ಎನ್. ರವಿಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕ್ಷೇತ್ರ ಮರು ವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಾಗಿ ತಂದಿದ್ದಕ್ಕೆ ಕಾಂಗ್ರೆಸ್ ಹೊಸ ವಾದ ಹೂಡುತ್ತಿದೆ. ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಸುಳ್ಳು ನಿರೂಪಣೆ ಮುಖಾಂತರ ಜನರನ್ನು ಪ್ರಚೋದಿಸುತ್ತಿದೆ. ಭಯದ ವಾತಾವರಣ ನಿರ್ಮಿಸುತ್ತಿದೆ.
ಪ್ರತಿಯೊಬ್ಬ ಭಾರತೀಯನ ಮತಕ್ಕೂ ಸಮಾನ ಮೌಲ್ಯವಿರಬೇಕು ಎಂಬುದು ಸಂವಿಧಾನದ ಆಶಯ. ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ವೈಜ್ಞಾನಿಕವಾಗಿ ಹೆಚ್ಚಿಸುವುದು ಮೋದಿ ಅವರ ಗುರಿ. ಆದರೆ, ಕಾಂಗ್ರೆಸ್ ಈ ವಿಷಯದಲ್ಲಿ ಪ್ರಾದೇಶಿಕ ವಾದವನ್ನು ಎತ್ತಿಕಟ್ಟಿ ದೇಶವನ್ನು ಒಡೆಯಲು ನೋಡಿತು.
ಸಬಲ ಪ್ರಜಾಪ್ರಭುತ್ವದ ಅಡಿಪಾಯ
ಕ್ಷೇತ್ರ ಮರು ವಿಂಗಡಣೆ ಎಂಬುದು ಸಬಲ ಪ್ರಜಾಪ್ರಭುತ್ವದ ಅಡಿಪಾಯ. 1971ರ ಜನಗಣತಿಯ ಆಧಾರದ ಮೇಲೆ ನಾವು ಇಂದಿಗೂ ನಡೆಯುತ್ತಿದ್ದೇವೆ. 140 ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಹೆಚ್ಚಿನ ಪ್ರಾತಿನಿಧ್ಯದ ಅಗತ್ಯವಿದೆ. ಮರು ವಿಂಗಡಣೆಯ ನಂತರ ಕರ್ನಾಟಕದ ಸೀಟುಗಳು 28 ರಿಂದ 42ಕ್ಕೆ ಏರುತ್ತಿದ್ದವು. ಇದು ದೆಹಲಿಯಲ್ಲಿ ಕನ್ನಡಿಗರ ಧ್ವನಿಯನ್ನು ಹೆಚ್ಚಿಸುತ್ತಿತ್ತು. ಕಾಂಗ್ರೆಸ್ ಕೇವಲ ತನ್ನ ಅಧಿಕಾರ ಕಳೆದು ಕೊಳ್ಳುವ ಭೀತಿಯಿಂದ ಇದನ್ನು ವಿರೋಧಿಸಿತು.
ದಕ್ಷಿಣ ಭಾರತದ ಬಗ್ಗೆ ಕಾಂಗ್ರೆಸ್ ಅಪಪ್ರಚಾರ
ಕ್ಷೇತ್ರ ಮರು ವಿಂಗಡಣೆ ಮತ್ತು ದಕ್ಷಿಣ ಭಾರತದ ಹಿತಾಸಕ್ತಿ - ಸುಳ್ಳುಗಳನ್ನು ಅಂಕಿ-ಅಂಶಗಳೇ ಬಯಲು ಮಾಡುತ್ತವೆ. ವಿರೋಧಪಕ್ಷಗಳು ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂಬ ಸುಳ್ಳು ಸುದ್ದಿ ಹರಡುತ್ತಿವೆ. ಆದರೆ ಅಮಿತ್ ಶಾ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ವಾಸ್ತವಾಂಶ ಬಿಚ್ಚಿಟ್ಟಿದ್ದಾರೆ. ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕದ ಪ್ರಸ್ತುತ 28 ಲೋಕಸಭಾ ಸ್ಥಾನಗಳು 42ಕ್ಕೆ ಏರಿಕೆಯಾಗುತ್ತಿದ್ದವು. ತಮಿಳುನಾಡು 39ರಿಂದ 59, ಆಂಧ್ರಪ್ರದೇಶ 25ರಿಂದ 38, ತೆಲಂಗಾಣ 17ರಿಂದ 26, ಕೇರಳ 20ರಿಂದ 30ಕ್ಕೆ ಹೆಚ್ಚುತ್ತಿದ್ದವು. ಆದರೆ, ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಾ ಹೊಸ ಬೂಟಾಟಿಕೆ ಪ್ರದರ್ಶಿಸಿದೆ.
