ಇಂದು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಘಟಿಕೋತ್ಸವ

| N/A | Published : May 06 2025, 01:53 AM IST / Updated: May 06 2025, 05:31 AM IST

ಸಾರಾಂಶ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವ ಮಂಗಳವಾರ (ಮೇ 6) ನಿಮ್ಹಾನ್ಸ್‌ ಸಭಾಂಗಣದಲ್ಲಿ ನಡೆಯಲಿದೆ  

 ಬೆಂಗಳೂರು : ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವ ಮಂಗಳವಾರ (ಮೇ 6) ನಿಮ್ಹಾನ್ಸ್‌ ಸಭಾಂಗಣದಲ್ಲಿ ನಡೆಯಲಿದ್ದು, ಶೇಕಡ 87.49ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ದಾಖಲೆಯ ಫಲಿತಾಂಶ ಎಂದು ವಿವಿಯ ಕುಲಪತಿ ಡಾ। ಬಿ.ಸಿ.ಭಗವಾನ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡ ಅವರು, ಈ ಘಟಿಕೋತ್ಸವದಲ್ಲಿ ಕೊಡಮಾಡಲಾಗುವ 109 ಚಿನ್ನದ ಪದಕಗಳನ್ನು 93 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. 63,982 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಪಿಇಎಸ್‌ ಫಾರ್ಮಸಿ ಕಾಲೇಜಿನ ಡಾ। ಬಿ.ಎಸ್‌. ಗಿರೀಶ್‌ ಆರು ಚಿನ್ನದ ಪದಕ ಪಡೆಯುವ ಮೂಲಕ ಗರಿಷ್ಠ ಚಿನ್ನದ ಪದಕ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ಉಜಿರೆಯ ಡಿ.ಎಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ಡಾ। ಗನ್ಯಾಶ್ರೀ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿನ್ನದ ಪದಕವು 22 ಕ್ಯಾರೆಟ್‌ನ 5 ಗ್ರಾಂ ತೂಕದ್ದಾಗಿದೆ ಎಂದು ತಿಳಿಸಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ 82 ಪಿಎಚ್‌.ಡಿ, 265 ಸೂಪರ್‌ ಸ್ಪೆಷಾಲಿಟಿ, 8,588 ಸ್ನಾತಕೋತ್ತರ ಪದವಿ, 6 ಸ್ನಾತಕೋತ್ತರ ಡಿಪ್ಲೊಮಾ, 615 ಫೆಲೋಶಿಪ್‌ ಕೋರ್ಸ್‌, 9 ಸರ್ಟಿಫಿಕೆಟ್‌ ಕೋರ್ಸ್‌ ಹಾಗೂ 54,517 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಮೂವರಿಗೆ ಗೌರವ ಡಾಕ್ಟರೆಟ್:

ನಗರದ ಸೆಂಟರ್‌ ಫಾರ್‌ ಹ್ಯೂಮನ್‌ ಜೆನೆಟಿಕ್ಸ್ ಕೇಂದ್ರದ ಮುಖ್ಯಸ್ಥ ಡಾ। ಎಚ್ ಶರತ್‌ಚಂದ್ರ, ಒಎಂಎಫ್‌ ಸರ್ಜನ್‌ ಡಾ। ಗಿರೀಶ್‌ ರಾವ್‌ ಮತ್ತು ನರರೋಗ ತಜ್ಞ ಡಾ। ಜಿ.ಟಿ.ಸುಭಾಷ್‌ ಅವರಿಗೆ ಗೌರವ ಡಾಕ್ಟರೆಟ್‌ ನೀಡಲಾಗುವುದು ಎಂದು ಭಗವಾನ್‌ ತಿಳಿಸಿದರು.

ಚಿನ್ನದ ಪದಕ ಪಡೆದವರು:

ಪಿಇಎಸ್‌ ಫಾರ್ಮಸಿ ಕಾಲೇಜಿನ ಫಾರ್ಮಾ ಡಿ. ಕೋರ್ಸ್‌ನ ಡಾ। ಬಿ.ಎಸ್‌.ಗಿರೀಶ್‌ 6 ಚಿನ್ನದ ಪದಕ, ಉಜಿರೆಯ ಡಿ.ಎಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ। ಗನ್ಯಾಶ್ರೀ (ಆಯುಷ್‌) 4, ಶಿವಮೊಗ್ಗ ಶರಾವತಿ ದಂತ ಕಾಲೇಜಿನ ಡಾ। ಪ್ರಕೃತಿ ಸಿ.ಪಾಟೀಲ್‌ 3 ಚಿನ್ನ ಮತ್ತು 4 ನಗದು ಬಹುಮಾನ, ನೈಟೆಂಗೇಲ್‌ ನರ್ಸಿಂಗ್‌ ಕಾಲೇಜಿನ ಅಲೀನಾ ಜೋಸ್‌ (ಬಿಎಸ್‌ಸಿ ನರ್ಸಿಂಗ್‌) 3, ಬೆಂಗಳೂರು ಗ್ರಾಮಾಂತರ ಪರಿಪೂರ್ಣ ಸನಾತನ ಆಯುರ್ವೇದ ವೈದ್ಯಕೀಯ ಕಾಲೇಜು ಡಾ। ನಮಿತಾ (ಆಯುಷ್‌), ಬೆಂ.ನಗರ ಈಸ್ಟ್‌ ವೆಸ್ಟ್‌ ಕಾಲೇಜ್‌ ಆಫ್‌ ಫಾರ್ಮಸಿಯ ಎಂ.ಹರ್ಷಿತಾ (ಬಿ.ಫಾರ್ಮ), ಮಂಗಳೂರಿನ ಕಣಚೂರು ಕಾಲೇಜ್‌ ಆಫ್‌ ಫಿಜಿಯೋಥೆರಪಿ ಅಶ್ಮಿತಾ ಶ್ರೇಷ್ಠ (ಬಿ.ಪಿ.ಟಿ.ಕೋರ್ಸ್‌), ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ರಾಚೆಲ್‌ ಮೋರೆಸ್‌ (ಬಿ.ಎಸ್ಸಿ ಅಲೈಡ್‌ ಹೆಲ್ತ್‌ ಸೈನ್ಸ್‌) ಈ ಮೂರು ವಿದ್ಯಾರ್ಥಿಗಳು ತಲಾ 2 ಚಿನ್ನದ ಪದಕವನ್ನು ಪಡೆದಿದ್ದಾರೆ.

ವಿವಿ ರಾಮನಗರ ಕ್ಯಾಂಪಸ್‌ ಮುಂದಿನ ವರ್ಷ ಕಾರ್ಯಾರಂಭ?

ಬೆಂಗಳೂರು: ಸುಮಾರು ₹600 ಕೋಟಿ ವೆಚ್ಚದಲ್ಲಿ ರಾಮನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಮುಂದಿನ ವರ್ಷದ ಏಪ್ರಿಲ್‌ ವೇಳೆಗೆ ಸಿದ್ಧವಾಗುವ ವಿಶ್ವಾಸವಿದೆ ಎಂದು ವಿವಿಯ ಕುಲಪತಿ ಡಾ। ಬಿ.ಸಿ.ಭಗವಾನ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾಮಗಾರಿಗೆ ₹300 ಕೋಟಿ ಬಿಡುಗಡೆ ಆಗಿದೆ. ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಕೋರಲಾಗಿದೆ ಎಂದು ಭಗವಾನ್‌ ತಿಳಿಸಿದರು.

ರಾಜೀವ ಗಾಂಧಿ ಆರೋಗ್ಯ ವಿವಿಯು ₹1,400 ಕೋಟಿ ಹೊಂದಿದೆ. ಅದಕ್ಕೆ ತಕ್ಕಂತೆ ಯೋಜನೆಗಳನ್ನು ಸಹ ರೂಪಿಸಿದೆ. ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷೆ ಮಾಡುವುದಿಲ್ಲ. ಕಾಲೇಜುಗಳಿಂದ ಸಂಗ್ರಹವಾಗುವ ಶುಲ್ಕದಿಂದಲೇ ವಿವಿ ನಡೆಯುತ್ತಿದೆ. 2025-26ನೇ ಸಾಲಿಗೆ ರಾಮನಗರ ಮತ್ತು ಕನಕಪುರ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.