ಸಾರಾಂಶ
ನರೇಂದ್ರ ರೈ ದೇರ್ಲ
ತೇಜಸ್ವಿಯವರ ಯಾವುದೇ ಕೃತಿಗಳಿಗೆ ಸುದೀರ್ಘ ಪ್ರವೇಶಿಕೆಗಳಿಲ್ಲ. ಸ್ವಯಂ ಲೇಖಕರೇ ಆಗಲಿ ಅಥವಾ ಬೇರೆ ಲೇಖಕರಿಂದಾಗಲೀ ಬರೆಸಿದ ಮುನ್ನುಡಿಯ ಭಾರವೂ ಅವರ ಕೃತಿಗಳಿಗಿಲ್ಲ. ಮುನ್ನುಡಿ ಇಲ್ಲದಿರುವುದು ಮಿತಿ ಎಂದು ಕೆಲವರು ಭಾವಿಸಿದರೆ ಮಿತಿಯಲ್ಲ, ಅದು ಅವರ ಪುಸ್ತಕಗಳ ಸಾಧ್ಯತೆ. ಕಾರಣ ಬರೆದಾದ ಮೇಲೆ ಆ ಕೃತಿ ಲೇಖಕನದ್ದಲ್ಲ, ಓದುಗರದ್ದು ಎಂಬುವುದು ತೇಜಸ್ವಿ ಇರಾದೆ.ನನಗೆ ಎಷ್ಟೋ ಬಾರಿ ಅನಿಸುತಿದೆ; ನಮ್ಮ ಹಳ್ಳಿಗಳಲ್ಲಿ ಇವನು ಅಪ್ಪನ ಹಾಗೆ, ಇವನು ಅಮ್ಮನ ಹಾಗೆ, ಇವನು ಥೇಟ್ ಅಜ್ಜನ ಹಾಗೆ, ಚಿಕ್ಕಪ್ಪನಂತೆ ಎಂಬ ನಮೂನೆ ಸೂಚನೆಗಳನ್ನು ಆರೋಪಿಸುವುದಿದೆ. ಎಷ್ಟೋ ಬಾರಿ ಅಪ್ಪ, ಅಮ್ಮ, ಅಕ್ಕ, ಅಣ್ಣ ಎಲ್ಲಾ ಸೇರಿ ನಾವು ಒಂದು ಸಮ್ಮಿಶ್ರಣದಂತೆ ಕಾಣಿಸುತ್ತೇವೆ. ಸೃಷ್ಟಿಯಲ್ಲಿ ಮನುಷ್ಯರೊಳಗಡೆ ಮನುಷ್ಯರಿದ್ದೇವೆ ಎಂದು ಭಾವಿಸುತ್ತೇವೆಯೇ ಹೊರತು ನಾವು ಈ ಪ್ರಕೃತಿಯ ಭಾಗ ಎಂದು ಭಾವಿಸುವುದೇ ಇಲ್ಲ.
ಈ ಭೂಮಿಯ ಮೇಲೆ ಕಾಡು ಮಾತ್ರ ಯಾವುದರ ಹಂಗು ಇಲ್ಲದೆ ಬದುಕನ್ನು ಬದುಕಲು ಸಾಧ್ಯವಾಗುವ ಜಾಗ. ತೇಜಸ್ವಿ ತಾನೂ ಬದುಕಿ ತಮ್ಮ ಪಾತ್ರಗಳನ್ನೂ ಕೂಡ ನಾಗರಿಕ ಜಗತ್ತಿನ ಸಂಬಂಧವಿಲ್ಲದ, ಹಂಗಿಲ್ಲದ ಈ ಕಾಡೊಳಗಡೆ ಬದುಕಿಸುವ ಪ್ರಯತ್ನವನ್ನು ಮಾಡುತ್ತಾರೆ. ಅಥವಾ ಅಂಥಾ ನೆಲೆಯಲ್ಲಿ ಬದುಕುವವರ ಸಹವಾಸವನ್ನು ಮಾಡುವ ಪ್ರಯತ್ನವನ್ನು ಮಾಡಿ ಒಂದು ನಿರುದ್ವಿಗ್ನ ಬದುಕನ್ನ ಬಾಳುತ್ತಾರೆ.