ಗ್ಯಾರಂಟಿ ಕೊಡೋಕು ಹಣವಿಲ್ಲ- ರಾಜ್ಯ ಸರ್ಕಾರ ಪಾಪರ್ ಆಗೋಗಿದೆ : ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ

| Published : Aug 23 2024, 01:03 AM IST / Updated: Aug 23 2024, 04:24 AM IST

R Ashok

ಸಾರಾಂಶ

ಗ್ಯಾರಂಟಿ ಕೊಡೋಕು ಸರ್ಕಾರದವರ ಬಳಿ ಹಣವಿಲ್ಲ. ದಿವಾಳಿತನದಿಂದ ಪಾರಾಗುವುದಕ್ಕೆ ಅವರಿಗೆ ದಾರಿಯೇ ಇಲ್ಲ. ಗ್ಯಾರಂಟಿ ನಿಲ್ಲಿಸಿದ್ರೆ ದೇಶದ ಪಕ್ಷಕ್ಕೆ ತೊಂದರೆಯಾಗುತ್ತೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿರುವುದರಿಂದಲೇ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆ ಮಾಡಿದ್ದಾರೆ.  

 ಮಂಡ್ಯ :  ಪೆಟ್ರೋಲ್-ಡೀಸೆಲ್, ಹಾಲಿನ ದರವನ್ನು ಹೆಚ್ಚಿಸಾಯ್ತು. ಈಗ ನೀರಿನ ದರ ಏರಿಸೋಕೆ ರೆಡಿಯಾಗಿದ್ದಾರೆ. ಅಂದರೆ, ಈ ಸರ್ಕಾರ ಸಂಪೂರ್ಣ ಪಾಪರ್ ಆಗಿ ಬರ್ಬಾದ್ ಆಗೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಗ್ಯಾರಂಟಿ ಕೊಡೋಕು ಸರ್ಕಾರದವರ ಬಳಿ ಹಣವಿಲ್ಲ. ದಿವಾಳಿತನದಿಂದ ಪಾರಾಗುವುದಕ್ಕೆ ಅವರಿಗೆ ದಾರಿಯೇ ಇಲ್ಲ. ಗ್ಯಾರಂಟಿ ನಿಲ್ಲಿಸಿದ್ರೆ ದೇಶದ ಪಕ್ಷಕ್ಕೆ ತೊಂದರೆಯಾಗುತ್ತೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿರುವುದರಿಂದಲೇ ಬೆಂಗಳೂರಿನಲ್ಲಿ ನೀರಿನ ಬೆಲೆ ಏರಿಕೆ ಮಾಡಿದ್ದಾರೆ. ನೀರಿನ ದರ ಏರಿಕೆ ಮಾಡಿರೋದು ದೊಡ್ಡ ಅಪರಾಧ. ಅದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮುಡಾದಲ್ಲಿ ಹಗರಣ ನಡೆದಿದ್ದರೂ ಮುಖ್ಯಮಂತ್ರಿ ರಾಜೀನಾಮೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರೇ ಬೈದರೂ ನೀರಿನ ದರ ಏರಿಕೆ ಮಾಡದೆ ಇರೋಲ್ಲ ಅಂತಿದಾರೆ. ಅವರಿಗೆ ತಮ್ಮ ಸರ್ಕಾರ ಇರೋಲ್ಲ ಎಂಬುದು ಗ್ಯಾರಂಟಿಯಾಗಿದೆ. ಆದ್ದರಿಂದ ತುಘಲಕ್ ಆಡಳಿತ ಮಾಡುತ್ತಿದ್ದಾರೆ. ನೀರಿನ ದರ ಏರಿಕೆ ಮಾಡಿದರೆ ಬೆಂಗಳೂರು ಶಾಸಕರು, ಬಿಜೆಪಿ ಪಕ್ಷದವರೆಲ್ಲರೂ ಒಗ್ಗೂಡಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯ ಸರ್ಕಾರದಿಂದ ಕೆಪಿಎಸ್ಸಿ ಪರೀಕ್ಷೆ ಮುಂದೂಡಿರುವ ಬಗ್ಗೆ ಕೇಳಿದಾಗ, ಕಾಂಗ್ರೆಸ್‌ನವರಿಗೆ ಅಧಿಕಾರದಲ್ಲಿ ಮುಂದುವರೆಯುವ ನಂಬಿಕೆಯೇ ಇಲ್ಲ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಅಷ್ಟು ದಿನ ಲೂಟಿ ಮಾಡೋಕೆ ನಿಂತಿದ್ದಾರೆ. ಅದಕ್ಕೆ ಯಾವುದು ಸಿಗುತ್ತೋ ಅದರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಮೊನ್ನೆ ಪಿಎಸ್‌ಐ ಬಳಿ 30 ಲಕ್ಷ ರು. ಪಡೆದಿದ್ದು, ಅದೂ ಕೂಡ ಕೇಸ್ ನಡೆಯುತ್ತಿದೆ. ಕಾಂಗ್ರೆಸ್ ಪಾರ್ಟಿ ಮುಗಿದ ಕಥೆ ಎಂದು ಅಶೋಕ್ ಭವಿಷ್ಯ ನುಡಿದರು.