ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಅತಿದೊಡ್ಡ ಟೆಕ್ನಾಲಜಿ ಪಾರ್ಕ್ ಸೇರಿದಂತೆ ಅನೇಕ ಐಟಿ-ಬಿಟಿ ಕಂಪನಿಗಳು ಇರುವ ನಾಗವಾರ ರಿಂಗ್ ರಸ್ತೆಯಲ್ಲೇ ಬೀದಿ ದೀಪಗಳು ಇಲ್ಲದಿರುವುದಕ್ಕೆ ಸಾರ್ವಜನಿಕರು ತೀವ್ರವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಟೆಕ್ಕಿಯೊಬ್ಬರು, ‘ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್‌ವರೆಗಿನ ರಸ್ತೆಗೆ ಕತ್ತಲೆ ಆವರಿಸಿದೆ. ಬೀದಿ ದೀಪಗಳ ಬೆಳಕು ಇಲ್ಲದೇ ಗೋಚರತೆ ಶೂನ್ಯವಾಗಿದೆ. ಇದು ಶೇ.100ರಷ್ಟು ಅಪಾಯಕಾರಿ. ದೇಶದ ಮೂರನೇ ಅತಿ ದೊಡ್ಡ ಆರ್ಥಿಕತೆಯ ದೇಶದ ಐಟಿ ರಾಜಧಾನಿಯಲ್ಲಿ ಇಂತಹ ಪರಿಸ್ಥಿತಿ ಇರುವುದು ನಂಬಲು ಅಸಾಧ್ಯ. ಇದೇನು ಯಾವುದೋ ಹಳ್ಳಿಯಲ್ಲ’ ಎಂದು ಟೀಕಿಸಿದ್ದಾರೆ.
ವಿಡಿಯೋದಲ್ಲಿ ಕೇವಲ ವಾಹನಗಳ ಬೆಳಕು ಮಾತ್ರ ಇದ್ದು ರಸ್ತೆ ಬದಿಯ ವಿದ್ಯುದ್ದೀಪಗಳು ಉರಿಯುತ್ತಿಲ್ಲ. ವಿಡಿಯೊಗೆ ಪ್ರತಿಕ್ರಿಯಿಸಿರುವ ಪಾಲ್ಗುಣ ಎಂಬುವರು, ‘ರಿಂಗ್ ರಸ್ತೆಯಲ್ಲಿ ಭದ್ರಪ್ಪ ಲೇಔಟ್ ದಾಟುತ್ತಿದ್ದಂತೆ ಕತ್ತಲೆ ಆವರಿಸುತ್ತದೆ’ ಎಂದಿದ್ದಾರೆ.‘2026ರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿರುವ ಎಷ್ಟು ಬೀದಿ ದೀಪಗಳು ನಿಜವಾಗಿಯೂ ಉರಿಯುತ್ತಿವೆ ಎಂದು ತಿಳಿದುಕೊಂಡರೇ ಚೆನ್ನಾಗಿರುತ್ತದೆ. ಏಕೆಂದರೆ, ನಗರದ ಒಳಭಾಗದಲ್ಲಿನ ರಸ್ತೆಗಳ ಬೀದಿ ದೀಪಗಳು ಸರಿಯಾಗಿ ನಿರ್ವಹಣೆಯಾಗುತ್ತಿದ್ದರೆ ಅದೊಂದು ಅದ್ಭುತವೆ ಸರಿ. ಗ್ರಾಮಸಭೆಯವರಿಗೆ 13 ದಶಲಕ್ಷ ಜನರ ನಿರ್ವಹಣೆಯ ಹೊಣೆ ನೀಡಲಾಗಿದೆ’ ಎಂದು ಎಸ್.ವೆಂಕಟ್ ಎಂಬುವರು ಟೀಕಿಸಿದ್ದಾರೆ.
‘ಬೆಸ್ಕಾಂಗೆ ಬಿಲ್ ಪಾವತಿಸಿರುವುದಿಲ್ಲ. ಅದಕ್ಕಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುತ್ತಾರೆ’ ಎಂದು ಮತ್ತೊಬ್ಬರು ಜಿಬಿಎ ಕಾಲೆಳೆದಿದ್ದಾರೆ.
ಮೈಸೂರು ರಸ್ತೆಯಲ್ಲೂ ಇಲ್ಲ!: ನಗರದ ಪ್ರಮುಖ ಮತ್ತು ಅತಿ ದಟ್ಟಣೆಯ ರಸ್ತೆಗಳಲ್ಲಿ ಒಂದಾಗಿರುವ ಮೈಸೂರು ರಸ್ತೆಯಲ್ಲೂ ಬೀದಿ ದೀಪಗಳು ಕೆಲಸ ಮಾಡುತ್ತಿಲ್ಲ. ಮೈಸೂರು ರಸ್ತೆಯ ಫ್ಲೈಓವರ್ ನಂತರ ಗೌರಿಪಾಳ್ಯ ಸಿಗ್ನಲ್‌ನಿಂದ ಸ್ಯಾಟಲೈಟ್ ಬಸ್ ನಿಲ್ದಾಣದವರೆಗಿನ ಮಾರ್ಗದಲ್ಲಿ ಶೇ.90ಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳಲ್ಲಿ ದೀಪ ಉರಿಯುವುದಿಲ್ಲ. ವಾಹನಗಳ ಹೆಡ್ ಲೈಟ್ ಮತ್ತು ಅಂಗಡಿ ಮಳಿಗೆಗಳಲ್ಲಿ ಹಾಕಿರುವ ವಿದ್ಯುದ್ದೀಪಗಳೇ ಜನರಿಗೆ ಆಸರೆಯಾಗಿದೆ. ವಾಹನಗಳ ಬೆಳಕು ಇಲ್ಲದಿದ್ದರೆ ಮೈಸೂರು ರಸ್ತೆಗೆ ಕಗ್ಗತ್ತಲು ಆವರಿಸುತ್ತದೆ.
ದುರಂತವೆಂದರೆ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದ ಎದುರು ಮತ್ತು ಅಕ್ಕ ಪಕ್ಕದಲ್ಲಿಯೂ ಅನೇಕ ವಿದ್ಯುತ್ ಕಂಬಗಳಲ್ಲೂ ದೀಪಗಳು ಉರಿಯುವುದಿಲ್ಲ.