ತೇಜಸ್ವಿ ಅವರ ಮೊತ್ತಮೊದಲ ಕೃತಿಯಾದ ‘ಕಾಡು ಮತ್ತು ಕ್ರೌರ್ಯ’ವನ್ನು ಪ್ರಕಟಿಸಬಾರದಿತ್ತು, ಅವರೇ ಬೇಡ ಎಂದು ಪ್ರಕಟಿಸದೇ ಇದ್ದಾಗ ಅವರು ಇಲ್ಲವಾದ ಮೇಲೆ ಪ್ರಕಟಿಸಿದ್ದು ಸರಿಯಲ್ಲ. ಆ ಕೃತಿ ಏನೇನೂ ಚೆನ್ನಾಗಿಲ್ಲ. ತೇಜಸ್ವಿ ಅವರ ಬಗ್ಗೆ ಇರುವ ಮುಂಚಿನ ಎಲ್ಲಾ ಗೌರವ, ಅಭಿಮಾನಿ ಅದನ್ನು ಓದಿದ ಮೇಲೆ ಕಳಚಿಕೊಳ್ಳುತ್ತಾನೆ ಎಂದು ಬಹಿರಂಗವಾಗಿಯೇ ಈ ಕೃತಿ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದವರಿದ್ದಾರೆ.
ಆ ಕಾದಂಬರಿಯ ಆರಂಭದ ಭಾಗ, ಮುಖ್ಯವಾಗಿ ಮೊದಲ ಮುದ್ರಣದಲ್ಲಿ ಕೆಲವೊಂದು ಅಕ್ಷರ ತಪ್ಪಿನಿಂದಾಗಿ ಭಾಗಶಃ ಬೌದ್ಧಿಕ ಮತ್ತು ತಾಂತ್ರಿಕ ಕಾರಣಕ್ಕಾಗಿ ಅಸಂಗತ ಎಂದು ಕಂಡರೂ ಉತ್ತರಾರ್ಧ ತೇಜಸ್ವಿ ಅವರ ಉಳಿದ ಕಾದಂಬರಿಗಳಿಗಿಂತ ಖಂಡಿತವಾಗಿ ಭಿನ್ನವಾಗಿದೆ. ಅದಕ್ಕಿಂತಲೂ ಹೆಚ್ಚು ತೇಜಸ್ವಿಯವರ ಮುಂದಿನ ಎಲ್ಲಾ ಸೃಜನಶೀಲ ಕೃತಿಗಳ ಒಳಸುಳಿಗಳು ಇಲ್ಲಿಂದಲೇ ವಿಕಸನಗೊಂಡದ್ದು ಎಂಬುವುದನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ತೇಜಸ್ವಿಯವರ ಉಳಿದ ಕಾದಂಬರಿ, ಕಥಾಸಂಕಲನ ಅಥವಾ ಪರಿಸರಕ್ಕೆ ಸಂಬಂಧಪಟ್ಟ ಇನ್ನಿತರ ಬರಹಗಳನ್ನು ಓದಿದ ಓದುಗ ಕಾಡು ಮತ್ತು ಕ್ರೌರ್ಯವನ್ನು ಓದಲೇಬೇಕಾಗುತ್ತದೆ.ಒಬ್ಬ ಬರಹಗಾರನ ಮೊದಲ ಕೃತಿಯ ಓದು ಮುಖ್ಯವಾಗುವುದು ಇದೇ ಕಾರಣಗಳಿಗೆ. ಈ ಕಾದಂಬರಿಯಯಲ್ಲಿ ಬರುವ ಭೌತಿಕ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಗುಮ್ಮುಡಲ ಹಕ್ಕಿಯ ಬಗ್ಗೆ ನಾನೊಂದು ಹೆಚ್ಚುವರಿ ಪೂರಕ ವಿಚಾರವನ್ನು ಸೇರಿಸಲೇಬೇಕು. ನಮ್ಮೂರಲ್ಲಿ ಇದನ್ನು ಗೂರ್ಮೆ ಎಂದು ಕರೆಯುತ್ತೇವೆ. ಈ ಹಕ್ಕಿ ವರ್ಷದಲ್ಲಿ ಒಂದು ಬಾರಿ ನಮ್ಮೂರಿನ ಕಣಿಯಾರು ಕಾಡಿನ ಅತ್ಯಂತ ಎತ್ತರದ ಬೊಲ್ಲೂರು ಮರಕ್ಕೆ ಬರುತ್ತದೆ. ಬಹು ಹಿಂದೆ ಮಳೆಗಾಲ ಮುಗಿದ ನಂತರ ನಮ್ಮೂರಿನ ನಿಪುಣ ರೈತ ಬೇಟೆಗಾರರು ಈ ಮರದ ಅಡಿಯಲ್ಲಿ ಗೂರ್ಮೆಯನ್ನು ಬೇಟೆಯಾಡಲು ಹೊಂಚುತ್ತಿದ್ದರು.
