ದ್ವೇಷ ರಾಜಕಾರಣ, ಹೆಸರು ಬದಲಿಸುವುದು ಮಾತ್ರ ಗೊತ್ತಿರುವ ಕೇಂದ್ರ ಸರ್ಕಾರ ರಾಜಭವನವನ್ನು ಲೋಕಭವನ ಎಂದು ಬದಲಿಸಲು ಹೊರಟಿದೆ. ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಅದರ ಹೆಸರು ಬದಲಾವಣೆ ಸಾಧ್ಯವಿಲ್ಲ. ರಾಜಭವನ ಎಂದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ದ್ವೇಷ ರಾಜಕಾರಣ, ಹೆಸರು ಬದಲಿಸುವುದು ಮಾತ್ರ ಗೊತ್ತಿರುವ ಕೇಂದ್ರ ಸರ್ಕಾರ ರಾಜಭವನವನ್ನು ಲೋಕಭವನ ಎಂದು ಬದಲಿಸಲು ಹೊರಟಿದೆ. ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಅದರ ಹೆಸರು ಬದಲಾವಣೆ ಸಾಧ್ಯವಿಲ್ಲ. ರಾಜಭವನ ಎಂದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ) ಯೋಜನೆ ಹೆಸರನ್ನು ಜಿ ರಾಮ್‌ ಜಿ ಎಂದು ಬದಲಿಸುತ್ತಿರುವ ಕೇಂದ್ರದ ಕ್ರಮಕ್ಕೆ ಕಿಡಿಕಾರಿರುವ ಅವರು, ‘ಬಿಜೆಪಿಯವರಿಗೆ ಮೊದಲಿನಿಂದಲೂ ಮಹಾತ್ಮಗಾಂಧೀಜಿ, ಅಂಬೇಡ್ಕರ್, ಬಡವರನ್ನು ಕಂಡರೆ ಆಗುವುದಿಲ್ಲ’ ಎಂದು ಹೇಳಿದರು.

ಸುವರ್ಣಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜಭವನ ಎಂಬುದು ಮೊದಲಿನಿಂದಲೂ ಬಂದಿರುವ ಹೆಸರು. ಅದನ್ನು ಈಗ ಲೋಕಭವನ ಎಂದು ಬದಲಿಸಲು ಹೊರಟಿದ್ದಾರೆ. ರಾಜಭವನ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ, ಲೋಕಭವನ ಎಂದೂ ಮಾಡಲಾಗಲ್ಲ. ರಾಜ್ಯಪಾಲರು ಬೇರೆ ಇರಬಹುದು. ಆದರೆ ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಹೀಗಾಗಿ ರಾಜಭವನ ಎಂದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ನರೇಗಾ ಯೋಜನೆಯನ್ನು ‘ಜಿ ಮೋದಿ ಜಿ’ ಮಾಡ್ತಾರೆ:ದೇಶಾದ್ಯಂತ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ) ಹೆಸರನ್ನು ಬದಲಿಸಿ ಜಿ ರಾಮ್‌ ಜಿ ಎಂದು ಬದಲಿಸಿದ್ದಾರೆ. ಇವರಿಗೆ ಮೊದಲಿನಿಂದಲೂ ಮಹಾತ್ಮಗಾಂಧಿ, ಅಂಬೇಡ್ಕರ್‌ ಹಾಗೂ ಬಡವರನ್ನು ಕಂಡರೆ ಆಗುವುದಿಲ್ಲ. ನಮ್ಮ ಐದು ಗ್ಯಾರಂಟಿ ಯೋಜನೆಯನ್ನು ವಿರೋಧಿಸಿದವರು ಅವರು. ಈಗ ಅವುಗಳನ್ನೇ ನಕಲು ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಮಾಡಿದರು. ಹಲವು ಹೆಸರು ಬದಲಿಸಿದ್ದು, ಹೆಸರು ಬದಲಾವಣೆ, ದ್ವೇಷ ರಾಜಕೀಯ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿನ್ನದ ಬೆಲೆ ಗಗನಕ್ಕೆ ಹೋಗಿದೆ ಬೆಲೆ ಏರಿಕೆ, ಹಣದುಬ್ಬರ ಕಡಿಮೆ ಮಾಡುವ ಪ್ರಯತ್ನ ಮಾಡಲ್ಲ ಎಂದು ಹರಿಹಾಯ್ದರು.