ಮಳೆಗಾಲದಲ್ಲಿ ಗಮನ ಹರಿಸಬೇಕಾದ ಆಹಾರ ಕುರಿತ 3 ವಿಚಾರಗಳು

| Published : Jul 31 2024, 01:11 AM IST

ಸಾರಾಂಶ

ಮಳೆಗಾಲದಲ್ಲಿ ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ಎಂಬ ಮಾಹಿತಿಯನ್ನು ನ್ಯೂಟ್ರಿಷನಿಸ್ಟ್, ಎಂಬಿಬಿಎಸ್ ವೈದ್ಯೆ ಡಾ.ರೋಹಿಣಿ ನೀಡಿದ್ದಾರೆ. ಒಮ್ಮೆ ಓದಿ ನೋಡಿ.

ಮಳೆಗಾಲದಲ್ಲಿ ಆರೋಗ್ಯ ಕುರಿತು ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಇತ್ಯಾದಿ ಜ್ವರಗಳು ಕಾಡುವುದು ಸಾಮಾನ್ಯವಾಗಿದೆ. ನ್ಯೂಟ್ರಿಷನಿಸ್ಟ್, ಎಂಬಿಬಿಎಸ್ ವೈದ್ಯೆ ಡಾ.ರೋಹಿಣಿ ಪಾಟೀಲ್ ಈ ಸಂದರ್ಭದಲ್ಲಿ ಗಮನ ಹರಿಸಬೇಕಾದ ಆಹಾರ ವಿಚಾರಗಳ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.ಮಳೆಗಾಲದಲ್ಲಿ ಜ್ವರದ ಸಮಸ್ಯೆ ಎಲ್ಲೆಲ್ಲೂ ಹರಡಿರುತ್ತದೆ. ವಾತಾವರಣ ಬದಲಾವಣೆಯಿಂದ, ಥಂಡಿಯ ಕಾರಣಕ್ಕೆ ಹಲವು ಬಗೆಯ ಜ್ವರಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಸೊಳ್ಳೆಯಿಂದ ಹರಡುವ ಡೆಂಗ್ಯೂ, ನೀರಿನಿಂದ ಬರಬಹುದಾದ ಟೈಫಾಯಿಡ್, ಗ್ಯಾಸ್ಟ್ರೊಇಂಟೆಸ್ಟೈನಲ್ ಸೋಂಕುಗಳು ಹೆಚ್ಚು ಕಾಡುತ್ತವೆ. ಜೊತೆಗೆ ರೋಗ ನಿರೋಧಕ ವ್ಯವಸ್ಥೆಯ ಶಕ್ತಿ ಕೂಡ ಕುಂದುತ್ತದೆ.

ಹಾಗಾಗಿ ಮಳೆಗಾಲದಲ್ಲಿ ಸೂಕ್ತ ರೀತಿಯ ಆಹಾರ ಸೇವಿಸುವುದು ಬಹಳ ಮುಖ್ಯ. ಈ ಕುರಿತು ಮಾತನಾಡುವ ಡಾ. ರೋಹಿಣಿ ಪಾಟೀಲ್, ‘ಈ ಸಂದರ್ಭದಲ್ಲಿ ನೀವು ನಿಮ್ಮ ಆಹಾರದಲ್ಲಿ ಬಾದಾಮಿಗಳು ಮತ್ತು ಈ ಸೀಸನ್‌ನಲ್ಲಿ ಸಿಗುವ ತಾಜಾ ಹಣ್ಣುಗಳನ್ನು ಸೇವಿಸಬೇಕು’ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹಳ ಅ‍ವಶ್ಯವಾಗಿದೆ. ಈ ಕಾಲದಲ್ಲಿ ಏನೇನು ತಿನ್ನಬಹುದು ಎಂದು ಡಾ. ರೋಹಿಣಿ ತಿಳಿಸಿದ್ದಾರೆ, ಅವುಗಳನ್ನು ಈ ಕೆಳಗೆ ನೋಡೋಣ.

1. ಬಾದಾಮಿಗಳು: ಜೀವನದಲ್ಲಿ ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಕೂಡ ದೊಡ್ಡ ವ್ಯತ್ಯಾಸ ಉಂಟು ಮಾಡಬಹುದು. ನೀವು ಪ್ರತಿನಿತ್ಯ ಒಂದು ಹಿಡಿ ಬಾದಾಮಿ ತಿನ್ನಲು ಆರಂಭಿಸಿ. ಅದರಿಂದ ನಿಮ್ಮಲ್ಲಿ ಗಣನೀಯವಾದ ವ್ಯತ್ಯಾಸ ಉಂಟಾಗುತ್ತದೆ. ಬಾದಾಮಿಗಳು ತಾಮ್ರ, ಸತು, ಫೊಲೇಟ್ ಮತ್ತು ಕಬ್ಬಿಣದ ಅಂಶಗಳಂತಹ 15 ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ಜೊತೆಗೆ ಅವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.