ಗೂರ್ಮೆ ಎತ್ತರದ ಬೊಲ್ಲೂರು ಮರದಿಂದ ಗುಂಡು ತಾಗಿ ಭೂಮಿಗೆ ಬಿದ್ದಾಗ ನೆಲದ ಮೇಲಿನ ಪಾದೆಕಲ್ಲಿಗೆ ತಾಗಿ ಸಿಡಿದು ಅದರ ರಕ್ತದಲ್ಲಿ ಎಣ್ಣೆಯಂತಹ ಕೊಬ್ಬು ಚೆಲ್ಲಿ ಹೋಗುವುದನ್ನು ನನ್ನೂರಿನ ಹಿರಿಯ ಬೇಟೆಗಾರರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಆ ಹಕ್ಕಿಯ ಬಗ್ಗೆ ನಮ್ಮ ಊರಲ್ಲಿ ನಾಟಿ ನೆಲತಜ್ಞರೊಬ್ಬರು ಹೇಳುತ್ತಿದ್ದ ಕಥೆ ತುಂಬಾ ರೋಚಕವಾಗಿದೆ. ಪಕ್ಷಿ ಜಗತ್ತಿನಲ್ಲಿ ಮೊಟ್ಟೆಗಳಿಗೆ ಕಾವು ಕೊಡುವ ಕೆಲಸವನ್ನು ಅಮ್ಮ ಪಕ್ಷಿ ಮಾಡುವುದು ಜೈವಿಕ ಕ್ರಮ. ಆದರೆ ತೇಜಸ್ವಿ ಹೇಳಿದ ಗುಮ್ಮಡಲ ಹಕ್ಕಿಯಲ್ಲಿ ಅಮ್ಮನ ಬದಲು ಅಪ್ಪ ಪಕ್ಷಿ ಮೊಟ್ಟೆಗಳ ಕಾವಿಗೆ ಕೂರುತ್ತದೆ. ಆಗ ಮೊಟ್ಟೆ ಮತ್ತು ಗಂಡನನ್ನು ಒಟ್ಟು ಸೇರಿಸಿ ಅಮ್ಮ ಪಕ್ಷಿ ಗೂಡು ಕಟ್ಟುತ್ತದೆ. ಒಳಗಡೆ ಗಾಳಿಯಾಡದ ಬಿಸಿ ಆವರಣ ಸೃಷ್ಟಿಯಾಗುತ್ತದೆ. ಹೊರಗಡೆ ಚಾಚಿದ ಗಂಡು ಪಕ್ಷಿಯ ಕೊಕ್ಕಿಗಷ್ಟೇ ಹೆಣ್ಣು ಪಕ್ಷಿ ಆಗಾಗ ಆಹಾರವನ್ನು ತಿನ್ನಿಸುತ್ತಿರುತ್ತದೆಯಂತೆ. ಮೊಟ್ಟೆ ಒಡೆದು ಮರಿಯಾಗುವ ದಿನ ಹತ್ತಿರ ಬರುತ್ತಿದ್ದಂತೆ ತಾಯಿ ಪಕ್ಷಿ ಈ ಗೂಡನ್ನು ಮುರಿಯುತ್ತದೆಯಂತೆ. ಆಗ ಒಳಗಡೆ ಇದ್ದ ಗಂಡನ ದೇಹಕ್ಕೆ ಬೆಳಕು ಗಾಳಿ ತಾಗದೆ ಪುಕ್ಕಗಳೆಲ್ಲ ಕೆಳಗಡೆ ಉದುರಿ ಆಗತಾನೇ ಮೊಟ್ಟೆಯೊಡೆಯುವ ಮರಿಗಳಿಗೆ ಹಾಸಿಗೆಯಾಗಿ ಪರಿವರ್ತನೆಯಾಗುತ್ತಿತ್ತಂತೆ!