ದೇಶದ ಸುಭದ್ರ ಭವಿಷ್ಯಕ್ಕಾಗಿ ಮರು ವಿಂಗಡಣೆ:
ದಕ್ಷಿಣದ 5 ರಾಜ್ಯಗಳ ಒಟ್ಟಾರೆ ಸೀಟುಗಳ ಪಾಲು ಪ್ರಸ್ತುತ ಸಂಸತ್ತಿನಲ್ಲಿ ಶೇ.23.76 ಇದೆ. ಮರು ವಿಂಗಡಣೆಯ ನಂತರ ಇದು ಸುಮಾರು ಶೇ.23.87ಕ್ಕೆ ಏರಿಕೆಯಾಗುತ್ತಿತ್ತು. ಅಂದರೆ, ದಕ್ಷಿಣದ ರಾಜ್ಯಗಳ ಪ್ರಭಾವ ಸಂಸತ್ತಿನಲ್ಲಿ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿತ್ತು. ದೇಶದ ಸುಭದ್ರ ಭವಿಷ್ಯಕ್ಕಾಗಿ ಕ್ಷೇತ್ರಗಳ ಮರು ವಿಂಗಡಣೆ ಅತ್ಯಂತ ಅವಶ್ಯಕವಾದ ಪ್ರಕ್ರಿಯೆ. 1971ರಲ್ಲಿ ಒಬ್ಬ ಸಂಸದರು ಸರಾಸರಿ 10 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದರು. ಇಂದು ಆ ಸಂಖ್ಯೆ 25 ರಿಂದ 30 ಲಕ್ಷಕ್ಕೆ ಏರಿದೆ. ಪ್ರಜಾಪ್ರಭುತ್ವದ ಮೌಲ್ಯ ಉಳಿಯಬೇಕಾದರೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯ.
ವಿಪಕ್ಷಗಳ ಆರೋಪ ಅರ್ಥ ರಹಿತ:
ಈ ವಿರೋಧ ಪಕ್ಷಗಳು ಮಸೂದೆ ರಾಜಕೀಯವಾಗಿ ದುರ್ಬಳಕೆಯಾಗಲಿದೆ ಎನ್ನುವ ಆರೋಪ ಹೊರಿಸಿದ್ದು ಅರ್ಥರಹಿತ. ಭಾರತದಲ್ಲಿ ಕ್ಷೇತ್ರ ಮರು ವಿಂಗಡಣೆಯನ್ನು ಸ್ವತಂತ್ರ ಮರು ವಿಂಗಡಣಾ ಸಮಿತಿ ಕೈಗೊಳ್ಳಲಿದ್ದು, ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಇದರ ನೇತೃತ್ವ ವಹಿಸುತ್ತಾರೆ. ಚುನಾವಣಾ ಆಯೋಗದ ಮುಖ್ಯಸ್ಥರೂ ಇದರ ಭಾಗವಾಗಿರುತ್ತಾರೆ.
ಈ ಸಮಿತಿ ಸಾರ್ವಜನಿಕ ಸಂವಾದಗಳ ಮೂಲಕ ಕಾರ್ಯಾಚರಿಸಲಿದ್ದು, ತನ್ನ ಶಿಫಾರಸುಗಳನ್ನು ಪ್ರಕಟಿಸುತ್ತದೆ. ಈ ಸಮಿತಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತದೆಯೇ ಹೊರತು ಸರ್ಕಾರಿ ಸಂಸ್ಥೆಯಂತಲ್ಲ. ಸಮಿತಿಯ ನಿರ್ಧಾರಗಳು ಕಾನೂನಿನ ಬಲ ಹೊಂದಿರಲಿದ್ದು, ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆದು ಯಾವುದೇ ಪಕ್ಷದ ಪ್ರಭಾವಕ್ಕೂ ಒಳಗಾಗಿರುವುದಿಲ್ಲ.
