ಮೆಟ್ರೋ, ಟನಲ್‌ ರಸ್ತೆಗೆ ಹೆಬ್ಬಾಳದ ಜಾಗ ವಶ ಖಚಿತ : ಸರ್ಕಾರ ಸ್ಪಷ್ಟನೆ

| N/A | Published : May 06 2025, 01:50 AM IST / Updated: May 06 2025, 05:33 AM IST

Karnataka Deputy Chief Minister DK Shivakumar (Photo/ANI)
ಮೆಟ್ರೋ, ಟನಲ್‌ ರಸ್ತೆಗೆ ಹೆಬ್ಬಾಳದ ಜಾಗ ವಶ ಖಚಿತ : ಸರ್ಕಾರ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋಗಾಗಿ ಹೆಬ್ಬಾಳದ ಭೂಮಿ ಅಗತ್ಯವಿದ್ದು, ಜಮೀನನ್ನು ಪೂರ್ಣವಾಗಿ ಕೊಡಲು ಸಾಧ್ಯವಿಲ್ಲ. ನಿಯಮಾನುಸಾರ ಪರಿಹಾರ ನೀಡಲು ಸಿದ್ಧವಿರುವುದಾಗಿ ಖಾಸಗಿ ಕಂಪನಿಗೆ ಸರ್ಕಾರದ ಉನ್ನತ ಮಟ್ಟದ ಸಭೆ ತಿಳಿಸಿದೆ.

  ಬೆಂಗಳೂರು : ನಮ್ಮ ಮೆಟ್ರೋದ ಉದ್ದೇಶಿತ ಮಲ್ಟಿ ಮಾಡಲ್‌ ಹಬ್‌ ಹಾಗೂ ಟನಲ್‌ ರಸ್ತೆ ಯೋಜನೆಗಳಿಗಾಗಿ ಹೆಬ್ಬಾಳದ ಭೂಮಿ ಅಗತ್ಯವಿದ್ದು, ಜಮೀನನ್ನು ಪೂರ್ಣವಾಗಿ ಕೊಡಲು ಸಾಧ್ಯವಿಲ್ಲ. ನಿಯಮಾನುಸಾರ ಪರಿಹಾರ ನೀಡಲು ಸಿದ್ಧವಿರುವುದಾಗಿ ಖಾಸಗಿ ಕಂಪನಿಗೆ ಸರ್ಕಾರದ ಉನ್ನತ ಮಟ್ಟದ ಸಭೆ ತಿಳಿಸಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಲೇಕ್‌ವ್ಯೂ ಟೂರಿಸಂ ಕಂಪನಿಗಾಗಿ ಸ್ವಾಧೀನ ಮಾಡಿಕೊಂಡಿದ್ದ ಹೆಬ್ಬಾಳದ 45 ಎಕರೆ ಜಮೀನು ಭೂಮಿ ಹಸ್ತಾಂತರ ಸಂಬಂಧ ಬಿಎಂಆರ್‌ಸಿಎಲ್‌, ಬಿಬಿಎಂಪಿ, ಕೆಐಎಡಿಬಿ ಜತೆಗಿನ ಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ.

ಕಂಪನಿಗೆ ಜಮೀನಿನ ಪೂರ್ಣ ಮೊತ್ತದ ಬದಲು ಎಫ್‌ಎಆರ್‌ (ಫ್ಲೋರ್‌ ಏರಿಯಾ ರೇಷ್ಯೋ) ಅಥವಾ ಟಿಡಿಆರ್‌ ಮೂಲಕ ಪರಿಹಾರ ಕಲ್ಪಿಸುವ ಬಗ್ಗೆ ಪ್ರಸ್ತಾಪವಾಗಿದೆ. ಅಂತಿಮವಾಗಿ ಸಮಸ್ಯೆ ಇತ್ಯರ್ಥಕ್ಕಾಗಿ 8-10 ದಿನಗಳಲ್ಲಿ ಇನ್ನೊಂದು ಸಭೆ ಕರೆಯಲು ನಿರ್ಧರಿಸಲಾಯಿತು.

ಸಭೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೆಬ್ಬಾಳ ಜಂಕ್ಷನ್ ಬಹಳ ಪ್ರಮುಖ ಜಾಗ. ಇಲ್ಲಿ ಮೆಟ್ರೋ ಹಾಗೂ ಟನಲ್ ರಸ್ತೆಗೆ ಭೂಮಿ ಅವಶ್ಯವಿದೆ. ಅಗತ್ಯವಿರುವ ಜಾಗವನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಾವು ಯೋಜನೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ಹಾಗೂ ಟನಲ್ ರಸ್ತೆ ಅಧಿಕಾರಿಗಳು ಸೇರಿ ಇದರ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ ಎಂದರು.

