ಇಂದು ರಾಜಣ್ಣ ಔತಣಕೂಟ : ಸಿದ್ದರಾಮಯ್ಯ ಭಾಗಿ

| N/A | Published : Nov 07 2025, 02:00 AM IST / Updated: Nov 07 2025, 05:13 AM IST

KN Rajanna

ಸಾರಾಂಶ

‘ನವೆಂಬರ್‌ ಕ್ರಾಂತಿ’ ಹೇಳಿಕೆ ನೀಡಿ ಕುತೂಹಲ ಕೆರಳಿಸಿದ್ದ ತಮ್ಮ ಆಪ್ತ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು ತುಮಕೂರಿನ ತಮ್ಮ ನಿವಾಸಲ್ಲಿ ಶುಕ್ರವಾರ ಆಯೋಜಿಸಿರುವ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

 ಬೆಂಗಳೂರು :  ‘ನವೆಂಬರ್‌ ಕ್ರಾಂತಿ’ ಹೇಳಿಕೆ ನೀಡಿ ಕುತೂಹಲ ಕೆರಳಿಸಿದ್ದ ತಮ್ಮ ಆಪ್ತ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು ತುಮಕೂರಿನ ತಮ್ಮ ನಿವಾಸಲ್ಲಿ ಶುಕ್ರವಾರ ಆಯೋಜಿಸಿರುವ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇದು ಕಾಂಗ್ರೆಸ್‌ ಮಾತ್ರವಲ್ಲದೆ, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಹೈಕಮಾಂಡ್‌ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ ಸಚಿವ ಸಂಪುಟದಿಂದ ರಾಜಣ್ಣ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಈ ಮಧ್ಯೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಮುಂದುವರೆಯಬೇಕು ಎಂದು ರಾಜಣ್ಣ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಹೈಕಮಾಂಡ್‌ನಿಂದ ಕ್ರಮ ಎದುರಿಸಿರುವ ನಾಯಕ ತಾವು ನೀಡಿದ್ದ ಕ್ರಾಂತಿ ಹೇಳಿಕೆಗೆ ಪೂರಕವಾಗಿ ನವೆಂಬರ್‌ ತಿಂಗಳಲ್ಲೇ ಔತಣಕೂಟ ಆಯೋಜಿಸಿರುವುದು, ಆ ಔತಣಕೂಟದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರುವುದಕ್ಕೆ ವಿವಿಧ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಬಣದ ಕೆಲ ಸಚಿವರೂ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಮಧ್ಯಾಹ್ನ 2ಕ್ಕೆ ಪ್ರಯಾಣ:

ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ 2 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ತುಮಕೂರು ನಗರಕ್ಕೆ ತಲುಪಲಿದ್ದಾರೆ. ಜಿಲ್ಲೆಯ ವಿವಿಧೆಡೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಧ್ಯಾಹ್ನ 2.30ರಿಂದ 3.30ರವರೆಗೆ ರಾಜಣ್ಣ ಅವರ ಕ್ಯಾತ್ಸಂದ್ರ ನಿವಾಸದಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಸಮಯವನ್ನೂ ಕಾಯ್ದಿರಿಸಲಾಗಿದೆ.

ನವೆಂಬರ್‌ ಕ್ರಾಂತಿ’ಯ ಗುಟ್ಟು ಇಲ್ಲಿ ರಟ್ಟಾಗಲಿದೆಯೇ?

ಒಟ್ಟಿನಲ್ಲಿ ರಾಜಣ್ಣ ಹೇಳಿದಂತೆ ‘ನವೆಂಬರ್‌ ಕ್ರಾಂತಿ’ಯ ಗುಟ್ಟು ಇಲ್ಲಿ ರಟ್ಟಾಗಲಿದೆಯೇ? ಕ್ರಾಂತಿ ಚಟುವಟಿಕೆಗಳು ಇಲ್ಲಿಂದಲೇ ಶುರುವಾಗಲಿವೆಯೇ ಎನ್ನುವ ಕುತೂಹಲ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ.

Read more Articles on