ಲೋಕಸಭಾ ಸ್ಥಾನಗಳು ಕಡಿಮೆ ಆಗಲ್ಲ
ಕ್ಷೇತ್ರ ಮರು ವಿಂಗಡಣೆಯ ಕುರಿತು ವಿಪಕ್ಷಗಳು ಹರಿಬಿಡುತ್ತಿರುವ ಸುದ್ದಿಗಳು ನಿಜವೇ ಆಗಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಪ್ರಸ್ತಾಪಿತ ಮಸೂದೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನವನ್ನು ಕಡಿಮೆಗೊಳಿಸುವ ಪ್ರಸ್ತಾಪವೇ ಇರಲಿಲ್ಲ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೂ ದೇಶಕ್ಕೆ ಸ್ಪಷ್ಟಪಡಿಸಿದ್ದರು. ನೂತನ ಮಸೂದೆ ಒಟ್ಟು ಲೋಕಸಭಾ ಸ್ಥಾನಗಳನ್ನು ವಿಸ್ತರಿಸುವತ್ತ ಗಮನ ಹರಿಸಿದ್ದು, ಯಾವುದೇ ರಾಜ್ಯದ ಲೋಕಸಭಾ ಸ್ಥಾನಗಳು ಕಡಿಮೆಯಾಗುತ್ತಿರಲಿಲ್ಲ. ಬದಲಿಗೆ, ದಕ್ಷಿಣ ಭಾರತದ ರಾಜ್ಯಗಳೂ ಸೇರಿದಂತೆ, ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳೂ ಹೆಚ್ಚಾಗುತ್ತಿದ್ದವು.
ಈ ಸುಧಾರಣೆ ಭಾರತದ ಒಂದು ಪ್ರದೇಶವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವ ಕ್ರಮವಾಗಿರಲಿಲ್ಲ. ಇದು ಒಕ್ಕೂಟದ ಸಮತೋಲನವನ್ನು ಕಾಯ್ದುಕೊಳ್ಳುತ್ತಾ, ಈಗಿನ ಜನಸಂಖ್ಯಾ ವಾಸ್ತವಕ್ಕೆ ಅನುಗುಣವಾಗಿ ಪ್ರಾತಿನಿಧ್ಯವನ್ನು ಒದಗಿಸುವ ಮಹತ್ವದ ಕ್ರಮವಾಗಿತ್ತು.
ವಿಕಸಿತ ಭಾರತದ ಕನಸಿಗೆ ನಾರಿಶಕ್ತಿಯೇ ಇಂಧನ:
ಭಾರತವು ‘ಅಮೃತಕಾಲ’ದಲ್ಲಿ ದಾಪುಗಾಲು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನದಲ್ಲಿ ಮಂಡಿಸಿದ ‘ಮಹಿಳಾ ಮೀಸಲಾತಿ ಮಸೂದೆ’ ಕೇವಲ ಒಂದು ಶಾಸನವಲ್ಲ, ಅದು ಭಾರತದ ಅರ್ಧದಷ್ಟು ಜನಸಂಖ್ಯೆಗೆ ನೀಡಿದ ಸಾಂವಿಧಾನಿಕ ಗೌರವ. 2047ರ ವೇಳೆಗೆ ‘ವಿಕಸಿತಭಾರತ’ ನಿರ್ಮಿಸುವ ಕನಸಿಗೆ ನಾರಿಶಕ್ತಿಯೇ ಇಂಧನ. ಆದರೆ, ಈ ಐತಿಹಾಸಿಕ ಕ್ಷಣದ ಹಿಂದೆ ಕಾಂಗ್ರೆಸ್ ಪಕ್ಷದ ಮೂರು ದಶಕಗಳ ಕಾಲದ ವಂಚನೆಯ ಕರಾಳ ಇತಿಹಾಸವಿದೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲು ಪರಿಚಯಿಸಿದ್ದು 1996ರಲ್ಲಿ. ಅಲ್ಲಿಂದ ಇಂದಿನವರೆಗೆ ಸುಮಾರು 30 ವರ್ಷಗಳ ಕಾಲ ಈ ಮಸೂದೆಯನ್ನು ಜಾರಿಗೆ ತರದೆ ಕಾಂಗ್ರೆಸ್ ವ್ಯವಸ್ಥಿತವಾಗಿ ವಿಳಂಬ ಮಾಡುತ್ತಾ ಬಂದಿದೆ. ಮಹಿಳೆಯರ ಸಬಲೀಕರಣದ ಬಗ್ಗೆ ಕೇವಲ ಭಾಷಣ ಮಾಡುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಈ ಮಸೂದೆಯನ್ನು ಮೂಲೆಗೆ ತಳ್ಳಿತು. ಮಹಿಳೆಯರಿಗೆ ಅಧಿಕಾರ ನೀಡಿದರೆ ತಮ್ಮ ವಂಶಪಾರಂಪರ್ಯ ರಾಜಕಾರಣಕ್ಕೆ ಧಕ್ಕೆಯಾಗುತ್ತದೆ ಎಂಬ ಭೀತಿ ಅವರಲ್ಲಿತ್ತು.
