ಸಾರಾಂಶ
25 ವರ್ಷಗಳ ಹಿಂದೆಯೂ ಹಾಲು ಉತ್ಪಾದನೆ ಜಾಸ್ತಿಯಾದಾಗ ವಾರಕ್ಕೊಮ್ಮೆ ಹಾಲು ಪಡೆಯುತ್ತಿರಲಿಲ್ಲ. ವಿರೋಧ ಪಕ್ಷಗಳು ಕೇವಲ ವಿರೋಧ ಮಾಡುವ ಸಲುವಾಗಿಯೇ ರಾಜಕೀಯದ ತೆವಲಿನಿಂದ ರಾಜಕೀಯ ಮಾಡುತ್ತಿವೆ.
ಚಿಂತಾಮಣಿ : ಜಗತ್ತು ವೇಗವಾಗಿ ಮುನ್ನುಗ್ಗುತ್ತಿದೆ, ಬದಲಾವಣೆ ಕಾಣುತ್ತಿದ್ದೇವೆ, ಆಯಾ ಸಂದರ್ಭಕ್ಕೆ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಹಕಾರಿ ಕ್ಷೇತ್ರದ ಕೋಚಿಮುಲ್ ಬೆಳೆಯಲು ಹಾಗೂ ರೈತರ ಹಿತ ದೃಷ್ಟಿಯಿಂದ ಕಾಮಗಾರಿಗಳನ್ನು ಮಾಡಲು ಆಡಳಿತ ಮಂಡಳಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹಾಲು ಖರೀದಿ ದರ ಕಡಿತವನ್ನು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಮರ್ಥಿಸಿದರು.
ನಗರದ ಪಾಲಿಟೆಕ್ನಿಕ್ ಮೈದಾನದ ಆವರಣದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮತ್ತು ಉಪ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಚಿಂತಾಮಣಿ ವತಿಯಿಂದ ಹಮ್ಮಿಕೊಂಡಿದ್ದ ಕ್ಷೀರ ಮಹೋತ್ಸವ- 2024 ಉದ್ಘಾಟನೆ ಮಾಡಿ ಮಾತನಾಡಿದರು.
ಇನ್ನೂ 4 ವರ್ಷ ಸಮಯವಿದೆ 25 ವರ್ಷಗಳ ಹಿಂದೆಯೂ ಹಾಲು ಉತ್ಪಾದನೆ ಜಾಸ್ತಿಯಾದಾಗ ವಾರಕ್ಕೊಮ್ಮೆ ಹಾಲು ಪಡೆಯುತ್ತಿರಲಿಲ್ಲ. ವಿರೋಧ ಪಕ್ಷಗಳು ಕೇವಲ ವಿರೋಧ ಮಾಡುವ ಸಲುವಾಗಿಯೇ ರಾಜಕೀಯದ ತೆವಲಿನಿಂದ ರಾಜಕೀಯ ಮಾಡುತ್ತಿವೆ. ಹಾಲಿನ ದರ 2 ರೂಗಳು ಇಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ನಾನು ಸಚಿವನಾಗಿರುವುದು ದುರಂತ ನಾನು ಸಚಿವನಾಗಿ ಬಂದ ಮೇಲೆ ರಾವಣ ರಾಜ್ಯವಾಗಿದೆಯೆಂದು ಹೇಳಿದ್ದಾರೆ.
