ಸಾರಾಂಶ
ನಗರದಲ್ಲಿ ಅನುಷ್ಠಾನಗೊಳಿಸುವ ಬೃಹತ್ ಮತ್ತು ಮೂಲಸೌಕರ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಹೆಸರಿನ ವಿಶೇಷ ಉದ್ದೇಶ ಸಂಸ್ಥೆ ರಚಿಸಿ ಸರ್ಕಾರ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಅನುಷ್ಠಾನಗೊಳಿಸುವ ಬೃಹತ್ ಮತ್ತು ಮೂಲಸೌಕರ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿ. (ಬಿ-ಸ್ಮೈಲ್) ಹೆಸರಿನ ವಿಶೇಷ ಉದ್ದೇಶ ಸಂಸ್ಥೆ ರಚಿಸಿ ಸರ್ಕಾರ ಆದೇಶಿಸಿದೆ.ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಕೈಗೊಳ್ಳಲು ಉದ್ದೇಶಿರುವ ಬೃಹತ್ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವುದು ಹಾಗೂ ಯೋಜನೆಗಳಿಗೆ ಅಗತ್ಯವಿರುವ ಆದಾಯ ಸಂಗ್ರಹದ ಹೊಣೆಯನ್ನು ಬಿ-ಸ್ಮೈಲ್‌ಗೆ ವಹಿಸಲಾಗಿದೆ. ಈಗಾಗಲೇ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಸಂಸ್ಥೆ ರಚಿಸಿದ ಮಾದರಿಯಲ್ಲಿ ಬಿ-ಸ್ಮೈಲ್ ರಚಿಸಲಾಗಿದೆ.
ಸಂಸ್ಥೆಗೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿದ್ದರೆ, ಬಿಬಿಎಂಪಿ ಮುಖ್ಯ ಆಯುಕ್ತರು ವ್ಯವಸ್ಥಾಪಕ ನಿರ್ದೇಶಕರಾಗಿರಲಿದ್ದಾರೆ. ಉಳಿದಂತೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು, ಬಿಬಿಎಂಪಿ ಮೇಯರ್, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷರು ನಿರ್ದೇಶಕರಾಗಿ, ಬಿಬಿಎಂಪಿ ಪ್ರಧಾನ ಎಂಜಿನಿಯರ್ ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಒಬ್ಬರು ಮಹಿಳೆಯೂ ಸೇರಿದಂತೆ ಮೂವರು ನಗರ ಯೋಜನಾ ತಜ್ಞರನ್ನು ನೂತನ ಸಂಸ್ಥೆಗೆ ಸರ್ಕಾರ ನಾಮನಿರ್ದೇಶಿತ ನಿರ್ದೇಶಕರನ್ನಾಗಿ ನೇಮಿಸಲಿದೆ.ಯಾವೆಲ್ಲ ಯೋಜನೆಗಳ ಅನುಷ್ಠಾನ?:
ರಾಜ್ಯ ಸರ್ಕಾರವು ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹1 ಲಕ್ಷ ಕೋಟಿ ಮೊತ್ತದ ಯೋಜನೆ ಅನುಷ್ಠಾನದ ಘೋಷಣೆ ಮಾಡಿದೆ. ಅದರ ಭಾಗಿ 147 ಕಿಮೀ ಉದ್ದದ ಪ್ರಮುಖ ರಸ್ತೆಗಳನ್ನು 1,700 ಕೋಟಿ ರು. ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದು, ₹40 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ₹3 ಸಾವಿರ ಕೋಟಿ ವೆಚ್ಚದಲ್ಲಿ ರಾಜಕಾಲುವೆ ಬಫರ್ ವಲಯದಲ್ಲಿ 300 ಕಿಮೀ ಉದ್ದದ ರಸ್ತೆ ನಿರ್ಮಾಣ, ₹660 ಕೋಟಿ ವೆಚ್ಚದಲ್ಲಿ 460 ಕಿಮೀ ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿ, 120 ಕಿಮೀ ಉದ್ದದ ಮೇಲ್ಸೇತುವೆ, ಗ್ರೇಡ್ ಸಪರೇಟರ್‌ಗಳ ನಿರ್ಮಾಣ ಸೇರಿದಂತೆ ಸ್ಕೈಡೆಕ್, ಮೆಟ್ರೋ ರೈಲು ಕಂ ರಸ್ತೆ ನಿರ್ಮಾಣದಂತಹ ಬೃಹತ್ ಯೋಜನೆಗಳು ನೂತನ ಬಿ-ಸ್ಮೈಲ್ ನಿಗಾದಲ್ಲಿ ಅನುಷ್ಠಾನಗೊಳ್ಳಲಿವೆ. ಜತೆಗೆ ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಅನುಷ್ಠಾನಗಳಲ್ಲಿರುವ ಯೋಜನೆಗಳೂ ನೂತನ ಸಂಸ್ಥೆಯ ವ್ಯಾಪ್ತಿಗೆ ಬರಲಿದೆ.ಆದಾಯಕ್ಕಾಗಿ ಹಲವು ಮಾರ್ಗಗಳು
ಈ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಅನುದಾನದ ಬಹುಪಾಲನ್ನು ರಾಜ್ಯ ಸರ್ಕಾರ ನೀಡಲಿದೆ. ಉಳಿದಂತೆ ಪ್ರೀಮಿಯಂ ಎಫ್‌ಎಆರ್, ಜಾಹೀರಾತು ಶುಲ್ಕ, ಮೇಲ್ಸೇತುವೆ ದಟ್ಟಣೆ ತೆರಿಗೆ, ಆಸ್ತಿ ಅಭಿವೃದ್ಧಿ ಆದಾಯಗಳಿಂದ ಸಂಗ್ರಹಿಸುವಂತೆ ಸರ್ಕಾರ ತನ್ನ ಆದೇಶದಲ್ಲಿ ಬಿ-ಸ್ಮೈಲ್‌ಗೆ ಸೂಚಿಸಿದೆ. ಅಲ್ಲದೆ, ಸಂಸ್ಥೆಯ ಈಕ್ವಿಟಿಯಲ್ಲಿ ಶೇ.90ರಷ್ಟು ಪಾಲು ರಾಜ್ಯ ಸರ್ಕಾರದ್ದಾಗಿದ್ದರೆ, ಉಳಿದ ಶೇ.10ರಷ್ಟು ಬಿಬಿಎಂಪಿಯ ಪಾಲಾಗಿದೆ ಎಂದೂ ತಿಳಿಸಲಾಗಿದೆ.