ಕಾಂಗ್ರೆಸ್‌ನಿಂದ ಮಹಿಳೆಯರ ಹಕ್ಕು ಬಲಿ
1996 ರಿಂದ 2003ರ ಅವಧಿಯಲ್ಲಿ ಅಂದಿನ ಸರ್ಕಾರಗಳು ಮಸೂದೆ ಮಂಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದವು. ತನ್ನ ಮಿತ್ರಪಕ್ಷಗಳನ್ನು ಸಮಾಧಾನಪಡಿಸಲು ಕಾಂಗ್ರೆಸ್ ಮಹಿಳೆಯರ ಹಕ್ಕುಗಳನ್ನು ಬಲಿಕೊಟ್ಟಿತು. ಈ ಅವಧಿಯಲ್ಲಿ ನಡೆದ ಪ್ರತಿಯೊಂದು ಪ್ರಯತ್ನವೂ ವಿರೋಧಪಕ್ಷಗಳ ಹಠಮಾರಿ ಧೋರಣೆಯಿಂದ ವಿಫಲವಾಯಿತು. 2010 ರಲ್ಲಿ ಯುಪಿಎ ಸರ್ಕಾರ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಅಂಗೀಕರಿಸಿತು. ಆದರೆ ಅದು ಲೋಕಸಭೆಯಲ್ಲಿ ಮಂಡನೆಯಾಗಲೇ ಇಲ್ಲ. ರಾಜ್ಯಸಭೆಯಲ್ಲಿ ಅಂಗೀಕಾರವಾದ ಮಸೂದೆಯನ್ನು ಲೋಕಸಭೆಯಲ್ಲಿ ತರಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತೇ? ಖಂಡಿತ ಇಲ್ಲ. ಬದಲಾಗಿ, ತಮ್ಮ ಸೀಟುಗಳು ಕೈತಪ್ಪುತ್ತವೆ ಎಂಬ ಅಭದ್ರತೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿತ್ತು. ಲೋಕಸಭೆಯಲ್ಲಿ ತೀವ್ರ ವಿರೋಧದ ನೆಪವೊಡ್ಡಿ ಮಸೂದೆಯನ್ನು ಜೀವಂತವಾಗಿ ಹೂತು ಹಾಕಲಾಯಿತು. ಕಾಂಗ್ರೆಸ್ ಪಕ್ಷವು ಕೇವಲ ಮತ ಬ್ಯಾಂಕ್‌ಗಾಗಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ಹೇಗೆ ಬಲಿ ನೀಡಿತು ಎಂಬುದಕ್ಕೆಈ ಎರಡು ಉದಾಹರಣೆಗಳು ಸಾಕ್ಷಿಯಾಗಿವೆ.