ಹೊರಗಡೆಯ ವಾತಾವರಣಕ್ಕೆ ತೆರೆದುಕೊಂಡ ಬೆತ್ತಲೆ ದೇಹಕ್ಕೆ ಒಂದೆರಡು ದಿನಗಳಲ್ಲಿ ಪುಕ್ಕ ಹುಟ್ಟಿಕೊಂಡು ಗಂಡು ಪಕ್ಷಿ ಮೊದಲು ಗೂಡಿನಿಂದ ಹಾರುತ್ತದೆ. ನಿಧಾನವಾಗಿ ಮರಿಗಳು ಅಪ್ಪನ ದಾರಿಯನ್ನು ಅವಲಂಬಿಸುತ್ತವೆ ಎನ್ನುವ ಸುಲಭದಲ್ಲಿ ನಂಬಲಾಗದ ಜೀವ ಜಗತ್ತಿಗೆ ಒಗಟಾಗಿರುವ ವಿಸ್ಮಯಕಾರಿಯಾಗಿರುವ ಈ ಕಥೆಯನ್ನು ಹೇಳಿದವರು ನಮ್ಮೂರಿನ ಜಾನಪದರು. ಈ ಕುರಿತು ಅನೇಕ ಜನ ಪಕ್ಷಿ ತಜ್ಞರನ್ನು ನಾನು ವಿಚಾರಿಸಿದ್ದೆ. ಇದ್ದರೂ ಇರಬಹುದು ಎನ್ನುತ್ತಾರೆ ಹೊರತು ಈ ಕಥೆಯನ್ನು ನಿರಾಕರಿಸಿದವರಾಗಲೀ ಒಪ್ಪಿಕೊಂಡವರಾಗಲೀ ನನಗೆ ಸಿಗಲಿಲ್ಲ. ಕಾಡು ಮತ್ತು ಕ್ರೌರ್ಯ ಕಾದಂಬರಿ ತೇಜಸ್ವಿ ಇರುವಾಗಲೇ ಪ್ರಕಟವಾಗಿರುತ್ತಿದ್ದರೆ ನಾನು ನೇರವಾಗಿ ಈ ವಿಸ್ಮಯದ ಬಗ್ಗೆ ತೇಜಸ್ವಿ ಅವರನ್ನೇ ಪ್ರಶ್ನಿಸುತ್ತಿದ್ದೆ.
ಅನೇಕ ಸಂದರ್ಭದಲ್ಲಿ ದಾಡಿ ಬಿಟ್ಟಿದ್ದ ತೇಜಸ್ವಿ ಕೂಡ ನನಗೆ ಮಲೆನಾಡಿನ ನಿಬಿಡ ಹಸಿರೊಳಗಡೆ ಎತ್ತರದ ಮರಗಳನ್ನು ಆಯ್ದು ಹಣ್ಣು ಹೊಂಚುವ ಬಲಿಷ್ಠ ಗೂರ್ಮೆ ಪಕ್ಷಿಯಂತೆಯೇ ಕಾಣುತ್ತಿದ್ದರು. ಅದೇ ಎತ್ತರದಿಂದ ಕೆಳಗಡೆ ಆವರಿಸಿದ ಭೂಮಿ ಮೇಲಿನ ಜೀವ ಜಗತ್ತನ್ನು, ಅವುಗಳ ಜೀವನ ವಿನ್ಯಾಸ ಆಗುಹೋಗುಗಳನ್ನೂ ವೀಕ್ಷಿಸುವ ಅವರಿಗಿದ್ದ ಅವಕಾಶ ಅಪಾರವಾದದ್ದು.ತೇಜಸ್ವಿಯವರ ಅರಣ್ಯ ನಡಿಗೆ ಜೇನು ನೊಣವನ್ನು ಹಿಂಬಾಳಿಸುವಷ್ಟು ಸೂಕ್ಷ್ಮವಾದದ್ದು. ಕಾಡಿಗೆ ಸಂಬಂಧಪಟ್ಟ ಹಾಗೆ ರೈತ ಮನಸ್ಸುಗಳಲ್ಲಿ ನೂರಾರು ನಂಬಿಕೆಗಳಿರುತ್ತವೆ. ಆಧುನಿಕ ಮನಸ್ಸುಗಳಿಗೆ ತಿಳಿಯದಂತಹ ಆ ನೆಲಶ್ರದ್ಧೆಗಳು ಅವರ ಪಾಲಿಗೆ ಹುಟ್ಟಿನಿಂದಲೇ ಬಂದವುಗಳು. ಇವತ್ತಿಗೂ ಮಲ್ನಾಡಿನಲ್ಲಿ ನುರಿತ ಈಡುಗಾರರು ತಾವು ಇಟ್ಟ ಗುರಿ ತಪ್ಪಬಹುದೆಂದು ಅಥವಾ ತಪ್ಪಿರಬಹುದೆಂದು ರಾಜಿಯಾಗಲಾರರು. ಬದಲಾಗಿ ಹಂದಿಯೋ ಕಾಡುಕೋಳಿಯೋ ಮೂಲವೋ ಈಡು ತಪ್ಪಿ ಹೋದರೆ ಅದಕ್ಕೊಂದು ನಂಬಿಕೆಯ ಕಥೆಯನ್ನು ಲೇಪಿಸುತ್ತಾರೆ. ಅದೊಂದು ರೀತಿ ಮಾಯಕದ ಕಥೆಯೇ ಆಗಿರುತ್ತದೆ.
ತೇಜಸ್ವಿಯವರ ಮೊದಲ ಕೃತಿ ಕಾಡು ಮತ್ತು ಕ್ರೌರ್ಯದಲ್ಲಿ ಕಾಣಿಸುವ ನೆಲ ಪಾತ್ರಗಳು ಕೂತಲ್ಲಿಂದಲೇ ಮರದ ಮೇಲಿನ ಜೋಡಿ ಪಕ್ಷಿಗಳನ್ನು ಯಾವ ಮಟ್ಟದಲ್ಲಿ ಗಣಿಸುತ್ತಾರೆ ಎಂದರೆ ಅವು ಎಷ್ಟು ಹಣ್ಣುಗಳನ್ನು ತಿನ್ನುತ್ತವೆ; ಗಂಡು ಯಾವುದು? ಹೆಣ್ಣು ಯಾವುದು? ದೂರ ಕೂತು ಬಾಯಿ ಅಗಲಿಸಿ ಹಣ್ಣು ತಿನ್ನಲು ಹಾತೊರೆಯುವ ಪಕ್ಷಿಯೇ ಗಂಡೆಂದು, ಅದಕ್ಕೆ ಹಣ್ಣು ತಂದು ಕೊಡುವ ಪಕ್ಷಿಯೇ ಹೆಣ್ಣೆಂದು ಭೂಮಿ ಮೇಲಿಂದಲೇ ಬಾಜಿ ಕಟ್ಟುವ ಪಕ್ಷಿ ಬೇಟೆಗಾರರು ಕಾಡು ಮತ್ತು ಕ್ರೌರ್ಯದಲ್ಲಿ ಸಿಗುತ್ತಾರೆ!ಬೇಟೆಗೆ ಕೂತ ಹೊಂಚುಗಾರ ತಾನು ಹೊಡೆಯಬೇಕಾದ ಪಕ್ಷಿ ಪ್ರಾಣಿಗಳ ಬಗ್ಗೆ ಇಷ್ಟೆಲ್ಲ ಯೋಚಿಸುತ್ತಿದ್ದಾನೆ ಎಂದರೆ ಅವನು ಖಂಡಿತ ಕೆನೆತ್ ಆ್ಯಂಡರ್ಸನ್, ಜಿಮ್ಮಿ ಕಾರ್ಬೆಟ್, ಕುವೆಂಪು, ಕೆದಂಬಾಡಿ ಜತ್ತಪ್ಪರೈ ಅಲ್ಲವೇ ಅಲ್ಲ, ಅದು ತೇಜಸ್ವಿ ಮತ್ತು ಅವರ ಪಾತ್ರಗಳಿಂದ ಮಾತ್ರ ಸಾಧ್ಯ .ಯಾಕೆಂದರೆ ಬೇಟೆಯ ದಾರಿಯಲ್ಲಿ, ಗಾಳದ ದಾರಿಯಲ್ಲಿ, ಫೋಟೋಗ್ರಫಿಯ ದಾರಿಯಲ್ಲಿ ಅವರದ್ದು ನಿಜವಾದ ಪರಿಸರ ಅಧ್ಯಯನದ ಧ್ಯಾನ. ತೇಜಸ್ವಿಯವರ ಎಲ್ಲಾ ಪಾತ್ರಗಳು ಪರಿಸರದ ಪರಿಕರಗಳನ್ನು ದಾಟಿಕೊಂಡು ಮುಟ್ಟಿಕೊಂಡು ಅನುಭವಿಸಿಕೊಂಡು ಹೋಗುವ ಅನುಸಂಧಾನದ ಜೀವ ಪಾತ್ರಗಳೇ.
