ಸಾರಾಂಶ
ಪುಸ್ತಕ ಕೊಳ್ಳುತ್ತೇನೆ, ಆದರೆ ಓದುವುದಕ್ಕೆ ಪುರಸೊತ್ತಿಲ್ಲ ಅಂತ ಹೇಳುವವರು ನಿಮಗೂ ಸಿಕ್ಕಿರುತ್ತಾರೆ. ಈಗ ಪುಸ್ತಕ ಕೊಳ್ಳುವುದು ಸಮಸ್ಯೆಯಲ್ಲ. ವರ್ಷಕ್ಕೆ ಹತ್ತು ಸಾವಿರ ಪುಸ್ತಕಗಳು ಕನ್ನಡದಲ್ಲಿ ಮಾರುಕಟ್ಟೆಗೆ ಬರುತ್ತವೆ. ಅವುಗಳ ಪೈಕಿ ಹತ್ತು ಪುಸ್ತಕಗಳನ್ನು ಮಾಜಿ ಓದುಗರೆಲ್ಲರೂ ಕೊಂಡುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅಕ್ಷರದಿಂದ ದೂರ ಇರುವ ಪಾಪದಿಂದ ಪಾರಾಗಲು ಹವಣಿಸುತ್ತಾರೆ.
ಪುಸ್ತಕ ಕೊಂಡುಕೊಳ್ಳುವುದು ಕಷ್ಟವಲ್ಲ, ಓದುವುದು ಕಷ್ಟ ಎಂಬುದು ಈ ಕಾಲದ ಸಮಸ್ಯೆ. ಈ ಕಾಲಕ್ಕೇ ವಿಶಿಷ್ಟವಾದ ಸಮಸ್ಯೆ. ಪ್ರತಿಯೊಬ್ಬ ಓದುಗನ ಕಪಾಟಿನಲ್ಲೂ ಓದಿಸಿಕೊಳ್ಳಲು ಕಾಯುತ್ತಿರುವ ನೂರು ಪುಸ್ತಕಗಳಾದರೂ ಇರುತ್ತವೆ. ಅವುಗಳ ಜತೆಗೇ ಅರ್ಧ ಓದಿದ, ನಾಲ್ಕಾರು ಪುಟ ಓದಿದ ಪುಸ್ತಕಗಳೂ ಇರುತ್ತವೆ. ಹೀಗೆ ಪುಸ್ತಕಗಳನ್ನು ಓದದೇ ಇರುವುದು ಈ ಕಾಲದ ಸಮಸ್ಯೆ ಅಂತ ನಾವೇನೂ ಪಶ್ಚಾತ್ತಾಪ ಪಡಬೇಕಾಗಿಲ್ಲ.
1940ರಲ್ಲೇ ಮಾರ್ಟಿಮರ್ ಆ್ಯಡ್ಲರ್ ಮತ್ತು ಚಾರ್ಲ್ಸ್ ವ್ಯಾನ್ ಡೊರೆನ್ ಜಂಟಿಯಾಗಿ ‘ಹೌ ಟು ರೀಡ್ ಎ ಬುಕ್’ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದ್ದರು. ಅದೀಗ ಮರುಮುದ್ರಣಗೊಂಡು ಸಾಕಷ್ಟು ಜನಪ್ರಿಯವೂ ಆದಂತಿದೆ. ಸುಮಾರು ಐನೂರು ಪುಟಗಳ ವಿಸ್ತಾರದಲ್ಲಿ ಓದು ಹೇಗಿರಬೇಕು ಅನ್ನುವುದನ್ನು ಈ ಪುಸ್ತಕ ಚರ್ಚಿಸಿದೆ.