ಬಹಳ ಒಳ್ಳೆಯದು ದೇವರು ಅವರಿಗೆ ಒಳ್ಳೆಯದು ಮಾಡಲಿ. ಇನ್ನೂ 4 ವರ್ಷ ಇದೇ. ಈಗಾಗಲೇ 1 ವರ್ಷದ ಸಾಧನೆಯನ್ನೂ ನೋಡಿ, ಇದು ರಾಮರಾಜ್ಯನಾ, ರಾವಣ ರಾಜ್ಯನಾ ಅಥವಾ ರ್ದೌಭಾಗ್ಯನಾ ಸೌಭಾಗ್ಯನಾ ಅಂತ ಜನ ತೀರ್ಮಾನ ಮಾಡುತ್ತಾರೆಂದು ಪುನರುಚ್ಛರಿಸಿದರು. ರಾಜ್ಯದಲ್ಲಿ ದಕ್ಷಿಣ ಕನ್ನಡದ ಹಾಲು ಒಕ್ಕೂಟದಲ್ಲಿ ಮಾತ್ರ ಲೀಟರ್‌ಗೆ 35 ರೂಪಾಯಿ ಕೊಡುತ್ತಿದೆ. ಅಲ್ಲಿ ಹಾಲು ಶೇಖರಣೆ ಮಾಡುವುದು ಕಷ್ಟ. ಮಾರಾಟದ ಬೆಲೆ ಜಾಸ್ತಿ ಇದೆ. ನಮ್ಮಲ್ಲಿ ಲೀಟರ್‌ಗೆ 33.40 ಪೈಸೆ ಕೊಡುತ್ತಿದ್ದೆವು. 2 ರೂ ಕಡಿಮೆ ಮಾಡಿದರೆ ಈಗ 31.40 ಪೈಸೆ ಇದೆ. ಮಂಡ್ಯ, ತುಮಕೂರು ಮತ್ತು ಬೆಂಗಳೂರು ಒಕ್ಕೂಟಗಳಿಗೆ ಹೋಲಿಸಿದರೆ ನಾವು ತೀರಾ ಕಡಿಮೆ ಇಲ್ಲ. ಇತರೆ ಒಕ್ಕೂಟಗಳಿಗೆ ಹೋಲಿಸಿದರೆ ನಮ್ಮ ಒಕ್ಕೂಟ ಸರಾಸರಿ 27.30 ಕೋಟಿ ರೂಪಾಯಿಗಳು ರೈತರಿಗೆ ಕೊಟ್ಟಿದ್ದೇವೆ ಎಂದರು.
ಹಾಲು ಉತ್ಪಾದಕರಿಗೆ ನೆರವು
ಮೇವು ಇಲ್ಲದೆ ಹಾಲು ಕಡಿಮೆಯಾದಾಗ ರೈತರಿಗೆ ಮೇವು ಬೆಳೆಯಲು ೩ ಸಾವಿರ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಹಸು ಸತ್ತಾಗ 30ಸಾವಿರ ಕೊಡುತ್ತಿದ್ದನ್ನು ೭೦ ಸಾವಿರ ನಮ್ಮ ಒಕ್ಕೂಟ ಕೊಡುತ್ತಿದೆ. ಇದನ್ನು ಯಾರೂ ಹೇಳುತ್ತಿಲ್ಲ ವಸ್ತುಸ್ಥಿತಿ ಮತ್ತು ಸತ್ಯವನ್ನು ಮರೆಮಾಚಿ ರೈತರ ಬದುಕಿನ ಮೇಲೆ ಚೆಲ್ಲಾಟ ಮಾಡುವವರು ಇಲ್ಲ ಸಲ್ಲದ ಮಾತುಗಳನ್ನು ಸಾರ್ವಜನಿಕವಾಗಿ ಹೇಳುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟಗಳು ವಿಭಜನೆ ಮಾಡಬೇಕೆಂಬು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಆದರೆ ಹಿಂದೆ ಯಾರದೋ ರಾಜಕೀಯ ತೆವಲಿಗೆ ಅವೈಜ್ಞಾನಿಕವಾಗಿ ವಿಭಜನಗೆ ಮುಂದಾಗಿದ್ದರು. ಜಿಲೆಯಲ್ಲಿ ಹಾಲು ಶೇಖರಣೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲ, ನಾವು ಮಾರುವಂತಹ ಹಾಲನ್ನು ಪ್ಯಾಕೇಟ್ ಮಾಡಲು ಬೇರೆ ಒಕ್ಕೂಟಗಳಿಗೆ ಗುತ್ತಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು, ಆದ್ದರಿಂದ ನಮ್ಮ ಸರ್ಕಾರ ಒಕ್ಕೂಟದ ವಿಭಜನೆಯನ್ನು ಹಿಂಪಡೆದು ವೈಜ್ನಾನಿಕವಾಗಿ ಒಕ್ಕೂಟದ ವಿಭಜನೆಯಾಗಬೇಕೆಂಬ ದೃಷ್ಟಿಯಿಂದ ಇದೇ ತಿಂಗಳು 23 ರಂದು ಬಾಗೇಪಲ್ಲಿಯಲ್ಲಿ ಒಕ್ಕೂಟದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ ಎಂದರು.
