ಸಾರಾಂಶ
ಮೈಸೂರು : ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಂಚ ಶೇ.60ಕ್ಕೆ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗಳ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ. ಮೊದಲು ಪಿಡಿಒಗಳು ಲಂಚ ಪಡೆಯುತ್ತಿದ್ದರು, ಈಗ ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ ಎಂದು ದೂರಿದರು.
ತಾವು ಸತ್ಯವಂತರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸತ್ಯಮೇವ ಜಯತೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಾ?. ಅವರು ಆತ್ಮಸಾಕ್ಷಿಯಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೂ ಇತಿಮಿತಿ ಎಂಬುದು ಇಲ್ಲವಾ?. ಈಗಿನ ಸರ್ಕಾರದ ಲಂಚಾವತಾರ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.