ಇದನ್ನು ಓದುತ್ತಿದ್ದರೆ, ಓದು ನಾವು ಅಂದುಕೊಂಡಷ್ಟು ಸರಳ ಅಲ್ಲ ಅನ್ನುವುದು ಥಟ್ಟನೆ ಹೊಳೆಯುತ್ತದೆ. ಓದು ಬರಹ ಎರಡೂ ಸಮಾನವಾದ ಕ್ರಿಯೆಗಳು. ಎರಡೂ ಸೃಜನಶೀಲ ಕಾರ್ಯಗಳೇ. ಬರಹಗಾರನಷ್ಟೇ ಓದುಗನೂ ಹದಗೊಂಡಿರದೇ ಹೋದರೆ ಓದಿನಿಂದ ಯಾವ ಪ್ರಯೋಜನವೂ ಇಲ್ಲ.
ಯಾವಾಗ ಬೇಕೋ ಆವಾಗ, ಏನು ಬೇಕೋ ಅದನ್ನು, ಎಲ್ಲಿ ಬೇಕೋ ಅಲ್ಲಿ ಓದುವುದನ್ನು ‘ಓದು’ ಎಂದು ಪರಿಗಣಿಸಲಿಕ್ಕಾಗದು. ಅದು ಹೆಚ್ಚೆಂದರೆ ಟೈಮ್ ಪಾಸ್ ಅಷ್ಟೇ. ಸಮಯ ಕಳೆಯುವುದಕ್ಕೆ ರೀಲ್ಸ್ ನೋಡುವುದನ್ನು ಸಿನಿಮಾ ನೋಡುವ ಅನುಭವಕ್ಕೆ ಹೇಗೆ ಹೋಲಿಸಲು ಸಾಧ್ಯವಿಲ್ಲವೋ, ದಾರಿಯಲ್ಲಿ ಸಿಕ್ಕ ಕುರುಕಲು ತಿಂಡಿ ಎಲ್ಲರೂ ಜತೆಗೆ ಕುಳಿತು ಮಾಡುವ ಊಟಕ್ಕೆ ಹೇಗೆ ಸಮಾನ ಅಲ್ಲವೋ ಹಾಗೆಯೇ ಓದಿನಲ್ಲೂ ನಿಜವಾದ ಓದು, ಸಮಯ ಕಳೆಯುವ ಓದು ಇರುತ್ತದೆ. ಇವೆರಡೇ ಅಲ್ಲ, ಓದಿನಲ್ಲಿ ಅನೇಕ ಥರದ ಓದುಗಳನ್ನು ಈ ಪುಸ್ತಕದ ಲೇಖಕರು ಗುರುತಿಸುತ್ತಾ ಹೋಗುತ್ತಾರೆ.
ತೊಡಗಿಸಿಕೊಂಡು ಓದುವುದು, ಮೊದಲ ಹಂತದ ಓದುಗ, ಎರಡನೆಯ ಹಂತದ ಓದುಗ, ಡಿಮ್ಯಾಂಡಿಂಗ್ ರೀಡರ್, ಪುಸ್ತಕಗಳನ್ನು ಹುಡುಕಿಕೊಂಡು ಹೋಗಿ ಓದುವುದು, ಎಕ್ಸ್-ರೇ ರೀಡಿಂಗ್, ಕಟು ವಿಮರ್ಶಕ ಓದುಗ- ಮುಂತಾದ ಓದುಗ ಪ್ರಬೇಧಗಳ ಜತೆಗೇ ಚರಿತ್ರೆ, ಗಣಿತ, ವಿಜ್ಞಾನ- ಹೀಗೆ ಬೇರೆ ಬೇರೆ ವಿಷಯಗಳ ಪುಸ್ತಕಗಳನ್ನೂ ಹೇಗೆ ಓದಬೇಕು ಅನ್ನುವುದನ್ನೂ ಈ ಪುಸ್ತಕ ಚರ್ಚಿಸುತ್ತದೆ.
ಈಗ ಒಳ್ಳೆಯ ಓದುಗರಾಗಲು ಏನು ಮಾಡಬೇಕು ಅಂದರೆ ಮೊದಲು ಈ ಪುಸ್ತಕವನ್ನು ಓದಬೇಕು.