‘ಸಿದ್ದರಾಮಯ್ಯ ಔಟ್‌ಗೋಯಿಂಗ್ ಚೀಫ್ ಮಿನಿಸ್ಟರ್. ಇದು ಅವರ ಕೊನೆಯ ಅಧಿವೇಶನ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಅಲ್ಲದೆ, ‘ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರಾಜ್ಯದ ಖಜಾನೆ ಖಾಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ : ‘ಸಿದ್ದರಾಮಯ್ಯ ಔಟ್‌ಗೋಯಿಂಗ್ ಚೀಫ್ ಮಿನಿಸ್ಟರ್. ಇದು ಅವರ ಕೊನೆಯ ಅಧಿವೇಶನ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಅಲ್ಲದೆ, ‘ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ನ್ನು ತೃಪ್ತಿ ಪಡಿಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸಿಎಂ ವಿರುದ್ಧ ಮಾತನಾಡಿ, ‘ಪಾಪ ಮುಖ್ಯಮಂತ್ರಿಯವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಮುಖ್ಯಮಂತ್ರಿಗಳ ಮಾತಿನ ಧಾಟಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಔಟ್‌ಗೋಯಿಂಗ್ ಸಿಎಂರಿಂದ ಸದನದಲ್ಲಿ ಚರ್ಚೆಗೆ ಪರಿಹಾರ ಸಿಗುತ್ತದೆ ಎನ್ನುವ ಆಶಾಭಾವನೆ ಇರಲಿಲ್ಲ’ ಎಂದು ವ್ಯಂಗ್ಯವಾಗಿ ನುಡಿದರು.
ಮುಖ್ಯಮಂತ್ರಿಯಾಗಿ ಎಷ್ಟು ದಿನ ಕೂರುತ್ತೀರಿ ಎನ್ನುವುದು ಮುಖ್ಯವಲ್ಲ. ಆ ಸ್ಥಾನದಲ್ಲಿ ಇದ್ದು ರಾಜ್ಯಕ್ಕೆ ಏನು ಕೆಲಸ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯನವರ ಕೊನೆಯ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ನಡೆಯಬೇಕಿದೆ. ಕಳೆದ ಎರಡು ವರ್ಷ ಏನೂ ಮಾಡದೇ ಇರುವವರು ಇನ್ನೆರಡು ವಾರದಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಭ್ರಷ್ಟರ ಸರ್ಕಾರವಿದು:
ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅವರ ಹೈಕಮಾಂಡ್‌ಗೆ ಎಟಿಎಂ ಆಗಿ ಪರಿವರ್ತನೆ ಆಗುತ್ತದೆ ಎಂದು ಹಿಂದೆನೇ ನಾನು ಹೇಳಿದ್ದೆ. ಈಗದು ನಿಜವಾಗಿದೆ. ರಾಜ್ಯ ಖಜಾನೆಯ ಹಣ ಹೈಕಮಾಂಡ್‌ಗೆ ರವಾನೆಯಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಣ ಪೋಲಾಯಿತು. ಹೈಕಮಾಂಡ್ ತೃಪ್ತಿಪಡಿಸಲು ಗುತ್ತಿಗೆದಾರರ ಬಳಿ ಕಮೀಷನ್ ಪಡೆಯಲಾಗುತ್ತದೆ. ಗುತ್ತಿಗೆದಾರರ ಸಂಘದವರು ಕೂಡ ಈ ಬಗ್ಗೆ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ ರಾಜ್ಯದಲ್ಲಿ ಏನೂ ಅಭಿವೃದ್ಧಿ ಆಗುತ್ತಿಲ್ಲ. ದುಡ್ಡು ಹೊಡೆಯುವವರಿಗೆ ಬಡವರಾದರೇನು? ಶ್ರೀಮಂತರಾದರೇನು? ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ತೃಪ್ತಿ ಪಡಿಸುವ ಕೆಲಸ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣ ಬೈರೇಗೌಡರ ವಿರುದ್ಧವೂ ಗಂಭೀರ ಆರೋಪ
ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧವೂ ಗಂಭೀರ ಆರೋಪವಿದೆ. ದಾಖಲಾತಿ ಪರಿಶೀಲನೆ ಮಾಡದೇ ಅಕ್ರಮ ನಡೆಸಬಹುದಾ? ಎಂದು ಅವರು ಪ್ರಶ್ನಿಸಿದರು. ಗದಗದಲ್ಲಿ ಆಯುಷ್ ಇಲಾಖೆಯ ಔಷಧ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದ ಮುಖಾಂತರ ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಸಂದಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.


