ಸಾರಾಂಶ
ಶಿಡ್ಲಘಟ್ಟ : ಮೈಸೂರು ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಕೂಡಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಘಟಕದ ಅಧ್ಯಕ್ಷ ಸೀಕಲ್ ಆನಂದಗೌಡ ಆಗ್ರಹಿಸಿದರು. ಮೈಸೂರು ಮುಡಾ ಹಗರಣದ ವಿರುದ್ದ ಬೆಂಗಳೂರಿ ನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಪಕ್ಷದ ಕಾರ್ಯಕರ್ತರು ತೆರಳುತ್ತಿದ್ದ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಭ್ರಷ್ಟ ಸರ್ಕಾರ ತೊಲಗಲಿ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಭ್ರಷ್ಟ ರಾಜ್ಯ ಸರ್ಕಾರವನ್ನು ತೊಲಗಿಸಬೇಕಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಹಗರಣದ ಮೂಲಕ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಮೈಸೂರು ಮುಡಾ ಹಗರಣ ಸಾವಿರಾರು ಕೋಟಿ ಹಗರಣವಾಗಿದ್ದು ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
500ಕ್ಕೂ ಹೆಚ್ಚು ಮಂದಿ ಭಾಗಿ
ಪಾದಯಾತ್ರೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ 500 ಕ್ಕೂ ಹೆಚ್ಚು ಮಂದಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ ಅವರಿಗೆ ಪಾದಯಾತ್ರೆಯಲ್ಲಿ ಸಾಥ್ ಕೊಡಲಿದ್ದಾರೆಂದರು.
ಈ ಸಂದರ್ಭದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಆನಂದ ಗೌಡ ಜಿಲ್ಲಾ ಪ್ರಕೋಷ್ಠ ಸಂಚಾಲಕ ಕನಕಪ್ರಸಾದ್, ನಗರ ಸಭೆ ಸದಸ್ಯ ನಾರಾಯಣ ಸ್ವಾಮಿ ಬಿಜೆಪಿ ಮಾಧ್ಯಮ ವಕ್ತಾರ ಚಲುವ ರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.