತಿಹಾಕಿಲ್ಲವೆಂಬ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿರ ಹೇಳಿಕೆಯು ಅವರ ಅಸಹನೆ ಮತ್ತು ಹತಾಶೆಯನ್ನು ಎತ್ತಿ ತೋರಿಸುತ್ತಿದೆಯೆಂದು ನಗರಸಭಾ ಮಾಜಿ ಸದಸ್ಯರಾದ ಎಸ್.ಸುಬ್ರಮಣ್ಯಂ, ಟಿ.ಶ್ರೀನಿವಾಸ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ಕೋನಪ್ಪಲ್ಲಿ ಕೋದಂಡ ತಿರುಗೇಟು ನೀಡಿದ್ದಾರೆ.

ಆರೋಪಕ್ಕೆ ದಾಖಲೆಗಳೇ ಇಲ್ಲ

ಮಾಜಿ ಶಾಸಕರ ಆರೋಪಗಳಿಗೆ ಯಾವುದೇ ದಾಖಲೆಗಳು ಇಲ್ಲ. ಆದರೆ ಮಾಜಿ ಶಾಸಕರು ತಮಗೆ ಸರ್ಕಾರವು ನೀಡಿದ ಸಂಬಳ, ಭತ್ಯೆ ವಗೈರೆಗಳ ವಿವರಗಳನ್ನು ಗೌಪ್ಯವಾಗಿರಿಸಿ ಆದಾಯ ತೆರಿಗೆ ದಾಖಲೆಗಳಲ್ಲಿ ನಮೂದಿಸದೆ ಅದನ್ನೇ ತಮ್ಮ ಕಳೆದ ಚುನಾವಣಾ ಪ್ರಮಾಣ ಪತ್ರದಲ್ಲಿ ದಾಖಲಿಸಿರುವುದನ್ನು ಪರಿಶೀಲಿಸಿದರೆ ಸುಳ್ಳು ಯಾರ ಮನೆ ದೇವರು ಎನ್ನುವುದು ಕ್ಷೇತ್ರದ ಜನತೆಗೆ ತಿಳಿಯಲಿದೆ ಎಂದು ಕಟುಕಿದ್ದಾರೆ.

ಮಾಜಿ ಶಾಸಕರು ಸಲ್ಲಿಸಿರುವ ಆದಾಯ ತೆರಿಗೆ ದಾಖಲೆಗಳನ್ನು ಮರುಪರಿಶೀಲಿಸುವಂತೆ ದಾಖಲೆ ಸಮೇತ ಆದಾಯ ತೆರಿಗೆ ಇಲಾಖೆಯಲ್ಲಿ ನಾವು ದಾವೆಯನ್ನು ಹೂಡಿದ್ದು ಪ್ರಕರಣದ ವಿಚಾರಣೆಯು ಅಂತಿಮ ಹಂತದಲ್ಲಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕರು ತಮ್ಮ ಆದಾಯವನ್ನು ಬಚ್ಚಿಟ್ಟಿರುವುದು ಸ್ಪಷ್ಟವಾಗಿದ್ದು ಆದಾಯ ತೆರಿಗೆ ಇಲಾಖೆಯೇ ನೇರವಾಗಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವ ಅವಕಾಶಗಳಿವೆ ಎಂದರು.

ಸಚಿವರಿಂದ ಅಭಿವೃದ್ಧಿ ಕಾರ್ಯ

ಮಾಜಿ ಶಾಸಕರ ಅವಧಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗಳಿಂದ ಆಗಿರುವ ಮಣ್ಣಿನ ಗುಡ್ಡೆಗಳನ್ನೇ ಎತ್ತುವುದು ಈಗ ನಮ್ಮ ಪಾಲಿಗೆ ಬಿದ್ದಿದೆ. ಆದರೂ ಸಹ ಸಚಿವರು ತಮ್ಮ ವೈಯುಕ್ತಿಕ ಪ್ರಭಾವದಿಂದ ಕೋಟಿ-ಕೋಟಿ ರೂಪಾಯಿಗಳ ಅನುದಾನವನ್ನು ಕ್ಷೇತ್ರದಲ್ಲಿ ನಡೆಯಲಿರುವ ಪ್ರಗತಿಪರ ಕೆಲಸಗಳಿಗೆ ಮೀಸಲಾಗಿಟ್ಟಿದ್ದು ಈಗ ನಡೆಯುತ್ತಿರುವ ಹಾಗೂ ಮುಂದೆ ನಡೆಯಲಿರುವ ಕಾಮಗಾರಿಗಳ ಅಭಿವೃದ್ದಿ ಫಲವನ್ನು ಚಿಂತಾಮಣಿ ಕ್ಷೇತ್ರದ ಜನತೆಯು ಅತೀ ಶೀಘ್ರದಲ್ಲಿಯೇ ನೋಡಲಿದ್ದಾರೆ ಎಂದರು.