ಚಿಮುಲ್‌ಗೆ ಪ್ಯಾಕಿಂಗ್ ಘಟಕ
ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ 120 ಕೋಟಿ ಹಣವನ್ನು ಪ್ಯಾಕಿಂಗ್ ಯೂನಿಟ್‌ಗೆ ಕೊಡಲು ಸಭೆಯಲ್ಲಿ ತೀರ್ಮಾನ ಅಗಿದೆ. ಈಗಾಗಲೇ ಒಕ್ಕೂಟಕ್ಕೆ ಇರುವ ೧೫ ಎಕರೆ ಜೊತೆಗೆ ತೋಟಗಾಅರಿಕೆ ಇಲಾಖೆಯ 10 ಎಕರೆ ಜಮೀನನ್ನು ಕೊಡಲು ನಮ್ಮ ಸರ್ಕಾರ ಸಿದ್ದವಿದೆ. ನಮ್ಮಲ್ಲಿ ಯಾವುದೇ ವರಮಾನವಿಲ್ಲದೇ ವಿಭಜನೆ ಮಾಡಿದರೆ ಆಡಳಿತ ಮಾಡಲು ಹೇಗೆ ಸಾಧ್ಯ. ಇಂದು ಹೈನೋದ್ಯಮವು ಪ್ರತೀ ತಿಂಗಳು ಆದಾಯ ಬರುವಂತಹ ಉದ್ಯೋಗವಾಗಿದ್ದು, ಇದು ರೈತರ ಗೌರವದ ಬದುಕಿಗೆ ನೆರವಾಗಿದೆ. ಬಹಳಷ್ಟು ಗ್ರಾಮಗಳಲ್ಲಿ ಈಗಲೂ ಖಾಸಗಿ ಡೇರಿಗಳನ್ನು ನಡೆಸುತ್ತಿದ್ದಾರೆ ಅವರೂ ಕೂಡ ಒಕ್ಕೂಟಕ್ಕೆ ಸೇರಿಕೊಳ್ಳಬೇಕೆಂದರು.
ಸಿಮೆಹಸು ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೂ ಮೊದಲು ಜೆರ್ಸಿ ತಳಿ ಸಿಮೆಹಸು ಕರುಗಳ ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನಕ್ಕೆ ಸಚಿವ ಡಾ.ಎಂ.ಸಿ ಸುಧಾಕರ್ ಚಾಲನೆ ನೀಡಿ, ತಳಿ ಕರುಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತಮ ಅಂಕಗಳನ್ನು ಪಡೆದ ಹಾಲು ಉತ್ಪಾದಕರ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಚಿಂತಾಮಣಿ ಶೀಥಲ ಕೇಂದ್ರದ ಸ್ಥಾಪಕರು ಹಾಗೂ ಮಾಜಿ ಗೃಹ ಸಚಿವ ಚೌಡರೆಡ್ಡಿ, ಕೋಚಿಮುಲ್ ಅದ್ಯಕ್ಷ ಮತ್ತು ಮಾಲೂರು ಶಾಸಕ ಕೆ.ವೈ,ನಂಜೇಗೌಡ, ಕೋಚಿಮುಲ್ ನಿರ್ದೇಶಕ ಅಶ್ವಥನಾರಾಯಣಬಾಬು, ಮಹಿಳಾ ನಿರ್ದೇಶಕಿ ಸುನಂದಮ್ಮ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸಗೌಡ, ಜಂಟಿ ನಿರ್ದೇಶಕ ಡಾ.ರಾಘವೇಂದ್ರ, ಚಿಕ್ಕಬಳ್ಳಾಪುರ ಕೋಚಿಮುಲ್ ವ್ಯವಸ್ಥಾಪಕ ಡಾ.ಚೇತನ್, ಮತ್ತಿತರರು ಉಪಸ್ಥಿತರಿದ್ದರು.