ಸಾರಾಂಶ
ಮುಂದಿನ 6 ತಿಂಗಳೊಳಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ : ಮುಂದಿನ 6 ತಿಂಗಳೊಳಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ ಡಾ। ಸುಧಾಕರ್, ‘ಡಿಕೆಶಿಯವರು ಸಿಎಂ ಆಗುವ ದಿನಗಳು ಹತ್ತಿರ ಬರುತ್ತಿವೆ. 6 ತಿಂಗಳೊಳಗೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಹೀಗಾಗಿ, ಡಿನ್ನರ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಡಿಕೆಶಿಯವರು ವಿದೇಶ ಪ್ರವಾಸಕ್ಕೆ ತೆರಳಿದ ಸಮಯದಲ್ಲಿಯೇ ಡಿನ್ನರ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದಾರೆ’ ಎಂದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಗುಂಪುಗಾರಿಕೆ ಎಲ್ಲ ಪಕ್ಷಗಳಲ್ಲಿ ಇದೆ. ಕೇವಲ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ನಲ್ಲೂ ಇದೆ. ಸಿಎಂ ಅವರೇ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. 35 ಮಂದಿ ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು. ಡಿಕೆಶಿ ಫಾರಿನ್ ಟೂರ್‌ನಲ್ಲಿ ಇರಬೇಕಾದರೆ ಸಿಎಂ ಅವರು ಮೀಟಿಂಗ್ ಮಾಡಿದ್ದು ಗುಂಪುಗಾರಿಕೆ ಅಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗುಂಪುಗಾರಿಕೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.