ಸಾರಾಂಶ
ಆರೋಗ್ಯ ಇಲಾಖೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಗಾಗಿಯೇ ಇವರನ್ನು ತರಬೇತಿ ಮಾಡಲಾಗುತ್ತದೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ನಂತರ ಮೆರಿಟ್ ಆಧಾರದಲ್ಲಿ ಈ ತರಬೇತಿಗೆ ಸೇರ್ಪಡೆಯಾಗಿರುತ್ತಾರೆ.
ಕೊಪ್ಪಳ:
ರಾಜ್ಯಾದ್ಯಂತ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದ್ದು, ತರಬೇತಿ ಪಡೆಯುತ್ತಿರುವವರು ಆತಂಕಗೊಂಡಿದ್ದಾರೆ.ನಾವು ಈಗಾಗಲೇ ನಾಲ್ಕಾರು ತಿಂಗಳಿಂದ ತರಬೇತಿ ಪಡೆಯುತ್ತಿದ್ದೇವೆ. ಇನ್ನೇನು ಒಂದೂವರೆ ವರ್ಷವಾದರೆ ನಮ್ಮ ಕೋರ್ಸ್ ಪೂರ್ಣಗೊಳ್ಳುತ್ತದೆ. ಇಂಥ ಸ್ಥಿತಿಯಲ್ಲಿ ತರಬೇತಿ ಕೇಂದ್ರ ಮುಚ್ಚುವುದು ಎಷ್ಟು ಸರಿ ಎನ್ನುವುದು ತರಬೇತಿ ಪಡೆಯುತ್ತಿರುವ ಮಹಿಳಾ ಅಭ್ಯರ್ಥಿಗಳ ಆಕ್ಷೇಪ.
ಆರೋಗ್ಯ ಇಲಾಖೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಗಾಗಿಯೇ ಇವರನ್ನು ತರಬೇತಿ ಮಾಡಲಾಗುತ್ತದೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ನಂತರ ಮೆರಿಟ್ ಆಧಾರದಲ್ಲಿ ಈ ತರಬೇತಿಗೆ ಸೇರ್ಪಡೆಯಾಗಿರುತ್ತಾರೆ. ಈಗ ಈ ತರಬೇತಿಯನ್ನೇ ಸ್ಥಗಿತಗೊಳಿಸುತ್ತಿರುವುದು ಎಷ್ಟು ಸರಿ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.ಪರ್ಯಾಯ ಅವಕಾಶ:
ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳು ಇವೆ. ಇಲ್ಲಿ ಸಾವಿರಾರು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈಗ ರಾಜ್ಯ ಸರ್ಕಾರ ಈ ತರಬೇತಿ ಕೇಂದ್ರ ಮುಚ್ಚಿ, ಇಲ್ಲಿರುವ ಅಭ್ಯರ್ಥಿಗಳನ್ನು ಜಿಎನ್‌ಎಂ ಕೋರ್ಸ್‌ಗೆ ವರ್ಗಾವಣೆಯಾಗುವಂತೆ ಆದೇಶ ಹೊರಡಿಸಿದೆ. ಯಾರಿಗೆ ಆಸಕ್ತಿ ಇದೆಯೋ ಅವರು ಸೇರಿಕೊಳ್ಳಬಹುದು ಎಂದು ಹೇಳಿದೆ. ಆದರೆ, ವಾಸ್ತವದಲ್ಲಿಯೇ ಜಿಎನ್‌ಎಂ ಸೇರುವುದಕ್ಕೆ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲ. ಎಎನ್‌ಎಂ ತರಬೇತಿ ಕೇಂದ್ರದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಬಹುತೇಕರು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದವರೇ ಇದ್ದಾರೆ. ಜಿಎನ್‌ಎಂ ಆಂಗ್ಲ ಮಾಧ್ಯಮದಲ್ಲಿ ಇರುವುದರಿಂದ ನಮಗೆ ಅಲ್ಲಿಗೆ ಹೋಗಲು ಆಗುವುದಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಈ ಕುರಿತು ಎಎನ್‌ಎಂ ತರಬೇತಿ ಕೇಂದ್ರದ ಪ್ರಾಚಾರ್ಯರ ಮೂಲಕ ಒತ್ತಾಯ ಮಾಡಿ, ವಿದ್ಯಾರ್ಥಿಗಳನ್ನು ಜಿಎನ್‌ಎಂಗೆ ಸೇರಿಸಲು ಒತ್ತಡ ಹಾಕುತ್ತಿರುವುದು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ತರಬೇತಿ ಪಡೆಯುವ ವೇಳೆಯಲ್ಲಿ ಕೇಂದ್ರ ಮುಚ್ಚುವುದು ಎಷ್ಟು ಸರಿ ಎನ್ನುವುದಕ್ಕೆ ಯಾರ ಬಳಿಯೂ ಉತ್ತರ ಇಲ್ಲ.ತರಬೇತಿ ಕೇಂದ್ರವನ್ನು ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಎಎನ್‌ಎಂ ವಿದ್ಯಾರ್ಥಿಗಳಿಗೆ ಜಿಎನ್‌ಎಂ ಸೇರಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ಸರ್ಕಾರದ ಹಂತದಲ್ಲಿ ಆಗಿರುವಂತಹದ್ದು.
ಹೆಸರು ಹೇಳದ ಅಧಿಕಾರಿ