ಸರ್ಕಾರಿ ನಿಯಮಾನುಸಾರ ಟಿಡಿಆರ್ ಅಥವಾ ಎಫ್‌ಎಆರ್ ಮೂಲಕ ಪರಿಹಾರ ನೀಡಲು ಸಿದ್ಧ. ನಾವು ಈ ಜಾಗ ಬಿಟ್ಟು ಕೊಡಲು ಸಿದ್ದವಿಲ್ಲ‌. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದ್ದು, ಇದಕ್ಕೆ ಅಗತ್ಯವಿರುವ ಜಾಗದ ವಿಚಾರವಾಗಿ ಮುಂದಿನ ಸಭೆಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.---

8-10 ದಿನಗಳಲ್ಲಿ ಇತ್ಯರ್ಥ:

ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, 45 ಎಕರೆ ಜಮೀನು ಸ್ವಾಧೀನ ವಿಚಾರದಲ್ಲಿ ಇನ್ನು ಎಂಟು - ಹತ್ತು ದಿನಗಳಲ್ಲಿ ಬಗೆಹರಿಯಲಿದೆ ವಿಶ್ವಾಸ ವ್ಯಕ್ತಪಡಿಸಿದರು. ಜಮೀನಿಗೆ ಪೂರ್ಣ ಮೊತ್ತ ಕೊಡಲು ಆಗಲ್ಲ. ಅದರ ಬದಲು ಎಫ್‌ಎಆರ್‌ ಕೊಡಲಾಗುವುದು. ಹಣಕಾಸಿನ ಯಾವುದೇ ಸಮಸ್ಯೆ ಆಗಲಾರದು. ಎರಡೂ ಯೋಜನೆಗಳಿಗೆ ಅಗತ್ಯವಾದ ಭೂಮಿ ಸಿಗಲಿದೆ ಎಂದು ತಿಳಿಸಿದರು.

8 ತಿಂಗಳಲ್ಲಿ 3ನೇ ಸಭೆ:

ಈ ಮೂಲಕ ಕಳೆದ ಎಂಟು ತಿಂಗಳಲ್ಲಿ ಹೆಬ್ಬಾಳ ಜಮೀನು ಮರು ಪಡೆಯುವ ಸಂಬಂಧ ನಡೆದ ಮೂರನೇ ಸಭೆ ನಡೆದಿದೆ. ಆದರೆ, ಅಂತಿಮ ತೀರ್ಮಾನಕ್ಕಾಗಿ ಇನ್ನೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬಿಬಿಎಂಪಿ ಆಡಳಿತಾಧಿಕಾರಿಗಳು ತಮ್ಮ ಯೋಜನೆಗಳಿಗೆ ಬೇಕಾದ ಭೂಮಿಯ ಬಗ್ಗೆ ವಿವರ ಹಾಗೂ ಲೆಕ್‌ವ್ಯೂ ಎಸ್‌ಯುಸಿ ಪ್ರತಿನಿಧಿಗಳು ತಮಗೆ ಬೇಕಾದ ಭೂಮಿಯ ಪ್ರಸ್ತಾಪವನ್ನ ಸಲ್ಲಿಸಿದರು. ಸದ್ಯ ಭೂಮಿ ವಶದಲ್ಲಿರುವ ಕೆಐಎಡಿಬಿ ಅಧಿಕಾರಿಗಳು ಭೂಸ್ವಾದೀನ, ಪರಿಹಾರ ಹಾಗೂ ಹಸ್ತಾಂತರ ವಿಚಾರದಲ್ಲಿ ಕಾನೂನು ತೊಡಕಿನ ಕುರಿತು ವಿವರಿಸಿದರು.

ಈ ಹಿಂದೆ ಬಿಎಂಆರ್‌ಸಿಎಲ್ ತನಗೆ ಬೇಕಾದ 45 ಎಕರೆಗಾಗಿ ಪ್ರತಿ ಎಕರೆಗೆ ₹12.10 ಕೋಟಿ ಪಾವತಿಸುವುದಾಗಿ ಹೇಳಿತ್ತು.