ಗೌರಿಬಿದನೂರು : ನಗರಸಭೆಯ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

| Published : Jul 14 2024, 01:34 AM IST / Updated: Jul 14 2024, 04:59 AM IST

ಸಾರಾಂಶ

ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಗಾಗಿ ಕೇವಲ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಶಾಸಕರು ಎರಡು ಬಾರಿ ಸಭೆ ಕರೆದರೂ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ.

 ಗೌರಿಬಿದನೂರು :  ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ ಎಂದು ಆರೋಪಿಸಿ ನಗರಸಭೆ ಕಾಂಗ್ರೆಸ್ ಸದಸ್ಯರು ಸಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರಸಭೆಯಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದರೆ ಸಾಲದು ಅರ್ಜಿದಾರ ಅಧಿಕಾರಿಗಳ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಡತವನ್ನೆ ನಾಪತ್ತೆ ಮಾಡುತ್ತಾರೆ. ಅರ್ಜಿದಾರ ಪದೇಪದೆ ಅರ್ಜಿ ಸಲ್ಲಿಸಿದರೂ ಕೆಲಸವಾಗುತ್ತಿಲ್ಲ. ಅಧಿಕಾರಿಗಳು ಪ್ರತಿಯೊಂದಕ್ಕೂ ನಗರಸಭೆ ಆಯುಕ್ತರನ್ನು ಕೇಳಿ ಎನ್ನುತ್ತಾರೆ. ಇಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಆರೋಪಿಸಿದರು.

ಅಧ್ಯಕ್ಷರ ಆಯ್ಕೆ ಆಗಿಲ್ಲ: ಸದಸ್ಯ ಕಲೀಮ್ ಮಾತನಾಡಿ 18 ತಿಂಗಳಿಂದ ನಗರಸಭೆ ಅಧ್ಯಕ್ಷರಿಲ್ಲ, ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಗಾಗಿ ಕೇವಲ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಶಾಸಕರು ಎರಡು ಬಾರಿ ಸಭೆ ಕರೆದರೂ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಆಡಳಿತಾಧಿಕಾರಿಗಳು ಸದಸ್ಯರ ಸಭೆ ಕರೆದಿಲ್ಲ ಎಂದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತೆ ಡಿ.ಎಂ. ಗೀತಾ, ಖಾತೆ ವಿತರಣೆ ಆನ್ ಲೈನ್ ಸೇವೆಯಾಗಿದೆ. ಯಾವುದೇ ರೀತಿ ವಿಳಂಬವಾಗುವುದಿಲ್ಲ. ಸಣ್ಣಪುಟ್ಟ ದೋಷಗಳಿದ್ದಲ್ಲಿ ಸರಿಪಡಿಸಲಾಗುವುದು ಎಂದರು. ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಯಾದ ಆರ್.ಓ ನಾರಾಯಣರವರನ್ನು ಕರೆಸಿ ವಿವರಣೆ ನೀಡಲಾಯಿತು.

ಡೀಸಿ ಗಮನಕ್ಕೆ ತರುವ ಭರವಸೆ

ತಹಸೀಲ್ದಾರ್ ಮಹೇಶ್ ಎಸ್ ಪತ್ರಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸದಸ್ಯರಾದ ಆರ್.ಪಿ. ಗೋಪಿನಾಥ್, ಡಿ.ಎನ್. ವೆಂಕಟರೆಡ್ಡಿ, ಮಂಜುಳಮ್ಮ, ಶ್ರೀರಾಮಹ್ಹ, ಗಿರೀಶ್, ರಂಗಮ್ಮ, ಕರವೇ ಅಶ್ವತ್ಥ, ಭಾಗವಹಿಸಿದ್ದರು.