ಸಾರಾಂಶ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಅನಾವರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಸಿದ್ದರಾಮಯ್ಯ ಅವರ ಸಮಾಜವಾದದ ಚಿಂತನೆಗಳು ಕಳಚಿ ಬಿದ್ದಿವೆ. ಈ ಚಿಂತನೆಗಳು ಇದಿದ್ದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮಕ್ಕೆ ಮಾ. 21ರಂದು ರಾಜ್ಯ ಸರ್ಕಾರವು 187 ಕೋಟಿ ರು. ಹಣವನ್ನು ವರ್ಗಾವಣೆ ಮಾಡಿತ್ತು. ಮೇ 26ರಂದು ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಈ ಹಗರಣ ಸಿಎಂ ಗಮನಕ್ಕೆ ಬಂದಿರಲಿಲ್ಲವೇ? ಆ ಎರಡು ತಿಂಗಳು ರಾಜ್ಯದಲ್ಲಿ ಸರ್ಕಾರ ಇತ್ತೇ ಎಂದು ಪ್ರಶ್ನಿಸಿದರು.
ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನಾಂಗದವರಿಗೂ ಈ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಸಂದೇಹ ಉಂಟಾಗಿದೆ. ಹಗರಣದ ಚರ್ಚೆ ನಡೆದಾಗ ಸಚಿವರಿಗೂ ಹಗರಣಕ್ಕೂ ಸಂಬಂಧ ಇಲ್ಲ ಎಂದೇ ಮುಖ್ಯಮಂತ್ರಿ ಹೇಳಿದ್ದರು. ಎಸ್‍ಐಟಿ ರಚಿಸಿದ ಬಳಿಕವೂ ಸಚಿವರು ನಿರಪರಾಧಿ ಎಂದೇ ಹೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇಪದೇ ನಾನು ಹಿಂದುಳಿದ ವರ್ಗಗಳ ನಾಯಕ ಎನ್ನುವ ಸಿದ್ದರಾಮಯ್ಯ ದಲಿತರಿಗೆ, ಶೋಷಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದ್ದಾರೆ. ಹಾಗಿದ್ದರೆ ಅವರು ಯಾವ ನೈತಿಕತೆಯಲ್ಲಿ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಎ.ನಾರಾಯಣಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ವಿದ್ಯಾಸಿರಿ ನಿಲ್ಲಿಸಿದ್ದಾರೆ. ಶೂ ಕೊಡಲು ಯೋಗ್ಯತೆ ಇಲ್ಲ. ಮಕ್ಕಳಿಗೆ ಪುಸ್ತಕ ಕೊಡುತ್ತಿಲ್ಲ. ಹಾಸ್ಟೆಲ್‍ಗಳಲ್ಲಿ ಊಟವನ್ನೂ ನೀಡುತ್ತಿಲ್ಲ. ಹಲವು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ. ಗ್ಯಾರಂಟಿಗಳ ಮೂಲಕ ನಿಗಮಗಳ ಕತ್ತನ್ನೇ ಹಿಸುಕಿದ್ದಾರೆ. ಜನಸಂದರ್ಶನದ ವೇಳೆ ಯುವಕರು ಕೊಟ್ಟ ಅರ್ಜಿಗಳನ್ನು ತಿಪ್ಪೆಗೆ ಎಸೆಯಲಾಗಿದೆ. ಖಜಾನೆ ಖಾಲಿ ಮಾಡಿಕೊಂಡು ಸರ್ಕಾರ ನಡೆಸಲು ಯೋಗ್ಯತೆ ಇಲ್ಲದೆ ಇದ್ದರೆ, ದಲಿತರ ಹಣದಲ್ಲಿ ಸರ್ಕಾರ ನಡೆಸುವುದಾದರೆ ದಯವಿಟ್ಟು ಕುರ್ಚಿ ಬಿಟ್ಟು ಮನೆ ಕಡೆ ಹೋಗಿ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಸಿಮೆಂಟ್ ಮಂಜು ಮಾತನಾಡಿದರು.