ಜಗನ್‌ ರೆಡ್ಡಿಯನ್ನು ಕೊಲಂಬಿಯಾದ ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ನಾಯ್ಡು

| Published : Jul 26 2024, 01:30 AM IST / Updated: Jul 26 2024, 08:19 AM IST

ಜಗನ್‌ ರೆಡ್ಡಿಯನ್ನು ಕೊಲಂಬಿಯಾದ ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ನಾಯ್ಡು
Share this Article
  • FB
  • TW
  • Linkdin
  • Email

ಸಾರಾಂಶ

ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಅವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೊಲಂಬಿಯಾದ ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಕೆ ಮಾಡಿದ್ದಾರೆ.

ವಿಜಯವಾಡ: ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಅವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೊಲಂಬಿಯಾದ ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಕೆ ಮಾಡಿದ್ದಾರೆ. ತನ್ಮೂಲಕ ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದ್ವೇಷದ ರಾಜಕೀಯ ಮಾಡುತ್ತಿದೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸುತ್ತಿರುವ ಜಗನ್‌ಗೆ ತಿರುಗೇಟು ಕೊಟ್ಟಿದ್ದಾರೆ.

ವಿಧಾನಸಭೆಯಲ್ಲಿ ಶ್ವೇತಪತ್ರ ಬಿಡುಗಡೆ ಮಾಡಿದ ನಾಯ್ಡು, ಆಂಧ್ರಪ್ರದೇಶ ಜಗನ್‌ ಆಳ್ವಿಕೆಯಲ್ಲಿ ದೇಶದ ಗಾಂಜಾ ರಾಜಧಾನಿಯಾಗಿತ್ತು. ಪ್ರತಿ ಗ್ರಾಮದಲ್ಲೂ ಸುಲಭವಾಗಿ ಗಾಂಜಾ ಸಿಗುತ್ತಿತ್ತು. ಒಮ್ಮೆಯಾದರೂ ಈ ಸಮಸ್ಯೆಯನ್ನು ಜಗನ್‌ ನಿವಾರಿಸಿದ್ದರೆ? ಅಧಿಕಾರದಲ್ಲಿದ್ದಾಗ ಜನರನ್ನು ವೈಎಸ್ಸಾರ್‌ ನಾಯಕರು ಭಯಭೀತಗೊಳಿಸುತ್ತಿದ್ದರು ಎಂದು ದೂರಿದರು.

ನಾನು ಈ ದೇಶದ ಹಿರಿಯ ರಾಜಕಾರಣಿ. ಜಗನ್‌ ಅಧಿಕಾರದಲ್ಲಿದ್ದಾಗ ಆಂಧ್ರದಲ್ಲಿದ್ದಂತಹ ಪರಿಸ್ಥಿತಿಯನ್ನು ನಾನೆಂದೂ ನೋಡಿಲ್ಲ. ಆಂಧ್ರದಲ್ಲಿ ನಡೆದಿದ್ದನ್ನು ನೋಡಿ ಜಗನ್‌ ಅವರನ್ನು ಯಾರಿಗಾದರೂ ಹೋಲಿಕೆ ಮಾಡುವುದಿದ್ದರೆ ಅದು ಡ್ರಗ್‌ ದೊರೆ ಪ್ಯಾಬ್ಲೋ ಎಸ್ಕೋಬಾರ್‌ ಜತೆ ಮಾತ್ರ ಎಂದು ಛೇಡಿಸಿದರು.

ಪ್ಯಾಬ್ಲೋ ಎಸ್ಕೋಬಾರ್‌ ಕೊಲಂಬಿಯಾದ ಮಾದಕ ವಸ್ತುಗಳ ಉಗ್ರಗಾಮಿ. ರಾಜಕೀಯ ಪ್ರವೇಶಿಸಿ, ಡ್ರಗ್ಸ್‌ ಮಾರಾಟ ದಂಧೆಯನ್ನೇ ಆರಂಭಿಸಿದ್ದ. ಆ ಕಾಲಕ್ಕೇ ಆತ 2.5 ಲಕ್ಷ ಕೋಟಿ ರು. ಗಳಿಸಿದ್ದ. ಅದು ಈಗಿನ ಮೊತ್ತಕ್ಕೆ 7.5 ಲಕ್ಷ ರು.ಗೆ ಸಮ. 1980ರಲ್ಲಿ ಆತ ವಿಶ್ವದ ನಂ.1 ಡ್ರಗ್‌ ದೊರೆಯಾಗಿದ್ದ ಎಂದು ಹೇಳಿದರು.

ಯಾರೇ ಆಗಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿಯೂ ಶ್ರೀಮಂತರಾಗಬಹುದು. ಟಾಟಾ, ರಿಲಯನ್ಸ್‌, ಅಂಬಾನಿಗಳ ಬಳಿಯೂ ಹಣವಿದೆ. ಆದರೆ ಅವರಿಗಿಂತಲೂ ಶ್ರೀಮಂತರಾಗಲು ಜಗನ್‌ ಯತ್ನಿಸಿದ್ದರು ಎಂದು ಆಪಾದಿಸಿದರು.