ನಾಗರಿಕತೆಯಲ್ಲಿ ಸಾಗಿದ ಮನುಷ್ಯ ತಾನು ಕಲಿತ ಕಲಿಕೆ ಮತ್ತು ಸಮುದಾಯದತ್ತವಾಗಿ ಬದುಕಿಗೊಂದು ನಿಯಮಗಳನ್ನು ರೂಪಿಸಿಕೊಂಡಿರುತ್ತಾನೆ. ಹೀಗೆಯೇ ಮಾತನಾಡಬೇಕು, ವರ್ತಿಸಬೇಕು ಎಂಬ ನಿಯಮಗಳು ನಮ್ಮ ಸಾದಾಸೀದಾ ಬದುಕಿನಲ್ಲೂ ಇರುತ್ತದೆ. ಆದರೆ ಕಾಡು ಹಾಗಲ್ಲ, ಅಲ್ಲಿ ಆತ ಶಿಕ್ಷಿತ ಶಿಷ್ಟಾಚಾರದ ಆಚೆ ಮನುಷ್ಯ ಒಂದು ಅವ್ಯವಸ್ಥಿತ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಯಾವ ಮರದ ಬುಡದಲ್ಲಿ ಯಾವ ಬಳ್ಳಿ ಇರುತ್ತದೆ, ಯಾವ ಬಳ್ಳಿಗೆ ಯಾವ ಕೀಟ ಬರುತ್ತದೆ ಇದೊಂದು ರೀತಿ ಮನುಷ್ಯನ ಲಕ್ಷ್ಯಕ್ಕೆ ಸುಲಭಗ್ರಹ್ಯವಲ್ಲದ ನಿಗೂಢ ಸಂರಚನೆ. ಇಲ್ಲಿಯ ಯಾವ ನಡೆ ಕೂಡ ಮನುಷ್ಯ ಜೀವನ ವಿನ್ಯಾಸದಲ್ಲಿ ಇರುವುದಿಲ್ಲ. ಅವೆಲ್ಲವೂ ಕೂಡ ಪ್ರಕೃತಿ ರೂಪಿಸಿದ ಒಂದು ಸಾವಯವ ರಹಸ್ಯ ಬಂಧ. ತೇಜಸ್ವಿ ತಾನು ಮಾತ್ರವಲ್ಲದೆ ತನ್ನೆಲ್ಲ ಪಾತ್ರಗಳನ್ನು ಇದೇ ಕಾಡಿನ ಅರಾಜಕತೆಯಲ್ಲಿ ತೂರಿಸಿ ಅಲ್ಲಿಂದಲೇ ಕಥೆ ಹೇಳುತ್ತಾರೆ.ಈ ಕಾರಣಕ್ಕೇ ನಿಯಮಬದ್ಧ ಆಧುನಿಕರಿಗೆ ತೇಜಸ್ವಿ ಹೇಳುವ ಕಾಡು ಒಳಗಡೆಯ ಯಾವುದೇ ಕಥೆ ಸನ್ನಿವೇಶ ಭಾಗಗಳು ವಿಸ್ಮಯವಾಗಿ ಫ್ಯಾಂಟಸಿ ಥರ ಕಾಣಿಸಿಕೊಳ್ಳುತ್ತವೆ.