2. ತಾಜಾ ಹಣ್ಣುಗಳು: ಸೇಬುಗಳು, ದಾಳಿಂಬೆಗಳು, ಬೆರ್ರಿಗಳು ಮತ್ತು ಬಾಳೆ ಹಣ್ಣುಗಳು ವಿಟಮಿನ್‌ಯುಕ್ತ ಹಣ್ಣುಗಳಾಗಿದ್ದು, ಈ ಕಾಲದಲ್ಲಿ ಸೇವಿಸಬಹುದಾಗಿದೆ. ವಿಶೇಷವಾಗಿ ಇವುಗಳು ವಿಟಮಿನ್ ಸಿ ಮತ್ತು ನಾರಿನಿಂದ ಕೂಡಿರುತ್ತವೆ. ಜೀರ್ಣಶಕ್ತಿ ಹೆಚ್ಚಿಸುತ್ತವೆ, ಮಲಬದ್ಧತೆ ತಡೆಯುತ್ತವೆ. ಈ ಹಣ್ಣುಗಳ ಜೊತೆಗೆ ಸಣ್ಣದಾಗಿ ಕತ್ತರಿಸಿದ ಬಾದಾಮಿಗಳನ್ನು ಸೇರಿಸುವುದು ಇನ್ನೂ ಒಳ್ಳೆಯದು.

3. ತರಕಾರಿಗಳ ಸೂಪ್ ಮತ್ತು ಹರ್ಬಲ್ ಚಹಾ: ದೇಹವನ್ನು ಬೆಚ್ಚಗಿರಿಸಲು ತರಕಾರಿಗಳ ಸೂಪ್ ಅಥವಾ ಹರ್ಬಲ್ ಚಹಾ ಸೇವನೆ ಮಾಡಬಹುದು. ಶುಂಠಿ, ತುಳಸಿ ಮತ್ತು ನಿಂಬೆ ಹುಲ್ಲಿನ ಚಹಾಗಳು ಸಿಕ್ಕರೆ ಇನ್ನೂ ಆಹ್ಲಾದಕರ. ಅದರಿಂದ ಆರೋಗ್ಯ ನೆರವು ಕೂಡ ದೊರೆಯುತ್ತದೆ.

ಏನೇನು ತಿನ್ನಬಾರದು?

1. ಜಂಕ್ ಫುಡ್: ಮಳೆಗಾಲದಲ್ಲಿ ಬೀದಿ ಬದಿಯ ಆಹಾರ ತಿನ್ನುವುದು ಸ್ವಲ್ಪ ರಿಸ್ಕಿ. ನೀರು ಕಲ್ಮಷವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಪಾಯವೂ ಹೆಚ್ಚು. ಹೆಚ್ಚು ಜಿಡ್ಡಿನ ಪದಾರ್ಥ ಸೇವಿಸುವುದೂ ಒಳ್ಳೆಯದಲ್ಲ.

2. ಹಳೆಯ ಅಥವಾ ಹಿಂದಿನ ದಿನದ ಆಹಾರ: ಮಳೆಗಾಲದಲ್ಲಿ ಹಿಂದಿನ ದಿನದ ಉಳಿದ ಆಹಾರದಲ್ಲಿ ಬ್ಯಾಕ್ಟೀರಿಯಾ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಅದರಿಂದ ಫುಡ್ ಪಾಯಿಸನ್ ಆಗಬಹುದಾಗಿದೆ. ಹಾಗಾಗಿ ಪಾತ್ರೆಗಳನ್ನು ಬಿಗಿಯಾಗಿ ಮುಚ್ಚಿ ರೆಫ್ರಿಜರೇಟರ್‌ನಲ್ಲಿ ಇಡುವುದು ಒಳ್ಳೆಯದು.

3. ಕಚ್ಚಾ ತರಕಾರಿಗಳು: ಮಳೆಗಾಲದಲ್ಲಿ ಹಸಿ ತರಕಾರಿ ಸೇವಿಸುವಾಗ ಬಹ‍ಳ ಹುಷಾರಾಗಿ ಇರಬೇಕು. ಥಂಡಿ ವಾತಾವರಣದಿಂದ ಅದರಲ್ಲಿ ಬ್ಯಾಕ್ಟೀರಿಯಾ ಮನೆ ಮಾಡಿಕೊಂಡಿರಬಹುದಾಗಿದೆ. ಸೊಪ್ಪು, ಎಲೆಕೋಸು ಮತ್ತು ಕೋಸುಗಳನ್ನು ಚೆನ್ನಾಗಿ ತೊಳೆದು, ಬೇಯಿಸಿ ಸೇವಿಸುವುದು ಒಳ್ಳೆಯದು.