ಸಾರಾಂಶ
ಬೆಂಗಳೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಹಾಗೂ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಅರ್ಜಿ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಿ ಆ.1ರಂದು ತೆಗೆದುಕೊಂಡಿದ್ದ ಸಚಿವ ಸಂಪುಟ ನಿರ್ಣಯವನ್ನು ಗುರುವಾರ ನಡೆದ ಸಂಪುಟ ಸಭೆಯಲ್ಲಿ ದೃಢೀಕರಿಸಲಾಗಿದೆ.
ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ, ಆ.1ರ ವಿಶೇಷ ಸಂಪುಟ ಸಭೆ ನಿರ್ಣಯಗಳನ್ನು ಸ್ಥಿರೀಕರಿಸಲು ನಿರ್ಧರಿಸಲಾಯಿತು.
ಆ.1ರಂದು ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ತುರ್ತು ಸಂಪುಟ ಸಭೆಯಲ್ಲಿ ‘ರಾಜ್ಯಪಾಲರು ಸಚಿವರ ಪರಿಷತ್ ಸಲಹೆ ಅಥವಾ ಸಚಿವ ಸಂಪುಟ ಸಭೆಯ ಸೂಚನೆ ಮೇರೆಗೆ ನಡೆದುಕೊಳ್ಳಬೇಕೆ ಹೊರತು ತಮ್ಮ ವಿವೇಚನೆಯ ಆಧಾರದಲ್ಲಿ ಅಲ್ಲ. ರಾಜ್ಯಪಾಲರು ವಿವೇಚನಾ ರಹಿತವಾಗಿ ಶೋಕಾಸ್ ನೋಟಿಸ್ ನೀಡಿದ್ದಾರೆ’ ಎಂದು ಆಕ್ಷೇಪಿಸಿದ್ದರು.
‘ರಾಜಕೀಯ ಕಾರಣಗಳಿಗಾಗಿ ಜನಾದೇಶ ಹಾಗೂ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಘಟಿತ ಪ್ರಯತ್ನಕ್ಕೆ ಸಾಂವಿಧಾನಿಕ ಕಚೇರಿ (ರಾಜ್ಯಪಾಲರ) ದುರ್ಬಳಕೆ ಆಗಿದೆ’ ಎಂದು ಒಂಬತ್ತು ಅಂಶಗಳ ಸಹಿತ ಸಂಪುಟ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆ ನಿರ್ಣಯವನ್ನು ಗುರುವಾರದ ಸಂಪುಟ ಸಭೆಯಲ್ಲಿ ದೃಢೀಕರಿಸಲಾಗಿದೆ.