1985ರಲ್ಲಿ ಸುಪ್ರೀಂ ಕೋರ್ಟ್ ಶಹಾಬಾನು ಎಂಬ 62 ವರ್ಷದ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ ಎಂದು ತೀರ್ಪು ನೀಡಿತು. ಆದರೆ, ಆಗಿನ ರಾಜೀವ್ ಗಾಂಧಿ ಸರ್ಕಾರವು 400ಕ್ಕೂ ಹೆಚ್ಚು ಸಂಸದರ ಬಲವಿದ್ದರೂ, ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಬದಲಿಸಲು ‘ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ 1986’ ತಂದಿತು. ಇದು ಮಹಿಳೆಯರ ಹಕ್ಕುಗಳ ಮೇಲೆ ನಡೆದ ದೊಡ್ಡ ಹಲ್ಲೆ.
ಸುಮಾರು 20ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ಈ ಪದ್ಧತಿಯನ್ನುನಿಷೇಧಿಸಿದ್ದರೂ, ಭಾರತದ ಕಾಂಗ್ರೆಸ್ ಸರ್ಕಾರಗಳು ಇದನ್ನು ಸಮರ್ಥಿಸಿಕೊಳ್ಳುತ್ತಾ ಬಂದವು. 2017ರಲ್ಲಿ 10 ಲಕ್ಷಕ್ಕೂಹೆಚ್ಚು ಮುಸ್ಲಿಂ ಮಹಿಳೆಯರು ಈ ಪದ್ಧತಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಮೋದಿಯವರು 2019ರಲ್ಲಿ ಕಾನೂನು ತರುವ ಮೂಲಕ ಕೋಟ್ಯಂತರ ಮಹಿಳೆಯರಿಗೆ ಘನತೆಯ ಬದುಕು ನೀಡಿದರು.
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ಕ್ಷೇತ್ರಗಳ ಗಡಿ ಗುರುತಿಸುವುದು (Delimitation) ತಾಂತ್ರಿಕವಾಗಿ ಅನಿವಾರ್ಯವಾಗಿದೆ. ಮೀಸಲಾತಿ ಮತ್ತು ಮರು ವಿಂಗಡಣೆ ಎರಡೂ ನಾಣ್ಯದ ಎರಡು ಮುಖಗಳಿದ್ದಂತೆ.
ಮರು ವಿಂಗಡಣೆಯಿಂದ ಭಾರತದ ಒಗ್ಗೂಡುವಿಕೆ
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆಯು ಭಾರತವನ್ನು ಭಾವನಾತ್ಮಕವಾಗಿ ಮತ್ತು ರಾಜಕೀಯವಾಗಿ ಒಂದುಗೂಡಿಸಲಿದೆ. ಇದು ಕೇವಲ ಉತ್ತರ ಅಥವಾ ದಕ್ಷಿಣದ ಪ್ರಶ್ನೆಯಲ್ಲ, ಇದು ಭಾರತದ ಪ್ರತಿ ಮನೆತನದ ಪ್ರತಿಭಾವಂತ ಮಹಿಳೆ ಸಂಸತ್ತಿಗೆ ಬರುವ ಕಾಲ. ಇಲ್ಲಿ ವಂಶಕ್ಕೆ ಸ್ಥಾನವಿಲ್ಲ, ಅರ್ಹತೆಗೆ ಮಾತ್ರ ಸ್ಥಾನ.
ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಕೇವಲ ಮತಗಳಿಗಾಗಿ ಬಳಸಿಕೊಂಡಿತು. ಆದರೆ ಬಿಜೆಪಿ ಅವರನ್ನು ರಾಷ್ಟ್ರ ನಿರ್ಮಾಣದ ಪಾಲುದಾರರನ್ನಾಗಿ ಮಾಡಿದೆ. ಈಗಿನ ಮಸೂದೆಯು ಕಾಂಗ್ರೆಸ್ ರಾಜಕೀಯ ಅಭದ್ರತೆಗೆ ಸಾಕ್ಷಿಯಾಗಿದೆ. ಬರುವ ದಿನಗಳಲ್ಲಿ ಭಾರತದ ನಾರಿ ಶಕ್ತಿಯು ಈ ವಂಚಕರಿಗೆ ತಕ್ಕ ಪಾಠ ಕಲಿಸಲಿದೆ. ನಾವು ಮೋದಿಯವರ ನಾಯಕತ್ವದಲ್ಲಿ ‘ವಿಕಸಿತ ಭಾರತ’ದತ್ತ ಮುನ್ನಡೆಯೋಣ.
